Advertisement

ಪ್ರೀತಿ ಒಪ್ಪದ ಅಪ್ಪನ ಸುಟ್ಟ ಪುತ್ರಿ

12:30 AM Aug 20, 2019 | Team Udayavani |

ಬೆಂಗಳೂರು: ರಾಜಾಜಿನಗರದಲ್ಲಿ ಭಾನುವಾರ ಮುಂಜಾನೆ ನಡೆದಿದ್ದ ಬಟ್ಟೆ ವ್ಯಾಪಾರಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ವ್ಯಾಪಾರಿ ಜೈಕುಮಾರ್‌ರನ್ನು ಅವರ ಅಪ್ರಾಪ್ತ ಪುತ್ರಿ, ತನ್ನ ಪ್ರಿಯಕರನ ನೆರವು ಪಡೆದು ಬರ್ಬರವಾಗಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

Advertisement

ರಾಜಾಜಿನಗರದ ಭಾಷ್ಯಂ ವೃತ್ತದ ಬಳಿಯ ಮನೆಯ ಸ್ನಾನಗೃಹದಲ್ಲಿ ಭಾನುವಾರ ವ್ಯಾಪಾರಿ ಜೈಕುಮಾರ್‌ ಮೃತ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಮೃತರ ಪುತ್ರಿ ಹಾಗೂ ಆಕೆಯ ಪ್ರಿಯಕರನನ್ನು ಭಾನುವಾರವೇ ವಶಕ್ಕೆ ಪಡೆದಿದ್ದ ರಾಜಾಜಿನಗರ ಪೊಲೀಸರು, ವಿಚಾರಣೆ ಆರಂಭಿಸಿದ್ದರು. ತನ್ನ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದರು ಎಂಬ ಕಾರಣಕ್ಕೆ ಅಪ್ರಾಪ್ತ ಪುತ್ರಿಯೇ ಜೈಕುಮಾರ್‌ರನ್ನು ಕೊಲೆಗೈದು, ಬೆಂಕಿ ಹಚ್ಚಿ ಸಾಕ್ಷ್ಯ ನಾಶಕ್ಕೆ ಯತ್ನಿಸಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.

ಪ್ರಕರಣ ಸಂಬಂಧ ರಾಜಾಜಿನಗರ ನಿವಾಸಿ ಪ್ರವೀಣ್‌ (18) ಹಾಗೂ ಕಾನೂನು ಸಂಘರ್ಷಕ್ಕೊಳಗಾದ 15 ವರ್ಷದ ಬಾಲಕಿಯನ್ನು ಬಂಧಿಸಲಾಗಿದೆ. ಆರೋಪಿಗಳ ಕಾಲು ಮತ್ತು ಕೈಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ, ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು. ಅಪ್ರಾಪ್ತೆಯನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ.

ಆರೋಪಿಗಳು ಆ.18ರಂದು ನಸುಕಿನ 2 ಗಂಟೆ ಸುಮಾರಿಗೆ ರಾಜಾಜಿನಗರದ ದಿಲೀಪ್‌ ಅಪೇರಲ್ಸ್‌ ಹೋಲ್‌ಸೇಲ್‌ ಬಟ್ಟೆ ವ್ಯಾಪಾರಿ ಜೈಕುಮಾರ್‌ (41) ಎಂಬವರನ್ನು ಚಾಕುವಿನಿಂದ ಇರಿದು ಕೊಂದು, ಬಳಿಕ ಮೃತದೇಹವನ್ನು ಸ್ನಾನಗೃಹಕ್ಕೆ ಕೊಂಡೊಯ್ದು, ದೇಹದ ಮೇಲೆ ಪೆಟ್ರೋಲ್‌ ಸುರಿದು ಸುಟ್ಟುಹಾಕಿದ್ದರು. ಆದರೆ, ಅಪರಿಚಿತರು ಕೃತ್ಯ ಎಸಗಿದ್ದಾರೆ ಅಥವಾ ವಿದ್ಯುತ್‌ ಅವಘಡದಿಂದ ಸುಟ್ಟು ಜೈಕುಮಾರ್‌ ಮೃತಪಟ್ಟಿದ್ದಾರೆ ಎಂದು ಬಂಬಿಸಲು ಆರೋಪಿಗಳು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದರು.

ರಾಜಸ್ಥಾನ ಮೂಲದ ಜೈಕುಮಾರ್‌ ದಂಪತಿಗೆ ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಇದ್ದಾರೆ. ಪುತ್ರಿ ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದು, ಆಕೆಗೆ ದುಬಾರಿ ಮೌಲ್ಯದ ಮೊಬೈಲ್‌ ಕೊಡಿಸಿದ್ದ ಜೈಕುಮಾರ್‌, ನಿತ್ಯ ಖರ್ಚಿಗೆ ಹಣ ಕೊಡುತ್ತಿದ್ದರು. ಅದನ್ನು ದುರ್ಬಳಕೆ ಮಾಡಿಕೊಂಡ ಬಾಲಕಿ, ತನ್ನ ಶಾಲಾ ದಿನಗಳ ಸ್ನೇಹಿತ, ಸದ್ಯ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಪ್ರವೀಣ್‌ ಜತೆ ಸ್ನೇಹ ಹೊಂದಿದ್ದಳು.

Advertisement

ಇಬ್ಬರೂ ಒಟ್ಟಿಗೆ ಓಡಾಡುತ್ತಿದ್ದರು. ಮೊಬೈಲ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು. ಜತೆಗೆ ಮಾಲ್‌, ಹೋಟೆಲ್‌, ಪಾರ್ಕ್‌ ಇತರೆಡೆ ಸುತ್ತಾಡಿದ್ದಾರೆ. ಅದನ್ನು ಗಮನಿಸಿದ ಜೈಕುಮಾರ್‌, ಪುತ್ರಿಗೆ ಸಾಕಷ್ಟು ಬಾರಿ ಬುದ್ಧಿ ಹೇಳಿದ್ದಾರೆ. ಆದರೂ ಆಕೆ ತಿದ್ದಿಕೊಂಡಿರಲಿಲ್ಲ. ಹೀಗಾಗಿ ಕೆಲ ತಿಂಗಳ ಹಿಂದೆ ಆಕೆಯ ಮೊಬೈಲ್‌ ಕಸಿದುಕೊಂಡು, ಸಾಮಾಜಿಕ ಜಾಲತಾಣ ಬಳಕೆ ಮಾಡದಂತೆ ಸೂಚಿಸಿದ್ದರು. ಜತೆಗೆ ಯಾರೊಂದಿಗೂ ಹೆಚ್ಚು ಸೇರಲು ಬಿಡುತ್ತಿರಲಿಲ್ಲ.

ಹೊರಗಡೆ ಹೋಗಲು ಅವಕಾಶ ಇರಲಿಲ್ಲ. ಇದೇ ವಿಚಾರವಾಗಿ ತಂದೆ ಮಗಳ ನಡುವೆ ವಾಗ್ವಾದ ನಡೆಯುತ್ತಿತ್ತು. ಈ ವಿಚಾರವನ್ನು ತನ್ನ ಪ್ರಿಯಕರ ಪ್ರವೀಣ್‌ಗೆ ತಿಳಿಸಿದ್ದ ಬಾಲಕಿ, ಬೇಸರ ವ್ಯಕ್ತಪಡಿಸಿದ್ದಳು. ಇದರಿಂದ ಆಕ್ರೋಶಗೊಂಡಿದ್ದ ಆರೋಪಿ, ಜೈಕುಮಾರ್‌ ಅವರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದ. ಅದಕ್ಕೆ ಪುತ್ರಿಯೂ ಸಮ್ಮತಿ ಸೂಚಿಸಿದ್ದಳು ಎಂದು ಉತ್ತರ ವಿಭಾಗದ ಡಿಸಿಪಿ ಎನ್‌.ಶಶಿಕುಮಾರ್‌ ಸೋಮವಾರದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಾಲಿಗೆ ನಿದ್ದೆ ಮಾತ್ರೆ ಬೆರೆಸಿಕೊಟ್ಟಳು: ತಂದೆಯ ಮೇಲೆ ಕೋಪಗೊಂಡಿದ್ದ ಪುತ್ರಿ, ಶುಕ್ರವಾರ ಟ್ಯೂಷನ್‌ಗೆ ಹೋದಾಗ ಪ್ರವೀಣ್‌ನನ್ನು ಭೇಟಿ ಮಾಡಿ, ಶನಿವಾರ ರಾತ್ರಿ ತಾಯಿ ಮತ್ತು ಸಹೋದರ ಪುದುಚೇರಿಗೆ ಹೋಗುತ್ತಾರೆ. ಈ ವೇಳೆ ತಂದೆಯ ಮೇಲೆ ಸೇಡು ತೀರಿಸಿಕೊಳ್ಳಬಹುದು ಎಂದು ಹೇಳಿದ್ದಳು. ಅದರಂತೆ ಇಬ್ಬರೂ ಸಂಚು ರೂಪಿಸಿದ್ದು, ಮೆಡಿಕಲ್‌ ಶಾಪ್‌ ಒಂದರಿಂದ ನಿದ್ದೆ ಮಾತ್ರೆಗಳನ್ನು ಖರೀದಿಸಿದ ಅಪ್ರಾಪ್ತೆ, ಅವುಗಳನ್ನು ತನ್ನ ಶಾಲಾ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದಳು. ನಂತರ ಶನಿವಾರ ರಾತ್ರಿ ತಂದೆ ಜೈಕುಮಾರ್‌ ಜತೆ ರೈಲು ನಿಲ್ದಾಣಕ್ಕೆ ಹೋಗಿ ತಾಯಿ ಮತ್ತು ಸೋದರನನ್ನು ಬೀಳ್ಕೊಟ್ಟು ಬಂದಿದ್ದಳು. ಅದೇ ರಾತ್ರಿ 10 ಗಂಟೆ ಸುಮಾರಿಗೆ ಆರೋಪಿಗೆ ಕರೆ ಮಾಡಿ, ಮನೆ ಬಳಿ ಬರುವಂತೆ ಸೂಚಿಸಿದ್ದಾಳೆ.

ಈ ವೇಳೆ ಆತ ಮಾರ್ಗ ಮಧ್ಯೆಯೇ ಹೊಸ ಚಾಕು ಖರೀದಿಸಿ ತಂದಿದ್ದ. ಈ ಮಧ್ಯೆ ಪ್ರತಿನಿತ್ಯ ಹಾಲು ಸೇವಿಸಿ ಮಲಗುತ್ತಿದ್ದ ಜೈಕುಮಾರ್‌ಗೆ ಪುತ್ರಿಯೇ ಹಾಲಿನಲ್ಲಿ ನಿದ್ದೆ ಮಾತ್ರೆ ಹಾಕಿ ಮಲಗಿಸಿದ್ದಾಳೆ. ಕೆಲ ಹೊತ್ತಿನ ಬಳಿಕ ತಾನೇ, ತಂದೆಯನ್ನು ಎಬ್ಬಿಸಿದ್ದಾಳೆ, ತಂದೆ ಸಂಪೂರ್ಣ ನಿದ್ದೆಗೆ ಜಾರಿರುವುದನ್ನು ಖಚಿತ ಪಡಿಸಿಕೊಂಡ ಆಕೆ, ಮನೆಯೊಳಗೆ ಪ್ರಿಯಕರನನ್ನು ಕರೆಸಿಕೊಂಡಿದ್ದಾಳೆ. ತಡರಾತ್ರಿ 2 ಗಂಟೆ ಸುಮಾರಿಗೆ ಇಬ್ಬರೂ ಸೇರಿಕೊಂಡು ಜೈಕುಮಾರ್‌ ಅವರ ಕುತ್ತಿಗೆ ಹಾಗೂ ಇತರೆಡೆ ಹತ್ತಾರು ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾರೆ.

ತಾವೇ ಹೆಣೆದ ಬಲೆಗೆ ಬಿದ್ದ ಹಂತಕರು: ಚಾಕುವಿನಿಂದ ಇರಿದು ಕೊಂದ ಬಳಿಕ ಮೃತ ದೇಹವನ್ನು ಬೆಡ್‌ರೂಂಗೆ ಹೊಂದಿಕೊಡಂತೆ ಇರುವ ಸ್ನಾನದ ಗೃಹಕ್ಕೆ ಎಳೆದೊಯ್ದ ಆರೋಪಿಗಳು, ಮೈಮೇಲಿದ್ದ ಬಟ್ಟೆಗಳನ್ನು ತೆಗೆದು, ರಕ್ತಸಿಕ್ತ ಬಟ್ಟೆಗಳು, ದಿಬ್ಬಿನ ಬಟ್ಟೆಗಳನ್ನು ವಾಷಿಂಗ್‌ ಮಷೀನ್‌ಗೆ ಹಾಕಿದ್ದಾರೆ. ರಕ್ತದ ಕಲೆಯಾಗಿದ್ದ ನೆಲ, ಗೋಡೆ, ಹೊದಿಕೆಗಳನ್ನು ಸ್ವತ್ಛಗೊಳಿಸಲು ಯತ್ನಿಸಿದ್ದಾರೆ.

ಮುಂಜಾನೆ ಐದು ಗಂಟೆವರೆಗೂ ಮೃತ ದೇಹವನ್ನು ಏನು ಮಾಡಬೇಕೆಂಬ ಬಗ್ಗೆ ಆರೋಪಿಗಳು ಚರ್ಚೆ ನಡೆಸಿ, ಕೊನೆಗೆ ಸುಡಲು ನಿರ್ಧರಿಸಿದ್ದಾರೆ. ಬಳಿಕ ಬೆಳಗ್ಗೆ 8.30ರ ಸುಮಾರಿಗೆ ಬಾಲಕಿ, ಹೊರಗಡೆ ಹೋಗಿ ಹೋಟೆಲ್‌ ಒಂದರಲ್ಲಿ ತಿಂಡಿ ತಿಂದು, ಪ್ರಿಯಕರನಿಗೂ ತೆಗೆದುಕೊಂಡಿದ್ದಾಳೆ. ಜತೆಗೆ ಎರಡು ನೀರಿನ ಬಾಟಲಿಗಳನ್ನು ಖರೀದಿಸಿ, ಮಾರ್ಗ ಮಧ್ಯೆ ನೀರನ್ನು ಚೆಲ್ಲಿ, ಪೆಟ್ರೋಲ್‌ ಖರೀದಿಸಿ, ಮನೆಗೆ ತಂದಿದ್ದಾಳೆ. ನಂತರ ಇಬ್ಬರು ಸೇರಿ ಮೃತ ದೇಹದ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಇಟ್ಟಿದ್ದಾರೆ. ಈ ವೇಳೆ ಇಬ್ಬರ ಕಾಲು, ಕೈಗಳಿಗೆ ಸುಟ್ಟ ಗಾಯಗಳಾಗಿವೆ.

ಬೆಂಕಿ ಹಚ್ಚಿದ ಬಳಿಕ ಟೆರೇಸ್‌ ಮೇಲೆ ಹೋದ ಬಾಲಕಿ, ಮನೆಗೆ ಬೆಂಕಿ ಬಿದ್ದಿದ್ದೆ ಎಂದು ಕೂಗಿಕೊಂಡಿದ್ದಾಳೆ. ಅದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಟೆರೇಸ್‌ ಮೇಲಿನಿಂದಲೇ ಬಂದ ಸಿಬ್ಬಂದಿ, ಬೆಂಕಿ ನಂದಿಸಿದ್ದಾರೆ. ಆದರೆ, ಸ್ಥಳಕ್ಕೆ ಬಂದ ಪೊಲೀಸರಿಗೆ, “ತಿಂಡಿ ತಿನ್ನಲು ಹೊರಗಡೆ ಹೋಗಿದ್ದೆ. ಈ ವೇಳೆ ಯಾರೋ ಅಪರಿಚಿತರು ಮನೆಗೆ ನುಗ್ಗಿ ಕೃತ್ಯ ಎಸಗಿರಬಹುದು ಅಥವಾ ವಿದ್ಯುತ್‌ ಅವಘಡದಿಂದಲೂ ಅವಘಡ ನಡೆದಿರಬಹುದು’ ಎಂದು ಕಥೆ ಕಟ್ಟಿದ್ದಳು.

ಆದರೆ, ಆಕೆಯ ಮೈಮೇಲಿದ್ದ ಸುಟ್ಟ ಗಾಯಗಳನ್ನು ಗಮನಿಸಿದ ಪೊಲೀಸರು, ಗಾಯ ಹೇಗಾಯಿತು ಎಂದು ಪ್ರಶ್ನಿಸಿದ್ದರು. “ಅಪ್ಪನ ರಕ್ಷಿಸಲು ಹೋದಾಗ ಗಾಯಗಳು ಆಗಿವೆ’ ಎಂದಿದ್ದಳು. ಆದರೂ ಅನುಮಾನದ ಮೇರೆಗೆ ಆಪ್ರಾಪ್ತೆಯನ್ನು ವಶಕ್ಕೆ ಪಡೆಯಲಾಗಿತ್ತು. ಪ್ರಾಥಮಿಕ ವಿಚಾರಣೆ ವೇಳೆ ಬಾಲಕಿ ತನ್ನ ಪ್ರಿಯಕರನ ವಿಷಯ ಬಾಯಿಬಿಟ್ಟಿದ್ದು, ಕೆಲ ಹೊತ್ತಿನಲ್ಲೇ ಆತನನ್ನೂ ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಹೇಳಿದರು. ಘಟನೆ ಸಂಬಂಧ ಜೈಕುಮಾರ್‌ ಅಂಗಡಿಯಲ್ಲಿ ಮ್ಯಾನೇಜರ್‌ ಆಗಿರುವ ಅರುಣ್‌ ಕುಮಾರ್‌ ಎಂಬವರು ಕೊಲೆ ಪ್ರಕರಣ ದಾಖಲಿಸಿದ್ದರು.

ಮೂಟ್ಟೆ ಕಟ್ಟಲು ಯತ್ನ: ಕೃತ್ಯ ಎಸಗಿದ ಬಳಿಕ ಆರೋಪಿಗಳು ಮೃತ ದೇಹವನ್ನು ಮೂಟ್ಟೆ ಕಟ್ಟಿ ಹೊರಗಡೆ ಕೊಂಡೊಯ್ದು ನಿರ್ಜನ ಪ್ರದೇಶದಲ್ಲಿ ಬಿಸಾಡಲು ಸಂಚು ರೂಪಿಸಿದ್ದರು. ಆದರೆ, ಹೊರಗೆಡೆ ಒಯ್ಯುವಾಗ ಪೊಲೀಸರು ಪ್ರಶ್ನಿಸಿದರೆ ಸಿಕ್ಕಿ ಬಿಳುತ್ತೇವೆ ಎಂದು ಹೆದರಿ ಮುಂಜಾನೆ ಐದು ಗಂಟೆವರಗೆ ಮೃತ ದೇಹದ ಎದುರೇ ಯೋಚಿಸುತ್ತಾ ಕುಳಿತಿದ್ದರು ಎಂದು ಪೊಲೀಸರು ಹೇಳಿದರು.

ಆರೋಪಿಯೇ ಮೊಬೈಲ್‌ ಕೊಟ್ಟಿದ್ದ: ಓದಿನಲ್ಲಿ ಆಸಕ್ತಿ ಕಳೆದುಕೊಂಡು ಸದಾ ಮೊಬೈಲ್‌ ಬಳಸುತ್ತಾ, ಸ್ನೇಹಿತನ ಜತೆ ಸುತ್ತಾಡುತ್ತಿದ್ದ ಪುತ್ರಿಯ ಹುಚ್ಚಾಟ ಕಂಡ ತಂದೆ ಜೈಕುಮಾರ್‌, ಆಕೆಯ ಮೊಬೈಲ್‌ ಕಸಿದುಕೊಂಡು, ಸಾಮಾಜಿಕ ಜಾಲತಾಣಗಳಿಂದ ದೂರು ಮಾಡಿದ್ದರು. ಹೊರಗಡೆಯೂ ಹೋಗದಂತೆ ಎಚ್ಚರಿಕೆ ನೀಡಿದ್ದರು. ಅದನ್ನು ತಿಳಿದ ಆರೋಪಿ, ಪ್ರಿಯತಮೆಗೆ ಒಂದು ಮೊಬೈಲ್‌ ಕೊಡಿಸಿದ್ದ. ನಿತ್ಯ ರಾತ್ರಿ ಇಬ್ಬರು ಗೌಪ್ಯವಾಗಿ ಮೊಬೈಲ್‌ನಲ್ಲಿ ಮಾತನಾಡಿದ್ದರು. ಅಲ್ಲದೆ, ಟ್ಯೂಷನ್‌ಗೆ ಹೋದಾಗ ಇಬ್ಬರೂ ಭೇಟಿಯಾಗುತ್ತಿದ್ದರು. ಮಾಲ್‌, ಹೋಟೆಲ್‌, ಪಾರ್ಕ್‌ ಹಾಗೂ ಇತರೆಡೆ ಸುತ್ತಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

ಅಗ್ನಿಶಾಮಕ ದಳದೊಂದಿಗೆ ಕಾಲ್ಕಿತ್ತ ಆರೋಪಿ: ಕೃತ್ಯ ಎಸಗಿದ ಆರೋಪಿ ಪ್ರವೀಣ್‌ಗೂ ಸುಟ್ಟುಗಾಯಗಳಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬರುವವರೆಗೂ ಗಾಯಗಳಿಗೆ ಔಷಧ ಹಚ್ಚಿಕೊಂಡು ಮನೆಯಲ್ಲೇ ಅವಿತುಕೊಂಡಿದ್ದ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ ಹೊರ ಹೋಗುವಾಗ ಆತ ಕೂಡ ಸಾರ್ವಜನಿಕರ ಸೋಗಿನಲ್ಲಿ ಮನೆಯಿಂದ ಹೊರ ಹೋಗಿದ್ದಾನೆ.

ಅದನ್ನು ಗಮನಿಸಿದ ಕೆಲ ಸ್ಥಳೀಯರು, ಅಪ್ರಾಪ್ತೆಯ ಸ್ನೇಹಿತ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಮನೆಯಿಂದ ಹೊರಬಂದಿದ್ದು, ಆತನಿಗೂ ಸುಟ್ಟುಗಾಯಗಳಾಗಿದ್ದವು ಎಂದು ಪೊಲೀಸರಿಗೆ ತಿಳಿಸಿದ್ದರು. ಅಲ್ಲದೆ, ಜೈಕುಮಾರ್‌ ಪುತ್ರಿಯ ಜತೆ ಆತ ಓಡಾಡುತ್ತಿದ್ದುದನ್ನು ತಾವು ನೋಡಿರುವುದಾಗಿ ಹೇಳಿದ್ದರು. ಈ ಮಾಹಿತಿ ಮೇರೆಗೆ ಬಾಲಕಿಯನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next