“ಆ ಪಾತ್ರಕ್ಕೆ ಮೊದಲು ಅಮಿತಾಭ್ ಬಚ್ಚನ್ ಮೊರೆ ಹೋಗಿದ್ದಾಯ್ತು, ಆಗಲಿಲ್ಲ. ಅನಿಲ್ ಕಪೂರ್ ಅವರ ಹಿಂದೆ ಬಿದ್ದಿದ್ದಾಯೂ ಅದೂ ಸಾಧ್ಯವಾಗಲಿಲ್ಲ. ಆಮೇಲೆ ಮೋಹನ್ ಲಾಲ್ ಬಳಿ ಹೋದರೂ ಆಯ್ಕೆ ಆಗಲೇ ಇಲ್ಲ. ಕೊನೆಗೆ ಆಯ್ಕೆ ಆಗಿದ್ದು ಪಾರ್ಥಿಬನ್. ಈಗ ಚಿತ್ರ ರೆಡಿಯಾಗಿ, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ…’.
ನಿರ್ದೇಶಕ ಸಂತೋಷ್ ತಮ್ಮ ಎರಡನೇ ನಿರ್ದೇಶನದ “ದಾದಾ ಈಸ್ ಬ್ಯಾಕ್’ ಚಿತ್ರದ ಪ್ರಮುಖ ಪಾತ್ರಕ್ಕೆ ಬಾಲಿವುಡ್ ಅಂಗಳದಲ್ಲಿ ಅಲೆದಾಡಿ, ಮಾಲಿವುಡ್‌ಗೂ ಕಾಲಿಟ್ಟು, ಕೊನೆಗೆ ಕಾಲಿವುಡ್‌ನಲ್ಲಿ ಆ ಪಾತ್ರಧಾರಿ ಆಯ್ಕೆ ಮಾಡಿದ ಬಗ್ಗೆ ವಿಸ್ತಾರವಾಗಿ ಹೇಳಿಕೊಳ್ಳುತ್ತಾರೆ ಸಂತೋಷ್. ಹದಿನೈದು ದಿನಗಳ ಕಾಲ ಅಮಿತಾಭ್ ಬಚ್ಚನ್ ಅವರ ಪಿಎ ಬಳಿ ಅಲೆದಾಡಿ, ಕಥೆ ಮತ್ತು ಪಾತ್ರ ವಿವರ ಕೊಟ್ಟರೂ ಅದು ಆಗಲಿಲ್ಲ. ಅನಿಲ್ ಕಪೂರ್ ಭೇಟಿ ಮಾಡಿದಾಗಲೂ ಕೈ ಗೂಡಲಿಲ್ಲ.
ಮೋಹನ್‌ಲಾಲ್ ಆಯ್ಕೆ ಪ್ರಯತ್ನವೂ ಸಾಧ್ಯವಾಗಲಿಲ್ಲ. ಪಾರ್ಥಿಬನ್ ಕಥೆ,ಪಾತ್ರ ಕೇಳಿದಾಕ್ಷಣ, ಒಪ್ಪಿದರು. ಪಾತ್ರಕ್ಕೆ ಜೀವ ತುಂಬಿರುವುದಲ್ಲದೆ, ಅವರೇ ಕನ್ನಡದಲ್ಲಿ ಡಬ್ ಮಾಡಿದ್ದಾರೆ. ಇದೊಂದು ಗ್ಯಾಂಗ್‌ವಾರ್ ಸಿನಿಮಾ. ಆದರೂ ಇಲ್ಲಿ ಹಾಸ್ಯವಿದೆ, ಪ್ರೀತಿ ಇದೆ. ಅಲ್ಲಲ್ಲಿ ಅನುಬಂಧವೂ ಜತೆಗೂಡುತ್ತಾ ಹೋಗುತ್ತೆ. ಇನ್ನೇನು ಚಿತ್ರ ಇಷ್ಟರಲ್ಲೇ ಬಿಡುಗಡೆಯಾಗಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರಲಿ ಅನ್ನುತ್ತಾರೆ ಸಂತೋಷ್.
ನಿರ್ಮಾಪಕ ಶಂಕರ್‌ಗೆ ಸಿನಿಮಾ ಮೂಡಿಬಂದಿರುವ ರೀತಿ ಕಂಡು ಖುಷಿಯಾಗಿದೆಯಂತೆ. ಮೊದಲು ನಾಲ್ವರು ನಿರ್ಮಾಪಕರಿದ್ದರು. ಆ ಪೈಕಿ ಇಬ್ಬರು ಹೊರ ನಡೆದರು. ಆದರೆ, ಸಿನಿಮಾ ಹೇಗೋ ಕಂಪ್ಲೀಟ್ ಆಯ್ತು. ಸಿನಿಮಾ ಮಾಡುವುದು ದೊಡ್ಡದಲ್ಲ, ಅದನ್ನು ತಲುಪಿಸುವುದು ದೊಡ್ಡದು. ಈಗ ಇಬ್ಬರು ದಾದಾಸ್ ನಮ್ಮ ಹಿಂದೆ ನಿಂತಿದ್ದಾರೆ. ಕನಕಪುರ ಶ್ರೀನಿವಾಸ್ ಮತ್ತು ಜಾಕ್‌ಮಂಜು ಇವರಿಬ್ಬರೂ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಆರಂಭದಲ್ಲಿ ಜಾಕ್‌ಮಂಜು ಜತೆ ಮನಸ್ತಾಪ ಇದ್ದು, ಆ ವಿಚಾರ ಚೇಂಬರ್ ಮೆಟ್ಟಿಲು ಏರಿತ್ತು. ಈಗ ಎಲ್ಲವೂ ಬಗೆಹರಿದಿದೆ. ಆಗಸ್ಟ್ ನಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ ಎನ್ನುತ್ತಾರೆ ನಿರ್ಮಾಪಕರು. ನಾಯಕ ಅರುಣ್‌ಗೆ ಈ ಚಿತ್ರ ಮೊದಲ ಕಮರ್ಷಿಯಲ್ ಸಿನಿಮಾವಂತೆ. “ಗೊಂಬೆಗಳ ಲವ್’ ಬಳಿಕ ಮತ್ತದೇ ತಂಡ ಸೇರಿ ಮಾಡಿದ ಸಿನಿಮಾ ಇದು. ಈ ಚಿತ್ರ ನನಗೊಂದು ಹೊಸ ಇಮೇಜ್ ತಂದುಕೊಡುತ್ತದೆ ಎಂಬ ನಂಬಿಕೆ ಇದೆ.
ನಮ್ಮ ಸಣ್ಣ ಸಿನಿಮಾವನ್ನು ದೊಡ್ಡ ವಿತರಕರು ರಿಲೀಸ್ ಮಾಡುತ್ತಿರುವುದೇ ಪ್ಲಸ್ ಪಾಯಿಂಟ್ ಅಂದರು ಅರುಣ್. ವಿತರಕ ಜಾಕ್ ಮಂಜು, “ಒಳ್ಳೇ ತಂಡ ಒಂದೊಳ್ಳೆಯ ಸಿನಿಮಾ ಮಾಡಿದೆ. ಹೊಸಬರು ಈಗ ಸದ್ದು ಮಾಡುತ್ತಿದ್ದಾರೆ. ಈ ಚಿತ್ರ ಕೂಡ ಎಲ್ಲರಿಗೂ ಇಷ್ಟವಾಗುತ್ತೆ’ ಎಂದರು. ಇನ್ನು, ಕನಕಪುರ ಶ್ರೀನಿವಾಸ್ ಅವರಿಗೆ ಹೊಸಬರಲ್ಲಿ ಹೊಸತನ ಇದೆ ಅನಿಸಿ, ಬೆಂಬಲ ಕೊಡುತ್ತಿದ್ದಾರಂತೆ. ಚಿತ್ರದಲ್ಲಿ ಅನೂಪ್ ಸೀಳಿನ್ ಸಂಗೀತ ಹೈಲೆಟ್ ಅಂತೆ.