Advertisement

ಅಪ್ಪಾ, ನಾನ್ಯಾವತ್ತೂ ನಿಮ್ಮ ಜೇಬಿಗೆ ಕತ್ತರಿಯಾಗಲ್ಲ!

03:50 AM Apr 26, 2017 | |

ಕೆಲವೊಮ್ಮೆ ಹಾಗಾಗಿಬಿಡುತ್ತೆ ಮನೆಯ ಜವಾಬ್ದಾರಿ, ಆಫೀಸಿನ ರಗಳೆ, ಗೆಳೆಯರೊಂದಿಗಿನ ಬ್ಯುಸಿ ಶೆಡ್ನೂಲ್‌ ಮಧ್ಯೆ ಮಕ್ಕಳೊಂದಿಗೆ “ಅಪ್ಪ’ ಮಾತಾಡುವುದೇ ಕಡಿಮೆ ಆಗುತ್ತೆ. ಅಂಥ ಸಂದರ್ಭದಲ್ಲಿ ಸೂಕ್ಷ್ಮ ಮನಸ್ಸಿನ ಮಕ್ಕಳು ತುಂಬಾ ನೊಂದುಕೊಳ್ಳುತ್ತಾರೆ. ಅಂಥದೇ ಮನಸ್ಸಿನ ಮಗಳೊಬ್ಬಳು ತಂದೆಗೆ ಬರೆದಿರುವ ಪತ್ರ ಇದು… 

Advertisement

ಯಾರು ಕೂಡ ಬೇಕೂಂತ ದೂರ ಸರಿಯೋದಿಲ್ಲ. ಕೆಲವರಿಗೆ ಕೆಲವು ಕಾರಣಗಳಿರುತ್ತೆ. ಆದರೆ ಕಾರಣಾನೇ ಇಲ್ಲದೆ ದೂರ ಸರಿಯುವುದೆಷ್ಟು ಸರಿ?  ಯಾಕೆ ನನ್ನಿಂದ ದೂರವಾಗುತ್ತಿದ್ದೀರಾ? ನನ್ನಿಂದ ಏನಾದರೂ ತಪ್ಪಾಗಿದೆಯಾ? ಈ ಪ್ರಶ್ನೆಗಳನ್ನು ಹಲವು ಬಾರಿ ಕೇಳಿದರೂ ಉತ್ತರವಿಲ್ಲ. ನಿಮ್ಮಂತೆಯೇ ಸೌಮ್ಯ ಸ್ವಭಾವದವಳಾಗಬೇಕು ಅಂತೆಲ್ಲಾ ಅಂದುಕೊಂಡು ನಿಮ್ಮದೇ ದಾರಿಯಲ್ಲಿ ನಡೆದು ಸಾಗುತ್ತಿರಬೇಕಾದ್ರೆ ನೀವು ಯಾಕೆ ನನ್ನಿಂದ ದೂರವಾಗುತ್ತಿದ್ದೀರಾಂತ ತಿಳಿಯುತ್ತಿಲ್ಲ. ಯಾಕೆ ಹೀಗೆ? ನಿಮಗೆ ನನ್ನ ಮೇಲೆ ಮೊದಲಿದ್ದ ಪ್ರೀತಿ ಈಗ ಮರೆಯಾಗಿದೆ. ಯಾರೋ ಮೂರನೇ ವ್ಯಕ್ತಿಯನ್ನ ನೋಡಿದ ಹಾಗೆ ನೋಡುತ್ತೀರಿ. ಅಪ್ಪಾ, ನಿಮ್ಮ ಆ ಪ್ರೀತಿ ಎಲ್ಲಿ ಹೋಯಿತು? ಮನೆಗೆ ಬಂದ್ರೆ ಮಾತಿಲ್ಲ, ಕಥೆಯಿಲ್ಲ. ಮನೆಯವರು ಅವರವರ ಪಾಡಿಗಿರುತ್ತೀರಿ. ಅದನ್ನು ನೋಡುತ್ತಿದ್ದರೆ ಯಾಕಾದರೂ ಮನೆಗೆ ಹೋದೆನೋ ಅನ್ನೋ ಭಾವನೆ ಬರುತ್ತೆ ನನಗೆ.

ಅಪ್ಪಾ, ನಾನು ಹೇಗೆ, ಏನು ಅಂತ ನಿಮಗೆ ಚೆನ್ನಾಗಿ ಗೊತ್ತು. ಅದರೂ ನೀವು ನನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಭಾವನೆ ನನ್ನಲ್ಲಿ.  ನಾನು ಯಾವತ್ತೂ ನೀವು ತಲೆ ತಗ್ಗಿಸುವ ಹಾಗೆ ಮಾಡಲ್ಲ. ನಿಮ್ಮ ಮಗಳು ನಾನು! ಒಂದು ವೇಳೆ ನಾನೇ ತಪ್ಪು ಮಾಡಿದ್ದೇನೆ ಎಂಬುದೊಂದು ವಿಚಾರ ನಿಮ್ಮ ಮನದಲ್ಲಿ ಇದ್ದರೆ, ಅದೇನೆಂದು ಹೇಳಿ. ತಿದ್ದಿಕೊಳ್ಳುತ್ತೇನೆ. ನಮ್ಮ ಜೊತೇಲಿ ಯಾರೇ ಇದ್ದರೂ, ಮನೆಯವರಿದ್ದಂತೆ ಆಗೊಲ್ಲ ಅಲ್ವ? ನನ್ನಿಂದ ನಿಮಗೆ ಜವಾಬ್ದಾರಿಗಳು ಹೆಚ್ಚಿವೆ ಎಂಬುದು ಕಾರಣವೆ? ಶಿಕ್ಷಣ, ಮದುವೆ, ಕೆಲಸ, ಎಲ್ಲಕ್ಕೂ ನನ್ನಿಂದಲೇ ಖರ್ಚು ಅಂತಲೇ? ಅದೇ ಕಾರಣವಾಗಿದ್ದರೆ ಕೇಳಿ, ನಾನು ಎಂದಿಗೂ ನಿಮ್ಮ ಆದಾಯದ ಮೂಲವಾಗಿರುತ್ತೇನೆಯೇ ಹೊರತು ನಿಮ್ಮ ಜೇಬಿನ ಕತ್ತರಿಯಾಗುವವಳಲ್ಲ. ಈಗಾಗಲೇ ಸ್ವಾವಲಂಬನೆಯ ದಾರಿ ತುಳಿದಿದ್ದೇನೆ. ನನ್ನ ಸಂಪಾದನೆ, ನನ್ನ ಖರ್ಚು ಎಂಬ ತತ್ವಕ್ಕೆ ಅಂಟಿಕೊಂಡವಳು ನಾನು. 

ನನ್ನನ್ನು ಬಿಟ್ಟು ನೀವು ಸಂತೋಷದಿಂದ ಇರುತ್ತೀರಿ ಅಂತಾದರೆ ದೂರವೇ ಉಳಿದುಬಿಡುತ್ತೇನೆ. ಆದರೆ, ನೀವು ನನ್ನೊಂದಿಗೆ ಮುಂಚಿನಂತೆಯೇ ಇರುತ್ತೀರಿ ಎಂಬ ನಿರೀಕ್ಷೆಯಲ್ಲಿ ನಾನಂತೂ ಕಾದಿರುತ್ತೇನೆ.
ಶ್ರೀಪ್ರಿಯಾ, ಮೂಡಬಿದಿರೆ ಆಳ್ವಾಸ್‌ ಕಾಲೇಜು, ಮೂಡಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next