Advertisement

ಶಹೆನ್‌ಶಾಗೆ ಫಾಲ್ಕೆ ಗೌರವ

10:19 AM Sep 27, 2019 | mahesh |

ಭಾರತೀಯ ಸಿನಿಮಾ ರಂಗಕ್ಕೆ ಸಲ್ಲಿಸಿದ ಸೇವೆಗಾಗಿ, ಬಾಲಿವುಡ್‌ನ‌ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಅವರಿಗೆ ಅತ್ಯುನ್ನತ ಪುರಸ್ಕಾರ ದಾದಾ ಸಾಹೇಬ್‌ ಫಾಲ್ಕೆ ಒಲಿದು ಬಂದಿದೆ. ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಎದುರಿಸಿ ಎತ್ತರಕ್ಕೇರಿದ ಅಮಿತಾಭ್‌ ಬಚ್ಚನ್‌ ಅವರು ತಮ್ಮ ಈ 76ರ ಇಳಿವಯಸ್ಸಿನಲ್ಲೂ ಬಿಡುವಿಲ್ಲದ ನಟ. ಅಮಿತಾಭ್‌ರ ಸಿನೆಮಾಯಾನದತ್ತ ಒಂದು ಹಿನ್ನೋಟ ಇಲ್ಲಿದೆ…

Advertisement

ಅಮಿತಾಭ್‌ ಬಚ್ಚನ್‌…ಈ ಹೆಸರು ಕೇಳಿದೊಡನೆ ಆ್ಯಂಗ್ರಿ ಯಂಗ್‌ ಮ್ಯಾನ್‌ ಲುಕ್‌ ಕಣ್ಮುಂದೆ ಹಾದು ಹೋಗುತ್ತೆ. ಭಾರತೀಯ ಚಿತ್ರರಂಗ ಕಂಡ ಅಪರೂಪದ ನಟ. ಸ್ಟಾರ್‌ಗಿರಿಯ ಜತೆಗೆ ತಮ್ಮ ವಿದ್ವತ್ತು, ವಿನಯ ವಂತಿಕೆ, ಹಸನ್ಮುಖದಿಂದ ಎಲ್ಲರನ್ನೂ ಸೆಳೆಯುವ ನಟ. ಅವರಿಗೆ ಎಂದೋ ದಾದಾ ಸಾಹೇಬ್‌ ಫಾಲ್ಕೆ ಪುರಸ್ಕಾರ ಲಭಿಸಬೇಕಿತ್ತು ಎಂಬ ಮಾತಿದ್ದರೂ, ಈಗ ಸಿಕ್ಕಿದೆ. ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡ ಅಮಿತಾಭ್‌ ಬಚ್ಚನ್‌ ಪ್ರತಿ ಬಾರಿಯೂ ಬಲಿಷ್ಠವಾಗಿ ಪುಟಿದು ಎದ್ದಿದ್ದು ಇತಿಹಾಸ…

ಅಮಿತಾಭ್‌ ಬಚ್ಚನ್‌ ನಟರಷ್ಟೇ ಅಲ್ಲ, ಅವರೊಬ್ಬ ನಿರ್ಮಾಪಕ, ನಿರೂಪಕ, ಗಾಯಕ ಕೂಡ. ತಂದೆ ಹರಿವಂಶ್‌ ರಾಯ್‌ ಬಚ್ಚನ್‌ ಹಿಂದಿಯ ಬಹು ದೊಡ್ಡ ಕವಿ ಮತ್ತು ಸಾಹಿತಿ. ಆರಂಭದಲ್ಲಿ ಅಮಿತಾಭ್‌ ಬಣ್ಣದ ಲೋಕಕ್ಕೆ ಪ್ರವೇಶಿಸಬೇಕು ಎಂಬ ಆಸೆ ಹೊರಹಾಕಿದ್ದೇ ತಡ, ಕುಟುಂಬದಲ್ಲಿ ಒಂದಷ್ಟು ಮೌನ ಆವರಿಸಿತ್ತು. ಆದರೂ, ಅಮಿತಾಭ್‌ ಆಸೆಗೆ ಯಾರೂ ಅಡ್ಡಿಯಾಗಲಿಲ್ಲ. ಹಾಗಂತ ಅಮಿತಾಭ್‌ ಸಿನಿಮಾರಂಗಕ್ಕೆ ಸುಲಭವಾಗಿ ಪ್ರವೇಶಿಸಲಿಲ್ಲ. ಬಹಳ ಎತ್ತರ ಇದ್ದ ಕಾರಣಕ್ಕೆ ರಿಜೆಕ್ಟ್ ಆಗಿದ್ದೂ ಉಂಟು. ಧ್ವನಿ ವಿಪರೀತ ಗಡುಸಾಯಿತೆಂದು ಆಕಾಶವಾಣಿಯಿಂದಲೂ ರಿಜೆಕ್ಟ್ ಆಗಿದ್ದರು!

1969ರಲ್ಲಿ ಸಾತ್‌ ಹಿಂದೂ ಸ್ಥಾನಿ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು, ಭಾರತೀಯ ಚಿತ್ರರಂಗದಲ್ಲಿ ಅಗಾಧವಾಗಿ ಬೆಳೆದು  ನಿಂತರು.

ಭಾರತೀಯ ಚಿತ್ರರಂಗಕ್ಕೆ ಹೊಸ ತಿರುವು ಕೊಟ್ಟ ಸಿನಿಮಾ ಅಂದರೆ, ಅದು “ಶೋಲೆ’. ಕರ್ನಾಟಕದ ರಾಮನಗರ ಬೆಟ್ಟದಲ್ಲಿ ಚಿತ್ರೀಕರಣಗೊಂಡಿತ್ತು ಎಂಬುದು ಮತ್ತೂಂದು ವಿಶೇಷ. ಈ ಚಿತ್ರ ಅಮಿತಾಭ್‌ರನ್ನು ಭಾರತೀಯ ಚಿತ್ರ ರಂಗದಲ್ಲಿ ಧ್ರುವತಾರೆಯಾಗಿಸಿಬಿಟ್ಟಿತು.

Advertisement

ಆಗಿನ ಕಾಲದಲ್ಲಿಬ್ರೇಕ್‌ ಡ್ಯಾನ್ಸ್‌ ಹೈಲೈಟ್‌ ಆಗಿತ್ತು. ಆದರೆ, ಅಮಿತಾಭ್‌ ತಮ್ಮದೇ ಶೈಲಿಯ ಸ್ಟೆಪ್‌ ಹಾಕುವ ಮೂಲಕ, ತಮ್ಮದೇ ಶೈಲಿಯಲ್ಲಿ ಫೈಟ್‌ ಮಾಡುವ ಮೂಲಕ ಆ್ಯಂಗ್ರಿ ಯಂಗ್‌ ಮ್ಯಾನ್‌ ಇಮೇಜ್‌ ಕಟ್ಟಿಕೊಂಡಿದ್ದರು.

ಕಾಲಕ್ರ ಮೇಣ ತಮ್ಮೊಂದಿಗೆ ನಟಿಸುತ್ತಿದ್ದ ನಟಿ ರೇಖಾ ಅವರ ಜೊತೆಗೆ ಸ್ನೇಹ ಮತ್ತು ಪ್ರೀತಿ ಗಟ್ಟಿಯಾಗತೊಡಗಿತು. ಅದು ಕಾಂಟ್ರವರ್ಸಿ ಕೂಡ ಆಗಿತ್ತು. ಆ ಕಾಲದಲ್ಲೇ ಬಚ್ಚನ್‌- ರೇಖಾ ಅಂದರೆ ಹಿಟ್‌ ಜೋಡಿ ಎಂಬುದು ಮನೆ ಮಾತಾಗಿತ್ತು.

ಅದು 1982-83ರ ಅವಧಿ. “ಕೂಲಿ’ ಎಂಬ ಚಿತ್ರ ಅವರನ್ನು ಒಮ್ಮೆಲೆ ನೆಲಕಚ್ಚುವಂತೆ ಮಾಡಿತು. ಅದಕ್ಕೆ ಕಾರಣ, ಆ ಚಿತ್ರದಲ್ಲಿದ್ದ ಒಂದು ಫೈಟ್‌. ಆ ಚಿತ್ರದಲ್ಲಿ ನಟ ಪುನೀತ್‌ ಇಸಾರ್‌ ಅವರೊಂದಿಗೆ ಭರ್ಜರಿ ಫೈಟ್‌ ನಡೆಯುವ ಸಂದರ್ಭದಲ್ಲಿ ಪುನೀತ್‌ ಹೊಡೆದ ಪೆಟ್ಟಿಗೆ ಅಮಿತಾಭ್‌ ಗಾಯ ಗೊಂಡರು. ಆ ಘಟನೆಯಿಂದ ತುಂಬಾ ಸೀರಿಯಸ್‌ ಆಗಿ ಆಸ್ಪತ್ರೆಗೆ ದಾಖಲಾದರು. ಅಂದು ದೇಶಾದ್ಯಂತ ಅಭಿಮಾನಿಗಳು, “ಅಮಿತಾಭ್‌ ಬದುಕಿ ಬರಲಿ’ ಎಂದು ಪ್ರಾರ್ಥಿಸಿದ್ದರು. ಆ ಪ್ರಾರ್ಥನೆಯೇನೋ ಫ‌ಲಿಸಿತು. ಆದರೆ, ಅಮಿತಾಭ್‌ರ ಚಿತ್ರ ಬದುಕಿಗೆ ದೊಡ್ಡ ಅಡ್ಡಿಯಾಗಿದ್ದು ಸುಳ್ಳಲ್ಲ. ಅವರ ಬಹುತೇಕ ಚಿತ್ರಗಳು ಫ್ಲಾಪ್‌ ಆಗಲಾರಂಭಿಸಿದವು. ಅಮಿತಾಭ್‌ ಅಕ್ಷರಶಃ ನೆಲಕಚ್ಚಿದರು. ವಿನಾಕಾರಣ ಸಾಲ ಮಾಡಿಕೊಂಡರು. ಸಾಲ ತೀರಿಸಬೇಕು ಎಂಬ ಕಾರಣಕ್ಕೆ, ಎಬಿಸಿಎಲ್‌ (ಅಮಿತಾಭ್‌ ಬಚ್ಚನ್‌ ಕಾರ್ಪೋರೇಷನ್‌ ಲಿಮಿಟೆಡ್‌) ಹೆಸರಲ್ಲಿ ಒಂದು ಕಂಪೆನಿ ಶುರುಮಾಡಿದರು. ಆ ಮೂಲಕ ಒಂದಷ್ಟು ಪ್ರೊಡಕ್ಷನ್ಸ್‌ ಸೇರಿದಂತೆ ಹಲವು ಕಾರ್ಯಕ್ರಮ ರೂಪಿಸಲು ಮುಂದಾದರು. ಆ ಕಂಪೆನಿಯಿಂದ ಬೆಂಗಳೂರಲ್ಲಿ “ಮಿಸ್‌ವರ್ಲ್ಡ್’ ಕಾರ್ಯಕ್ರಮವನ್ನು ಆಯೋಜಿಸಿದರು.

ಇದರಿಂದಾಗಿ ನಿರೀಕ್ಷಿಸಿದ ಲಾಭ ಬರುವುದಿರಲಿ, ಅಮಿತಾಭ್‌ ಯಾವ ಪ್ರಮಾಣದಲ್ಲಿ ಹಣ ಕಳೆದುಕೊಂಡರೆಂದರೆ ಅಕ್ಷರಶಃ ಬೀದಿಗೆ ಬಿದ್ದರು. ತಮ್ಮ ಮೂರು ಬಂಗಲೆಗಳನ್ನು ಕಳೆದುಕೊಂಡರು. ಕೊನೆಗೆ ಸಾಲಗಾರರು ಅವರ ಮನೆ ಬಾಗಿಲಿಗೆ ಬಂದು ದುಡ್ಡು ಕೇಳುವ ಮಟ್ಟಕ್ಕೂ ಪರಿಸ್ಥಿತಿ ಕೈಮೀರಿತ್ತು! ತದ ನಂತರ ಅವರಿಗೆ ಮತ್ತಷ್ಟು ಬ್ಯಾಡ್‌ ಟೈಮ್‌ ಶುರುವಾಗಿಬಿಟ್ಟಿತು. ಅತ್ತ ಮಾಡಿದ ಸಿನಿಮಾಗಳೂ ಫ್ಲಾಪ್‌ ಆಗುತ್ತಿದ್ದವು, ಇತ್ತ ಮೈ ತುಂಬಾ ಸಾಲ. ಇದರಿಂದ ಅಮಿತಾಭ್‌ ಸಂಪೂರ್ಣ ಕುಸಿದಿದ್ದರು.

ಆರಂಭದಲ್ಲಿ ಅಮಿತಾಭ್‌ ಬಿದ್ದ ಕ್ಷಣಗಳು ಹೇಗಿದ್ದವು ಅಂದರೆ ಬಾಲಿ ವುಡ್‌ ಕೂಡ ಅವರಿಂದ ದೂರ ಉಳಿದು ಬಿಟ್ಟಿತು. ಕಷ್ಟದಲ್ಲಿದ್ದ ಅಮಿತಾಭ್‌ಗೆ ಅಮರ್‌ಸಿಂಗ್‌ ಸಾಥ್‌ ಕೊಟ್ಟಿದ್ದರು. ಅಮಿತಾಭ್‌ಗೆ ಮರುಹುಟ್ಟು ಕೊಟ್ಟಿದ್ದು ಕಿರುತೆರೆ. “ಕೌನ್‌ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮ ನಡೆಸಿಕೊಡೋಕೆ ಒಪ್ಪಿದರು. ಯಾವಾಗ ಅವರು ಆ ಕಾರ್ಯಕ್ರಮ ನಡೆಸಿಕೊಡಲು ಮುಂದಾದರೋ, ಅಲ್ಲಿಂದಲೇ ಪುನಃ ಅಮಿತಾಭ್‌ ಸ್ಟಾರ್‌ ತಿರುಗಿತು. ಅಲ್ಲಿಂದ ಅವರು ಹಿಂದಿರುಗಿ ನೋಡಿಯೇ ಇಲ್ಲ.

ಪ್ರೀತಿಯಿಂದ ವಾಚ್‌ ಕೊಟ್ಟ ನಾಗತಿಹಳ್ಳಿ
ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ “ಅಮೃತಧಾರೆ’ ಚಿತ್ರದಲ್ಲೂ ಅಮಿತಾಭ್‌ ಬಚ್ಚನ್‌ ಅವರು, ತಮ್ಮದೇ ಪಾತ್ರ ದ ಲ್ಲಿ (ಅಮಿತಾಭ್‌ ಬಚ್ಚನ್‌) ಕಾಣಿಸಿಕೊಂಡಿದ್ದರು. ನಾಗತಿಹಳ್ಳಿ ಚಂದ್ರಶೇಖರ್‌ ಮುಂಬೈವರೆಗೂ ಹೋಗಿ, ಅಮಿತಾಭ್‌ರಿಗೆ ಅವ ರ ಮನೆಯಲ್ಲೇ ಕಥೆ, ಪಾತ್ರ ವಿವರಿಸಿದ್ದರು. ಆ ಕ್ಷಣ ನಾಗತಿಹಳ್ಳಿ ಚಂದ್ರಶೇಖರ್‌ಗೆ ಭಯ ಕಾಡಿತ್ತು. ಒಪ್ಪುತ್ತಾರೋ, ಇಲ್ಲವೋ ಎಂಬ ಆತಂಕವೂ ಇತ್ತು. ಎಲ್ಲವನ್ನೂ ಆಲಿಸಿದ ಬಳಿಕ ಅಮಿತಾಭ್‌, “ಓಕೆ ಐ ವಿಲ್‌ ಡು ಇಟ್‌’ ಅಂದಿದ್ದರಂತೆ. ಆದರೆ, “ಶೂಟಿಂಗ್‌ ಇಲ್ಲೇ ಮಾಡಿ. ಯಾಕೆಂದರೆ, ಆರೋಗ್ಯ ಸರಿ ಇಲ್ಲ. ನಾನು ಹೊರಗೆ ಬಂದರೆ, ಸೆಕ್ಯುರಿಟಿ ಇತ್ಯಾದಿ ತೊಂದರೆ’ ಅಂತ ಕಂಡೀಷನ್‌ ಹಾಕಿದರಂತೆ. ಸಂಭಾವನೆ ವಿಷಯದಲ್ಲಿ ಅಮಿತಾಭ್‌ ಏನನ್ನೂ ಕೇಳದೆ, “ಒಳ್ಳೆಯ ಸಿನಿಮಾ ಮಾಡಿ’ ಅಂತ ಶುಭಕೋರಿದ್ದರಂತೆ. ಶೂಟಿಂಗ್‌ ನಂತರ ನಾಗತಿಹಳ್ಳಿ, ಅಮಿತಾಭ್‌ಗೆ ಅವರ ಫೇವರೇಟ್‌ ಬ್ರಾಂಡ್‌ನ‌ ವಾಚ್‌ ಕೊಡಲು ಮುಂದಾದರಂತೆ. ಆಗಲೂ ಅಮಿತಾಭ್‌ ನಿರಾಕರಿಸಿದರಂತೆ. “ಸರ್‌, ಸಂಭಾವನೆ ಕೊಡೋಕೆ ಆಗಲ್ಲ. ಆದರೆ ನೆನಪಿಗಾದರೂ ನೀವು ಇದನ್ನು ಪಡೆಯಲೇಬೇಕು’ ಅಂತ ಮನವಿ ಮಾಡಿದ್ದರಿಂದ ಅಮಿತಾಭ್‌ ವಿನಯದಿಂದಲೇ ವಾಚ್‌ ತೆಗೆದುಕೊಂಡರು ಎಂದು ಮೆಲುಕು ಹಾಕುತ್ತಾರೆ ನಾಗತಿಹಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next