ಚುನಾವಣೆ ದಿನಾಂಕ ಮುಂದಿನ ವಾರ ಘೋಷಣೆಯಾಗಬಹುದೆನ್ನಿ. ಆಮೇಲೆ ಚುನಾವಣ ವೀಕ್ಷಕರು ಬರುತ್ತಾರೆ. ಪಕ್ಷಗಳು, ಪ್ರಚಾರಕರು, ಅಭ್ಯರ್ಥಿಗಳು, ಕಾರ್ಯಕರ್ತರು-ಹೀಗೆ ಎಲ್ಲರ ಹೆಜ್ಜೆಗೂ ಖರ್ಚಿನ ಸರ್ಕಲ್ ಸುತ್ತು ಹಾಕಿ, ಎಷ್ಟು ಸೊನ್ನೆಗಳ ಹಿಂದೆ ಎಷ್ಟು ಅಂಕೆ ಹಾಕಬೇಕು ಅಂತ ನಿರ್ಧರಿಸುತ್ತಾರೆ. ಅದಕ್ಕೆ ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಹಂಚಿಕೆಯಾಗದೆ ಇದ್ದರೂ “ಸಾಹೇಬ್ರು” ಬರೋ ಮೊದಲೇ ಮುಗಿಸ್ಬೇಕು ಅಂತ ತಮ್ಮ ಕ್ಷೇತ್ರದ ಮತದಾರರಿಗೆ “ಕೊಡುಗೆ” ಕೊಡುತ್ತಿದ್ದಾರೆ.
ತಮಿಳುನಾಡಿನಲ್ಲಿ ಈ ರೀತಿ ಮನೆ ಸಾಮಾನು ಕೊಡುವ ಖಯ್ನಾಲಿ ಜೋರು. ಟಿವಿಯಿಂದ ಹಿಡಿದು ಎಲ್ಲವೂ. ಅದಕ್ಕೆ ಬೇರೆ ರಾಜ್ಯದ ಗಡಿಯಲ್ಲಿದ್ದ ಆ ರಾಜ್ಯದವರೂ ಚುನಾವಣೆ ಕಾಲಕ್ಕೆ ತವರಿನಲ್ಲಿ ಹಾಜರು. ಈಗ ಆ ಖಯ್ನಾಲಿ ನಮ್ಮಲ್ಲೂ ಜೋರು. ಹಾಗಾಗಿ ಸ್ವಲ್ಪ ದಿನದಲ್ಲಿ ಕೆಲ ವರ ಮನೆ ಮಿನಿ ಸೂಪರ್ ಬಜಾರ್!
ಕೊಡುಗೆಗಳೂ ಪಕ್ಷ ಮತ್ತು ಅಭ್ಯರ್ಥಿಯ “ತಾಕತ್” ಆಧರಿಸಿ ಬದಲಾಗುವುದುಂಟು. ಒಬ್ಬ ಅಭ್ಯರ್ಥಿಯ ಆರ್ಡರ್ ತೆಗೆದು ಕೊಂಡು ಕಂಪೆನಿಯ ಸೇಲ್ಸ್ ಮ್ಯಾನ್‌ಗಳು ಅದೇ ಕ್ಷೇತ್ರದ ಬೇರೆ ಅಭ್ಯರ್ಥಿಗಳಿಗೂ ಡಿಸ್ಕೌಂಟ್ ಆಫರ್ ನೀಡುವುದುಂಟು. ಆಗ ಪಕ್ಷ ನೋಡಿ, ಅಭ್ಯರ್ಥಿಯ “ತಾಕತ್” ನೋಡಿ ವೆರೈಟಿ ಹೇಳುತ್ತಾರೆ. ಒಂದುವೇಳೆ ಅಭ್ಯರ್ಥಿ ಸಿಕ್ಕಾಪಟ್ಟೆ ಡಿಸ್ಕೌಂಟ್ ಕೇಳಿದರು ಎನ್ನಿ. ಕ್ವಾಲಿಟಿಯೂ ಕೇಳುವಂಗಿಲ್ಲ, ವೆರೈಟಿಯೂ ಕೇಳುವಂತಿಲ್ಲ. ಎಲ್ಲ ಪಕ್ಷಗಳ ಗಿಫ್ಟ್ ಒಂದೇ, ಕಲರ್ ಮಾತ್ರ ಬೇರೆ ಬೇರೆ. ಅದು ಕಂಪೆನಿಯ ಅಚ್ಚರಿಯ ಆಯ್ಕೆ !
ಆದರೆ ಕೆಲವರು ಬಿಡುತ್ತಾರಾ? ನೇರವಾಗಿ ಸಂಬಂಧಪಟ್ಟ ಕೊಡುಗೆದಾರರನ್ನೇ ಮನಬಿಚ್ಚಿ ಕೇಳುತ್ತಾರೆ “ನಿಮ್ಮದೂ ಕಂಪ್ಯೂಟರ್ ಟೇಬಲ್ಲಾ.. ನಮ್ಮನೆಯಲ್ಲಿ ಒಬ್ಬಳೇ ಹುಡುಗಿ, ಒಂದು ಕಂಪ್ಯೂಟರ್ ಟೇಬಲ್ ಸಾಕು. ನಾವು ಮೂರು ಮಂದಿ. ಕುಳಿತು ಊಟ ಮಾಡೋದಕ್ಕೆ ಡೈನಿಂಗ್ ಟೇಬಲ್ ಕೊಟ್ಟಿದ್ದರೆ ಬಹಳ ಖುಷಿಯಾಗ್ತಿತ್ತು !”. ಅಲ್ಲಿಗೆ ಪ್ರಚಾರ ಖತಂ.