Advertisement
ಆದರೆ, ಅಪ್ಪನ ಕಪಾಟು ಹಾಗಲ್ಲ. ಸದಾ ಬೀಗ ಹಾಕಿಯೇ ಇರುವ, ಯಾವಾಗಲಾದರೂ ಒಂದೇ ಬಾಗಿಲು ತೆರೆದು ತನ್ನ ಅಸ್ತಿತ್ವವನ್ನು ಸಾಬೀತುಮಾಡುವ ಆ ಕಪಾಟೆಂದರೆ ನನಗಂತೂ ಯಾವುದೋ ನಿಧಿ ಇರುವ ಗುಹೆಯಂತೆ. ಪ್ರತಿದಿನ ಸಂಜೆ ಕಪಾಟಿನ ಬಾಗಿಲು ತೆರೆದು, ಲೆಕ್ಕದ ಪುಸ್ತಕ ತೆಗೆದು ಹೊರತಂದು ಕುರ್ಚಿಯ ಮೇಲೆ ಕೂತು ಆ ದಿನದ ಜಮಾ ಖರ್ಚಿನ ಲೆಕ್ಕವನ್ನು ಬರೆಯುವ ಅಪ್ಪನೆಂದರೆ ಸದಾ ಕುತೂಹಲ. ಅಪ್ಪನ ಲೆಕ್ಕವೆಂದರೆ ಪಕ್ಕಾ ಪಫೆìಕ್ಟ್. ಪೈಸೆಗಳ ಕಾಲದಲ್ಲಿ ಖರ್ಚು ಮಾಡಿದ ಪುಸ್ತಕವೂ ಭದ್ರವಾಗಿದ್ದಂತದ್ದು. ಈಗಲೂ ಅಷ್ಟೇ. ಪ್ರತಿದಿನ ಆಳುಗಳಿಗೆ ಕೊಟ್ಟದ್ದು, ತಂದದ್ದು ಎಲ್ಲವೂ ಕನ್ನಡಿಯ ಹಾಗೆ, ಒಂದು ಪೈಸೆ ಅತ್ತಿತ್ತ ಆಗದ ಹಾಗೆ ಬರೆದಿಡುತ್ತಾರೆ. ನಾನೂ ಸಹ ಕೆಲ ವರ್ಷ ಅವರನ್ನು ಹಿಂಬಾಲಿಸಿದ್ದೆ. ಓದುವಾಗ, ಕೆಲಸ ಸಿಕ್ಕಿದ ನಂತರವೂ ಲೆಕ್ಕ ಬರೆಯುತ್ತಿದ್ದೆ. ಈಗ ಲೆಕ್ಕವೂ ಇಲ್ಲ, ಖರ್ಚಿನ ಬಗ್ಗೆ ಹಿಡಿತವೂ ಇಲ್ಲ. ಗಾಳಿ ಬಂದತ್ತ ತೂರಿಕೊಳ್ಳುವ ಹಾಗೆ, ಬೇಕಾದುದನ್ನು ಕೊಳ್ಳುವುದು. ಹಾಗೇ ಮರೆಯುವುದು. ಕೊಡಬೇಕೆನಿಸಿದರೆ ಕೊಟ್ಟು ಬಿಡುವುದು. ಬರೆಯುವ ಗೋಜು ಇಲ್ಲ.
Related Articles
Advertisement
ಒಂದು ಬಾಗಿಲಿಗೆ ರಾಜೀವ್ ಗಾಂಧಿಯ ಫೋಟೊ. ಮತ್ತೂಂದು ಬಾಗಿಲಿಗೆ ಡಾಕ್ಟರ್ ರಾಜ್‌ಕುಮಾರ್ ಫೋಟೊ! ರಾಜ್‌ಕುಮಾರ್ ಅಂತೂ ಬಿಳಿ ಪಂಚೆ, ಬಿಳಿ ಶರ್ಟಿನಲ್ಲಿ ನಿಂತಿರುವ ಫೋಟೊ. ಅದೇನೂ ಹೀರೋಯಿಸಂ ತೋರಿಸುವ ಚಿತ್ರವಲ್ಲ. ಸಾದಾ ಸೀದಾ ಗಂಭೀರ ವಾಗಿ ನಿಂತ ಭಂಗಿಯದ್ದು. ಮೊದಮೊದಲು ಅದು ರಾಜ್‌ಕುಮಾರ್ ಅಂತಾಗಲೀ, ಸಿನೆಮಾ ನಟ ಅದರಲ್ಲೂ ಮೇರು ನಟ, ಗಾಯಕ ಅಂತಾಗಲೀ ನನಗೆ ಗೊತ್ತೇ ಇರಲಿಲ್ಲ. ಆಮೇಲೆ ಗೊತ್ತಾದದ್ದು. ಅಪ್ಪನಿಗೆ ಇವರಿಬ್ಬರೆಂದರೆ ಬಹಳ ಇಷ್ಟ.
ಕುತೂಹಲ ತಗ್ಗಿ, ಆಕರ್ಷಣೆ ಹೆಚ್ಚಿತು
ರಾಜೀವ್ ಗಾಂಧಿಯ ಫೋಟೊ ಅಂತೂ ಎಷ್ಟು ಚಂದ ಎಂದರೆ, ರಾಜಕೀಯ, ಪಕ್ಷ, ಸಿದ್ಧಾಂತ ಎಂದು ಮಾತನಾಡುವವರು, ವಿರೋಧಿಸುವವರು ಕೂಡಾ ಆ ಚಿತ್ರವನ್ನು ನೋಡಿದೊಡೆ ತುಂಬು ಮನದಿಂದ ಮೆಚ್ಚಲೇಬೇಕು. ಅಷ್ಟು ಆಕರ್ಷಣೀಯ. ಆ ನಿಲುವು, ಬಣ್ಣ, ಚರ್ಮದ ಕಾಂತಿ, ಮುಗುಳು ನಗುವನ್ನು ಮೆಚ್ಚದಿರಲು ಸಾಧ್ಯವೇ? ನಿಜವಾಗಿಯೂ ಹೇಗಿದ್ದರೋ ಗೊತ್ತಿಲ್ಲ. ಅಪ್ಪನ ಕಪಾಟಿನ ಬಾಗಿಲಿಗೆ ಅಂಟಿದ್ದ ರಾಜೀವ್ ಗಾಂಧಿ ಮಾತ್ರ ತುಂಬು ಸುಂದರ.
ಕಪಾಟಿನ ಹತ್ರ ಯಂತ ಮಾಡ್ತಿದ್ಯೆà? ಅಪ್ಪ ಹೊರಗಿನಿಂದ ಕೂಗಿದರೆ, “ರಾಜಕುಮಾರನ್ನ ನೋಡ್ತಿದ್ದಿ…’ ಎಂದು ನಾನು ಉತ್ತರಿಸುತ್ತಿದ್ದೆ. ಆಗ ಟಿವಿ ಇರಲಿಲ್ಲ. ವೃತ್ತ ಪತ್ರಿಕೆ ಬರುತ್ತಿರಲಿಲ್ಲ. ಬಣ್ಣದ ಫೋಟೊ ಎಂದರೆ ಕ್ಯಾಲೆಂಡರಿನ ಒಂದಷ್ಟು ದೇವರು. ಜೊತೆಗೆ ಕಪಾಟಿನ ಒಳಭಾಗದಲ್ಲಿ ಸದಾ ನಿಂತೇ ಇರುತ್ತಿದ್ದ ಈ ಇಬ್ಬರು ಅಂದಗಾರರು. ಅವರನ್ನು ನೋಡನೋಡುತ್ತಾ ಕಪಾಟಿನ ಒಳಗೇನಿರಬಹುದೆಂಬ ಕುತೂಹಲ ಕಡಿಮೆಯಾಯಿತು. ಇವರಿಬ್ಬರ ಆಕರ್ಷಣೆಯೇ ಅಧಿಕವಾಯಿತು.
ಮಾದರಿ ಹೀರೋ ಅವರೊಬ್ಬರೇ!
ಇದೆಲ್ಲ ನನ್ನ ಪ್ರಾಥಮಿಕ ಶಾಲೆಯ ಕಾಲದಲ್ಲಿದ್ದ ಕುತೂಹಲಗಳು. ನಂತರ ರಾಜೀವ್ ಗಾಂಧಿ, ರಾಜಕುಮಾರ್ ಯಾರೆಂದು ಗೊತ್ತಾಯಿತು. ರಾಜಕುಮಾರ್ ಬಗ್ಗೆ ತೀವ್ರ ಆಕರ್ಷಣೆ, ಒಂಥರಾ ಕ್ರಷ್ ಫೀಲ…. ಈಗಲೂ ಆ ಪ್ರೀತಿ ಹಾಗೆಯೇ ಇದೆ ಬಿಡಿ. ವೀರಪ್ಪನ್ ಅವರನ್ನು ಹೊತ್ತೂಯ್ದ ಸಮಯದಲ್ಲಿ ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದೆ. ಆಗ ಬಹಳ ಬೇಸರವಾಗಿ ಅಳು ಬಂದಿತ್ತು. ಅವರು ತೀರಿಕೊಂಡಾಗ ಪಿಯುಸಿ. ಆಗಂತೂ ಸಿಕ್ಕಾಪಟ್ಟೆ ಅತ್ತುಬಿಟ್ಟಿದ್ದೆ. ನಾನು ಸಿನೆಮಾ ನೋಡುವ ಕಾಲಕ್ಕೆ ರಾಜ್‌ಕುಮಾರ್ ಸಿನೆಮಾದಲ್ಲಿ ಅಭಿನಯಿಸುವುದನ್ನು ಬಿಟ್ಟಾಗಿತ್ತು. ಟಿವಿಯಲ್ಲಿ ನೋಡಿದ್ದಷ್ಟೇ. ಆದರೂ ಆ ನಟನ ಮೇಲಿನ ಆಕರ್ಷಣೆಯಾದರೂ ಎಂಥದ್ದು? ಆರಾಧನೆ ಎನ್ನುವ ಹಾಗೆ. ಹೀರೋ ಎಂದರೆ ಮಾದರಿ, ಹೀರೋ ಎಂದರೆ ಅಂದಗಾರ, ಹೀರೋ ಎಂದರೆ ಸಂಸ್ಕಾರವಂತ, ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುವವ, ಹೀರೋ ಎಂದರೆ ಗಂಭೀರ, ಧೀರೋದಾತ್ತ! ಹೀಗೆ ಮಹಾಕಾವ್ಯದ ನಾಯಕನ ಗುಣಲಕ್ಷಣಗಳನ್ನೇ ಹೊಂದಿದ, ಚಿತ್ರಗಳಲ್ಲಿ ಅಭಿನಯಿಸಿದ ನಟನನ್ನು ಸಹಜವಾಗಿಯೇ ನಾನು ಗೌರವಿಸಿದೆ. ಈಗ ಆ ರೀತಿಯ ವ್ಯಕ್ತಿತ್ವವನ್ನು ಚಿತ್ರಗಳಲ್ಲಿ ತೋರಿಸುವ ಹೀರೋಗಳು ಯಾರಿದ್ದಾರೆ?
ಈಗಲೂ ಅಪ್ಪನ ಆ ಕಪ್ಪು ಕಪಾಟಿನ ಒಳಭಾಗದಲ್ಲಿ ಅವರಿಬ್ಬರೂ ನಗುತ್ತಿದ್ದಾರೆ. ಅದನ್ನು ಕೀಳುವ ಮನಸ್ಸು ಅಪ್ಪನಿಗೆ ಬಂದೇ ಇಲ್ಲ. ನನಗೀಗಲೂ ಕಪಾಟಿನ ಬಗ್ಗೆ ಅದೇ ಕುತೂಹಲವಿದೆ. ಆ ಚಿತ್ರಗಳ ಮೇಲೂ ಅಷ್ಟೇ ಪ್ರೀತಿಯಿದೆ. ಯಾವ ಹೀರೋ ಇಷ್ಟ ಎಂದರೆ ಸದಾ ಕಾಲವೂ ನನ್ನ ನಾಲಿಗೆಯಿಂದ ಹೊರಡುವ ಒಂದೇ ಹೆಸರು- ರಾಜ್‌ಕುಮಾರ್!
-ಮೇದಿನಿ ಕೆಸವಿನಮನೆ