ಚುನಾವಣೆ ಎಂಬುದು ಎಲ್ಲಿಯವರೆಗೆ ಬಂದು ತಲುಪಿದೆ ಎಂದರೆ ಪರಸ್ಪರ ಕೆಸರೆರಚಾಟ ಇಲ್ಲದೇ ಚುನಾವಣೆಯ ಬಂಡಿಯೇ ಸಾಗದು ಎಂಬಂತಾಗಿದೆ. ಅಷ್ಟೇ ಅಲ್ಲ. ಚುನಾವಣ ತಂತ್ರ ಎನ್ನುವ ಲೆಕ್ಕದಲ್ಲಿ “2 ಮತ್ತು 2” ಎಂಬುದು ಕೇವಲ ನಾಲ್ಕೇ ಅಲ್ಲ, 222 ಆಗಬಹುದು..222 ಮಿಲಿಯನ್ ಸಹ ಆಗಬಹುದು ಎಂಬಂತಾಗಿ ಹೋಗಿದೆ. ಇದು ಏನೂ ಆಗಬಹುದು ಎಂಬ ಹಂತಕ್ಕೇ ಮುಗಿದಿಲ್ಲ. ಎಲ್ಲವೂ ಆಗುತ್ತದೆ ಎಂಬ ನಿರ್ಧಾರಕ್ಕೆ ಬಂದಾಗಿದೆ. ವಿಶೇಷವೆಂದರೆ ಪ್ರತೀ ರಾಜ ಕಾರಣಿಯೂ ಇವೆಲ್ಲವನ್ನೂ ಮಾಡುವುದು ತಮ್ಮ ಕ್ಷೇತ್ರದ ಮತದಾರರ ಹೆಸರಿನಲ್ಲೇ !
ಒಂದು ಕಡೆಯಿಂದ ಇನ್ನೊಂದು ಕಡೆಯಿಂದ ಹಾರಲು ನಿರ್ಧರಿಸುವ ಹಲವರು ಹಾರುವ ಜಾಗವನ್ನು ಗೊತ್ತು ಪಡಿಸಿಕೊಳ್ಳುವಾಗ, ಅದರ ಆಳ ಅಗಲ, ಲಾಭ-ನಷ್ಟ ಇತ್ಯಾದಿ ಲೆಕ್ಕ ಹಾಕುವಾಗ “ವೈಯಕ್ತಿಕ ರಿಸ್ಕ್” ತೆಗೆದುಕೊಳ್ಳುತ್ತಾರೆ. ಆದರೆ ಹಾರುವ ಮೊದಲು ಎಲ್ಲವನ್ನೂ ತಮ್ಮ ಕ್ಷೇತ್ರದ ಮತದಾರರನ್ನೇ ಕೇಳಿ ಮಾಡಿದವರಂತೆ, “ನನ್ನ ಕ್ಷೇತ್ರದ ಮತದಾರರ ಎದುರು ನಿರ್ಧರಿಸುವೆ” ಎಂದು ಘೋಷಿಸಿ, ಒಂದಿಷ್ಟು ಖರ್ಚು ಮಾಡಿ ಸಮಾವೇಶ ನಡೆಸಿ “ನನಗೆ ಈಗಿನ ಮನೆ ಹಿಡಿಸುತ್ತಿಲ್ಲ. ಹೊಸ ಬಾಡಿಗೆ ಮನೆಗೆ ಹೋಗಬಹುದೇ?’ ಎಂದು ಕೇಳುವುದಿಲ್ಲ. ಬದಲಾಗಿ ಬಾಡಿಗೆ ಮನೆಯಲ್ಲಿ ಪೂಜೆಯೂ ಮುಗಿಸಿರುವೆ, ನೆರೆ ಬಂದು ಮುಳುಗುವ ಸ್ಥಿತಿ ಬಂದರೆ ಎಂದಿಗೂ ಕ್ಷೇತ್ರದ ಮತದಾರರು ನನ್ನ ಕೈ ಬಿಟ್ಟಿಲ್ಲ’ಎಂದು ಹೊಣೆ ಹೊರಿಸಿ, ತಾವು ಹಾರ ಹಾಗೂ ಜೈಕಾರ ಹಾಕಿಸಿಕೊಂಡು ಹಾರುತ್ತಾರೆ.
ಮತದಾರರೂ ಕೆಲವೊಮ್ಮೆ ಗರಗಸದೊಂದಿಗೇ ಸಮಾವೇಶಕ್ಕೆ ಬರುತ್ತಾರೆ, ಜೈ ಘೋಷ ಮುಗಿದ ಮೇಲೆ ತಮ್ಮ ನಾಯಕರ ಭವಿಷ್ಯದ ಮರದ ಬುಡವನ್ನೇ ತಣ್ಣಗೆ ಕೊಯ್ದು ಹೋಗುತ್ತಾರೆ. ಮರ ಉರುಳಿದ್ದು ತಿಳಿಯೋದೇ ಕೆಳಗೆ ಬಿದ್ದಾಗಲೇ. ಮತದಾರ ಎಂದಿಗೂ ಯಾವ ಪಾವತಿಯನ್ನೂ ಬಾಕಿ ಇರಿಸಿಕೊಳ್ಳುವುದಿಲ್ಲ. ಕಾಲ ಬಂದಾಗ ಬಡ್ಡಿ ಸಮೇತ ಪಾವತಿಸುತ್ತಾನೆ.