ಹುಬ್ಬಳ್ಳಿ: ವಿದೇಶಗಳಿಂದ ಬಂದವರ ಮಾಹಿತಿ ನೀಡುವುದು ಹಾಗೂ ಆರೋಗ್ಯ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಆರಂಭಿಸಿರುವ 1077-ಸಹಾಯವಾಣಿಗೆ ನಿತ್ಯ 60-70 ಕರೆಗಳು ಬರುತ್ತಿವೆ. ಸಾರ್ವಜನಿಕರ ದೂರು-ದುಮ್ಮಾನಗಳಿಗೆ ಸ್ಪಂದಿಸುವ ಕಾರ್ಯ ಸಂಬಂಧಪಟ್ಟ ಇಲಾಖೆಗಳಿಂದ ನಡೆಯುತ್ತಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭಿಸಿರುವ ಈ ಸಹಾಯವಾಣಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ 12ಕ್ಕೂ ಹೆಚ್ಚು ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲಾಡಳಿತ ಕಳೆದ ಮಾರ್ಚ್ 18ರಂದು ಈ ಸಹಾಯವಾಣಿಗೆ ಚಾಲನೆ ನೀಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 520 ಕರೆಗಳು ಬಂದಿವೆ. ಶೇ.90ರಷ್ಟು ಕರೆಗಳು ಮಹಾನಗರ ವ್ಯಾಪ್ತಿಯದ್ದಾಗಿದ್ದು, ಶೇ.10ರಷ್ಟು ಜಿಲ್ಲೆಯ ವಿವಿಧೆಡೆಗಳಿಂದ ಕರೆಗಳು ಬರುತ್ತಿವೆ.
ಯಾವ್ಯಾವ ದೂರುಗಳು?: ಹೊರ ದೇಶದಿಂದ ಬಂದಿದ್ದಾರೆ ಅವರನ್ನು ತಪಾಸಣೆಗೆ ಒಳಪಡಿಸಿ, ತಮ್ಮ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಗೆ ಕೋವಿಡ್ 19 ಸೋಂಕು ಲಕ್ಷಣ ಕಾಣುತ್ತಿದ್ದು ತಪಾಸಣೆ ಮಾಡಿಸಿ, ವಿದೇಶದಿಂದ ಬಂದು 14 ದಿನ ಮನೆಯಲ್ಲಿದ್ದೆವು ಮುಂದೆ ಏನು ಮಾಡಬೇಕು, ತಮ್ಮ ಏರಿಯಾದಲ್ಲಿ ವ್ಯಕ್ತಿಯೊಬ್ಬರಿಗೆ ಕೋವಿಡ್ 19 ದೃಢಪಟ್ಟಿದೆ ಎಂದು ಜನರು ಮಾತನಾಡುತ್ತಿದ್ದಾರೆ, ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲ, ತಮ್ಮ ಏರಿಯಾದಲ್ಲಿ ಔಷಧಿ ಸಿಂಪರಣೆ ಮಾಡಬೇಕು, ಅಗತ್ಯ ವಸ್ತುಗಳು ಎಲ್ಲಿ ದೊರೆಯುತ್ತಿವೆ. ಅಗತ್ಯ ವಸ್ತುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬಿತ್ಯಾದಿ ದೂರು ಹಾಗೂ ಮಾಹಿತಿಗಳನ್ನು ಕೇಳಲಾಗುತ್ತಿದೆ. ಕೆಲ ದೂರುಗಳಿಗೆ ತಕ್ಷಣವೇ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರ ಕಲ್ಪಿಸುವ ಕೆಲಸವಾಗುತ್ತಿದ್ದು, ಇನ್ನೂ ಕೆಲವನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ನಂತರ ಮಾಹಿತಿ ನೀಡಲಾಗುತ್ತಿದೆ.
ಪರಿಹಾರಕ್ಕೆ ಒತ್ತು: ಕರೆ ಮಾಡಿ ನೀಡಿದ ಮಾಹಿತಿ ಸೇರಿದಂತೆ ಪ್ರತಿಯೊಂದನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. ಇನ್ನೂ ಕೆಲ ದೂರುಗಳನ್ನು ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗುತ್ತಿದೆ. ಆ ಕುರಿತು ಅಧಿಕಾರಿಗಳು ಕೈಗೊಂಡಿರುವ ಕ್ರಮ ಹಾಗೂ ಪರಿಹಾರ ಕಲ್ಪಿಸಿರುವ ಮಾಹಿತಿ ಪಡೆದು ದಾಖಲಾಗಿರುವ ದೂರಿನ ಮುಂದೆ ಕೈಗೊಂಡಿರುವ ಕ್ರಮದ ಬಗ್ಗೆ ನಮೂದಿಸಲಾಗುತ್ತಿದೆ. ಪ್ರತಿಯೊಂದು ಕರೆಯನ್ನು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಿ ಅವುಗಳಿಗೆ ಪರಿಹಾರ ಅಥವಾ ಮಾಹಿತಿ ನೀಡುವ ಕೆಲಸ ನಡೆಯುತ್ತಿದೆ. ಕರೆ ಮಾಡಿದವರ ವಿವರಗಳನ್ನು ಗೌಪ್ಯವಾಗಿರಿಸಲಾಗುತ್ತಿದೆ.
ಅಗತ್ಯ ಸೇವೆಗಾಗಿ 0836-274355 : ಆರೋಗ್ಯ ಶಿಕ್ಷಣ ಹಾಗೂ ವಿದೇಶದಿಂದ ಬಂದಿರುವವರ ಮಾಹಿತಿ ನೀಡುವ ಕುರಿತು 1077 ಆರಂಭಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಗತ್ಯ ಸೇವೆಗಳ ಕುರಿತು ಹೆಚ್ಚಿನ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಇದಕ್ಕಾಗಿ ಪ್ರತ್ಯೇಕವಾಗಿ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ದೂರವಾಣಿ: 0836-2743555 ಸಹಾಯವಾಣಿ ಆರಂಭಿಸಲಾಗಿದೆ. ಮಾ.26ರಿಂದ ಆರಂಭವಾಗಿರುವ ಈ ಸಹಾಯವಾಣಿಗೆ 93 ಕರೆಗಳು ಬಂದಿವೆ. ಸಾರ್ವಜನಿಕರು ಅಗತ್ಯ ಸೇವೆಗಳಲ್ಲಿ ಯಾವುದೇ ವ್ಯತ್ಯಯ, ಮಾಹಿತಿ ಬೇಕಾದರೆ ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಸಹಕಾರ-ಸಹಭಾಗಿತ್ವ ಅಗತ್ಯ : ಕೋವಿಡ್ 19 ಹರಡದಂತೆ ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಹೋರಾಟ ಮಾಡಬೇಕು. ತಮ್ಮ ಸುತ್ತಮುತ್ತಲಿನ ವಿಷಯಗಳ ಕುರಿತು ಸಹಾಯವಾಣಿಗೆ ಕರೆ ಮಾಡಿ ತಿಳಿಸುವುದರಿಂದ ಆದಷ್ಟು ಶೀಘ್ರದಲ್ಲಿ ಪರಿಹಾರ ನೀಡುವ ಕೆಲಸ ಆಗಲಿದೆ. ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಕರೆ ಮಾಡಿ ಮಾಹಿತಿ ನೀಡಬೇಕು. ಸೋಂಕು ಹರಡದಂತೆ ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಹಾಗೂ ಸಹಭಾಗಿತ್ವ ಬಹಳ ಮುಖ್ಯವಾಗಿದೆ.
–ಇಬ್ರಾಹಿಂ ಮೈಗೂರ, ಸಹಾಯವಾಣಿ ನೋಡಲ್ ಅಧಿಕಾರಿ
–ಹೇಮರಡ್ಡಿ ಸೈದಾಪುರ