“”ನಿಮ್ಮದೇ ಲೋಟ ಅದು. ಅದರಲ್ಲಿ ನಿಮ್ಮ ಹೆಸರು ಕೂಡ ಇದೆ ನೋಡಿ” ನಮ್ಮ ಮನೆಯಲ್ಲಿ ನಾವು ಉಪಯೋಗಿಸುತ್ತಿದ್ದ ಸ್ಟೀಲ್ ಲೋಟಗಳಿಗೆ ನಮ್ಮ ನಾಲ್ವರ ಹೆಸರು ಬರೆಸಿದ್ದ ಸ್ಟೀಲಿನ ಯುಗವಿನ್ನೂ ಅಡುಗೆ ಮನೆಯೊಳಗಿಳಿಯುತ್ತಿದ್ದ ಕಾಲವದು. ಮತ್ತೂಮ್ಮೆ ನೋಡಿದರು. “”ಹೌದು ಹೆಸರು ನನ್ನದೇ ಇದೆ” ಬಗೆಹರಿಯಲಾರದ ಸಮಸ್ಯೆಯೆಂಬಂತೆ ಲೊಚಗುಟ್ಟುತ್ತ ಹೇಳಿದರು.
Advertisement
“”ಈಗೇನು? ಇನ್ನೊಂದು ಲೋಟ ಕುಡೀಲಿಕ್ಕೆ ಬೇಕಾ?” “”ಬೇಡ, ಬೇಡ, ಸಾಕು. ಒಂದೇ ಲೋಟ ಒಂದು ಹೊತ್ತಿಗೆ” ಅಪ್ಪ ಮಾತನಾಡುತ್ತಲೇ ಕ್ಲಿನಿಕ್ಕಿಗೆ ನಡೆದರು. ವಾರ ಪೂರ್ತಿಯೂ ಕ್ಲಿನಿಕ್ಕಿನ ಬಾಗಿಲು ತೆಗೆದೇ ಇರುತ್ತಿತ್ತು. ನಮಗೋ ಆದಿತ್ಯವಾರದ ರಜೆ. ಅಮ್ಮ ತಿಂಡಿ ತಿಂದ ತಟ್ಟೆ ಲೋಟ, ಪಾತ್ರೆ ಎಲ್ಲವನ್ನು ದೊಡ್ಡದೊಂದು ಬುಟ್ಟಿಗೆ ಹಾಕಿ ಮನೆಯ ಹೊರಗಿಟ್ಟಳು. ಮತ್ತೂಂದರಲ್ಲಿ ಕೊಳೆಯಾದ ಬಟ್ಟೆಗಳು. ಆಗಿನ್ನೂ ಅವಳು ತನ್ನ ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದಳಷ್ಟೇ. ಹಾಗಾಗಿ, ಎರಡು ತಿಂಗಳಿನಿಂದ ಮನೆ ಕೆಲಸಕ್ಕೊಬ್ಬರು ಬಂದಿದ್ದರು. ಬಟ್ಟೆಯ ಬುಟ್ಟಿ ತಲೆಗೆ, ಪಾತ್ರೆಗಳದ್ದು ಸೊಂಟದಲ್ಲಿಟ್ಟು ಬ್ಯಾಲೆನ್ಸ್ ಮಾಡುತ್ತ ಅವರು ನಡೆದರೆ ನಮ್ಮ ಸೈನ್ಯ ಅವರ ಹಿಂದೆಯೇ. ಮನೆಯ ಪಕ್ಕದಲ್ಲೇ ಹರಿಯುತ್ತಿದ್ದ ಹೊಳೆ. ಹೊಳೆಯ ಬದಿಯಲ್ಲಿ ಸಾಲಾಗಿ ಇದ್ದ ಬಟ್ಟೆ ಒಗೆಯುವ ಮೂರ್ನಾಲ್ಕು ಕಲ್ಲುಗಳು. ಒಂದೆರಡರಲ್ಲಾಗಲೇ ಅಕ್ಕಪಕ್ಕದವರು ಬಟ್ಟೆ ಹರಡಿ ಒಗೆಯಲು ಶುರುವಾಗಿತ್ತು.
Related Articles
Advertisement
ಮರುದಿನದಿಂದಲೇ ಮನೆಯಲ್ಲಿ ಹೊಸ ಕಾನೂನು ಜಾರಿಗೆ ಬಂದಿತ್ತು. ಮಕ್ಕಳಾದ ನಾವಿಬ್ಬರೂ ನಮ್ಮ-ನಮ್ಮ ಲೋಟ ಬಟ್ಟಲುಗಳನ್ನು ನಾವು ನಾವೇ ತೊಳೆಯತಕ್ಕದ್ದು. ನಮ್ಮ ಕೆಲಸ ನಾವೇ ಮಾಡಿಕೊಳ್ಳುವ ಮುನ್ನುಡಿಯೊಂದು ಬಾಳಪುಸ್ತಕದಲ್ಲಿ ಮೂಡಿದ್ದು ಹೀಗೇ. ಅವರಿವರ ಮನೆಗೆ ಹೋದಾಗಲೆಲ್ಲ ಅಮ್ಮ ತನ್ನ ಮಕ್ಕಳ ಈ ಕೆಲಸವನ್ನು ಹೊಗಳುವುದು ಕೇಳಿದಾಗ, ಅವರೂ ಅದಕ್ಕೆ ಅಚ್ಚರಿ ಸೂಚಿಸುತ್ತ ತಲೆಯಾಡಿಸಿದಾಗ ಏನೋ ಸಾಧನೆ ಮಾಡುತ್ತಿದ್ದೇವೆ ನಾವು ಎಂಬ ಭಾವ ಮೂಡಿಸಿತ್ತು, ಈ ಪಾತ್ರೆ ತೊಳೆಯುವಿಕೆ. ಅಯ್ಯೋ ಕೆಲಸ ಮಾಡಬೇಕಲ್ಲ ಎಂಬ ಸ್ವಮರುಕಕ್ಕಿಂತ, ನನಗೂ ಮಾಡಲು ಬರುತ್ತದೆ ಎಂಬ ಹೆಮ್ಮೆಯೇ ಹೆಚ್ಚಿನದಾಗಿತ್ತು ಆಗ.
ಒಂದಿಷ್ಟು ನೀರು, ಒಂದಿಷ್ಟು ಸೋಪಿನಪುಡಿ, ಕೊಳೆ ತಿಕ್ಕಿ ತೊಳೆದರೆಲ್ಲÉ ಫಳಫಳ ಇದು ನಿತ್ಯವೂ ಆಗದು ಬಿಡಿ. ಅಲ್ಲೊಂದು ಚೂರು ಇಲ್ಲೊಂದು ಚೂರು ಬಾಕಿ ಉಳಿದರೆ ನಮ್ಮನ್ನು ಬಚಾವ್ ಮಾಡಿಕೊಳ್ಳಲು ಪುರಾಣದ ಸಹಾಯ ನಮ್ಮಲ್ಲೇ ಇದೆ. ದ್ರೌಪದಿಯ ಅಕ್ಷಯ ಪಾತ್ರೆ ಯೊಳಗುಳಿದಿದ್ದ ಒಂದಗುಳು ಅನ್ನ ಶ್ರೀಕೃಷ್ಣನ ಹೊಟ್ಟೆ ಸೇರಿ ದೂರ್ವಾಸನ ಕೋಪಕ್ಕೆ ಸಿಲುಕಬೇಕಿದ್ದ ಪಾಂಡವರನ್ನು ಉಳಿಸಲಿಲ್ಲವೆ? ಹಾಗೆಯೇ ಇದು ಎಂದು ರಾಗ ಎಳೆದದ್ದುಂಟು.
ಎಲ್ಲಿಯವರೆಗೆ ಮನುಷ್ಯನಿಗೆ ಹೊಟ್ಟೆ ಹಸಿವು ಇರುತ್ತದೋ ಅಲ್ಲಿಯ ವರೆಗೆ ಪಾತ್ರೆ ತೊಳೆಯುವ ಕೆಲಸವೂ ಇದ್ದೇ ಇರುತ್ತದೆ. ಕಾಲ ಬದಲಾದಂತೆ ಪಾತ್ರೆಗಳ ಆಕಾರ, ಗಾತ್ರ, ಅಂದಚೆಂದಗಳು ಬದಲಾಗಬಹುದು. ಪಾತ್ರೆಗಳು ಪ್ರತಿಷ್ಠೆಯ ಸಂಕೇತಗಳೂ ಆಗಬಹುದು. ಆದರೆ, ತೊಳೆಯುವಿಕೆ ನಿಲ್ಲದು.
ಏನೇ ಆದರೂ ಮನೆಯ ಸಿಂಕ್ ಖಾಲಿ ಇರುವಂತೆ ನೋಡಿಕೊಳ್ಳುವುದು ಸ್ವತ್ಛ ಮನೆಯ ಲಕ್ಷಣ ಎಂದೇ ನನ್ನ ಅಭಿಮತ. ಬಹುಶಃ ಇದು ಮನದೊಳಗಿನ ಕಲ್ಮಷಕ್ಕೂ ಅನ್ವಯವೇ. ಎಲ್ಲವನ್ನೂ ಒಳಗೇ ಇರಿಸಿಕೊಂಡು ಅದು ಕೊಳೆತು ನಾರುವವರೆಗೆ ಬಿಡುವ ಬದಲು ಆಗಾಗ ಕೊಳೆಯಾಗಿದ್ದನ್ನು ಆಗಾಗಲೇ ಸ್ವತ್ಛಗೊಳಿಸಿ ಎಲ್ಲಿ ಬೇಕೋ ಅಲ್ಲಿಟ್ಟುಬಿಟ್ಟರೆ ಮನೆಗೂ ನೆಮ್ಮದಿ. ಮನಕ್ಕೂ…!
ಅನಿತಾ ನರೇಶ ಮಂಚಿ