ಹಿಂದೆ ಒಂದು ಎಲೆಕ್ಷನ್‌ಗೆ ಮೂರು ತಿಂಗಳ ಹಿಂದೆ, ಊರಿಗೇ ಮೊದಲೇ ಊರ ಬಾಗಿಲಲ್ಲಿ ಉಗಾದಿ ಹಬ್ಬದ ಶುಭಾಶಯಗಳು ಊರಿನವರಿಗೆ ಎಂದು ಬರೆದಿದ್ದ, ಬೇವು ಬೆಲ್ಲದ ಚಿತ್ರಕ್ಕಿಂತ ಹತ್ತರಷ್ಟು ದೊಡ್ಡದಾಗಿ ಕೈ ಮುಗಿಯುತ್ತಿರೋ ವ್ಯಕ್ತಿಯ ಫೋಟೋ ಇದ್ದ ಫ್ಲೆಕ್ಸ್ ರಾರಾಜಿಸುತ್ತಿತ್ತು. ನಾಲ್ಕೈದು ಹಲ್ಲುಗಳು ತೋರ್ತಾ ಇದ್ದವು ಬೇರೆ. ಪಾಪ, ಜನರೂ ಈ ಆಸಾಮಿನಾ ನೋಡಿದ್ದೇವಲ್ಲ ಎಂದುಕೊಂಡು ಪರಿಚಯದ ನಗೆ ಬಿಸಾಕಿ ಹೋಗುತ್ತಿದ್ದರು. ಆಗಲೇ ಊರಿನವರಿಗೆ ಏನೋ ನಡೀತಾ ಇದೆ ಎನ್ನುವ ಸಣ್ಣ ಗುಮಾನಿ ಬಂದಿತ್ತು.
ಎಲೆಕ್ಷನ್ ದಿನಾಂಕ ಪ್ರಕಟವಾಗುತ್ತಿದ್ದಂತೆ ಆ ಫ್ಲೆಕ್ಸ್ ಬದಲಿಯಾಗಿ ಮತ ಕೇಳುವ ಫೋಟೋ ಬಂದಿತು. ಆ ಫೋಟೋ ನೋಡಿ ಜನರು, ಅರೆರೆ ಇವನೂ ನಿಂತವನಾ ಎಂದು ಅಚ್ಚರಿ ಪಟ್ಟರು.
ಈ ಆಸಾಮಿ ಎಷ್ಟೋ ವರ್ಷಗಳ ಹಿಂದೆ ಸಿಟಿಗೆ ಓಡಿ ಹೋಗಿದ್ದ. ಊರವರೆಲ್ಲ ಯಾವುದ್ಯಾವುದೋ ಕಾರಣಕ್ಕೆ ಇವನನ್ನ ಹುಡುಕಿದ್ದರು. ಆದರೂ ಸಿಕ್ಕಿರಲಿಲ್ಲ. ಈಗ ಫೋಟೋದಲ್ಲಿ ಪತ್ತೆಯಾಗಿದ್ದು ಕಂಡು “ಪರವಾಗಿಲ್ಲ, ಇದಾನಲ್ಲ” ಎಂದುಕೊಂಡರು.
ಪಾರ್ಟಿಗಳ ಪ್ರಚಾರ ಶುರುವಾಯಿತು. ಮನೆಮನೆಗೆ ಅಭ್ಯರ್ಥಿಗಳು ಬರತೊಡಗಿದರು. ಮತದಾನದ ದಿನಾಂಕ ಹತ್ತಿರವಾದರೂ ಫ್ಲೆಕ್ಸ್ ಸಾಹೇಬ್ರ ಸುಳಿವಿಲ್ಲ.
ಆಸಾಮಿಯ ಫಾಲೋವರ್ ಒಬ್ಬ ಸಿಕ್ಕಾಗ ಹಿರಿಯರೊಬ್ಬರು, “ಏನಪ್ಪಾ, ನಿಮ್ಮ ಸಾಹೇಬ್ರು ಚುನಾವಣೆಗೆ ನಿಂತದ್ದಷ್ಟೇ. ಕ್ವಾನ್ವಾಸ್‌ಗೆ ಬರಲಿಲ್ಲ” ಎಂದು ಕೇಳಿದರು. ಅದಕ್ಕೆ ಆತ ನಗುತ್ತಾ, “ನಮ್ದು ಏನಿದ್ದರೂ ಸ್ಪರ್ಧೆ. ಗೆಲ್ಲಿಸೋದು, ಸೋಲಿಸೋದು ಮತದಾರರ ನಿರ್ಧಾರ” ಎಂದು ಉತ್ತರಿಸಿ ಮಾಯವಾದ.
ಕೆಲವರಿಗೆ ಗೆಲುವು ಮುಖ್ಯ ಅಲ್ಲ, ಸ್ಪರ್ಧೆಯೇ ಮುಖ್ಯ. ಅದನ್ನೇ ನೇರವಾಗಿ ಹೇಳುವುದಾದರೆ “ಎಂಎಲ್‌ಎ ಆಗುವುದಕ್ಕಿಂತ ಎಂಎಲ್‌ಎ ಪೋಸ್ಟ್‌ಗೆ ಕ್ಯಾಂಡಿಡೇಟ್ ಆದೆ” ಎನ್ನುವುದೇ ದೊಡ್ಡ ಪ್ರಸ್ಟೀಜ್. ಒಂದು ಥರಾ ಫಿಕ್ಸ್‌ಡ್ ರಾಜಕೀಯ !