“ಇದು ಮೂರು ಟ್ರ್ಯಾಕ್‌ಗಳಲ್ಲಿ ಸಾಗುವ ಕಥೆ …’ ಹೀಗೆ ಹೇಳಿ ಒಮ್ಮೆ ಪೋಸ್ಟರ್ ಕಡೆ ನೋಡಿದರು ಸಂತೋಷ್. ಅಲ್ಲಿ “ದಾದಾ’ ಎಂದು ದಪ್ಪ ಅಕ್ಷರದಲ್ಲಿ ಬರೆದಿತ್ತು. ಸಂತೋಷ್ ಮಾತನಾಡುತ್ತಿದ್ದ ವಿಷಯ ಕೂಡಾ “ದಾದಾ’ ಕುರಿತಾಗಿದ್ದೇ. “ಗೊಂಬೆಗಳ ಲವ್’ ಎಂಬ ಸಿನಿಮಾ ಮಾಡಿದ್ದ ನಿರ್ದೇಶಕ ಸಂತೋಷ್ ಆ ನಂತರ “ದಾದಾ ಇಸ್ ಬ್ಯಾಕ್’ ಎಂಬ ಸಿನಿಮಾ ಆರಂಭಿಸಿದ್ದು ನಿಮಗೆ ಗೊತ್ತೇ ಇದೆ. ಈಗ ಆ ಸಿನಿಮಾದ ಚಿತ್ರೀಕರಣ ಮುಗಿದು ಬಿಡುಗಡೆಯ ಹಂತಕ್ಕೆ ಬಂದಿದೆ. “ಗೊಂಬೆಗಳ ಲವ್’ ಸಿನಿಮಾಕ್ಕೆ ಸಿಕ್ಕಂತಹ ಮೆಚ್ಚುಗೆ ಈ ಸಿನಿಮಾಕ್ಕೂ ಸಿಗುತ್ತದೆಂಬ ವಿಶ್ವಾಸ ಸಂತೋಷ್‌ಗಿದೆ.
“ಗೊಂಬೆಗಳ ಲವ್’ ಸಿನಿಮಾ ನಂತರ ಏನು ಮಾಡಬೇಕೆಂದು ಆಲೋಚಿಸುತ್ತಿದ್ದಾಗ ತಲೆಗೆ ಬಂದ ಸಬ್ಜೆಕ್ಟ್ ಇದು. ಗ್ಯಾಂಗ್‌ಸ್ಟಾರ್ ಸಿನಿಮಾ ಮಾಡಿದರೆ ಹೇಗೆ ಎಂದು ಯೋಚಿಸಿ ಕತೆ ಸಿದ್ಧಪಡಿಸಿದೆ. ಕಥೆಯನ್ನು ಗೆಳೆಯ ಅಜೇಯ್‌ಗೆ ಹೇಳಿದೆ. ಕಥೆ ಕೇಳಿದ ಅಜೇಯ್, ಇದು ಕಡಿಮೆ ಬಜೆಟ್‌ನಲ್ಲಿ ಮಾಡುವ ಸಬ್ಜೆಕ್ಟ್ ಅಲ್ಲ, ಮಾಡಿದರೆ ಚೆನ್ನಾಗಿ ಸಿನಿಮಾ ಮಾಡಬೇಕು ಎಂದು ಹೇಳಿದರು. ಈ ಹುಡುಕಾಟದಲ್ಲಿ ನಿರ್ಮಾಪಕ ಶಂಕರ್ ಕೈ ಜೋಡಿಸಿದರು. ಗ್ಯಾಂಗ್‌ಸ್ಟಾರ್ ಸಬ್ಜೆಕ್ಟ್ ಆದರೂ ಮೂರು ಶೇಡ್‌ಗಳಲ್ಲಿ ಸಾಗುತ್ತದೆ. ಗ್ಯಾಂಗ್‌ವಾರ್, ಫ್ಯಾಮಿಲಿ ಹಾಗೂ ಎಮೋಶನ್ ಸಾಗುತ್ತದೆ.
ಕ್ಲೈಮ್ಯಾಕ್ಸ್ ತುಂಬಾ ಭಿನ್ನವಾಗಿದ್ದು, ಎಲ್ಲರ ಮನಗೆಲ್ಲುತ್ತದೆ ಎಂಬ ವಿಶ್ವಾಸವಿದೆ’ ಎಂದರು. ಅಂದಹಾಗೆ, ಇದು ಮಾರ್ಕೇಟ್‌ನಲ್ಲಿ ನಡೆಯುವ ಕಥೆಯಂತೆ. ಚಿತ್ರದಲ್ಲಿ ತಮಿಳು ನಟ ಪಾರ್ಥಿಬನ್ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಉಳಿದಂತೆ ಅರುಣ್, ಅಜೇಯ್, ಶ್ರಾವ್ಯ ಇಲ್ಲಿ ನಟಿಸಿದ್ದಾರೆ. ನಾಯಕ ಅರುಣ್ ಈ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಸಾಕಷ್ಟು ಶೇಡ್‌ಗಳಲ್ಲಿ ಅವರು ಕಾಣಿಸಿಕೊಂಡಿದ್ದು, ಅನುಭವಿ ನಟರ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ಅವರಿಗೆ ಖುಷಿ ಕೊಟ್ಟಿದೆಯಂತೆ.
“ಚಿತ್ರದ ಕ್ಲೈಮ್ಯಾಕ್ಸ್ ಅದ್ಭುತವಾಗಿ ಮೂಡಿ ಬಂದಿದ್ದು, ಎಲ್ಲರ ಮನತಟ್ಟುತ್ತದೆ ಎಂಬ ವಿಶ್ವಾಸವಿದೆ’ ಎಂಬುದು ಅವರ ಮಾತು. ಇನ್ನು, ಈ ಚಿತ್ರದಲ್ಲಿ ಅಜೇಯ್ ಕೂಡಾ ನಟಿಸಿದ್ದಾರೆ. ನಾಯಕಿ ಶ್ರಾವ್ಯ ಇಲ್ಲಿ ಗಾರ್ಮೆಂಟ್ ಕೆಲಸಕ್ಕೆ ಹೋಗುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಕೇವಲ ಮಾಸ್‌ಗಷ್ಟೇ ಅಲ್ಲದೇ, ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸ ಅವರಿಗಿದೆ. ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ ಕೂಡಾ ನಟಿಸಿದ್ದಾರೆ. ನಿರ್ದೇಶಕ ಸಂತೋಷ್ ಸಿನಿಮಾದ ಪಾತ್ರದ ಜೊತೆಗೆ ಅವರ ಮೊದಲ ಸಿನಿಮಾ ತೋರಿಸಿದರಂತೆ. “ಸಂತೋಷ್ ಸಿನಿಮಾ ನೋಡಿ ಖುಷಿಯಾಯಿತು.
ತುಂಬಾ ಚಿಕ್ಕ ವಯಸ್ಸಿನಲ್ಲಿ ಸಂತೋಷ್ ಮನುಷ್ಯ ಸಂಬಂಧ, ಭಾವನೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಚಿತ್ರದಲ್ಲಿ ಮಾನವೀಯ ಸಂಬಂಧಗಳನ್ನು ಎತ್ತಿಹಿಡಿಯುವ ಸನ್ನಿವೇಶಗಳಿದ್ದು, ತುಂಬಾ ಸೊಗಸಾಗಿ ಮೂಡಿಬಂದಿದೆ ಎಂದು ನಿರ್ದೇಶಕ ಸಂತೋಷ್ ಬಗ್ಗೆ ಹೇಳಿದರು ದತ್ತಣ್ಣ. ಚಿತ್ರವನ್ನು ಶಂಕರ್ ನಿರ್ಮಿಸಿದ್ದಾರೆ. ನಿರ್ದೇಶಕರು ಕೊಟ್ಟ ಬಜೆಟ್‌ನಲ್ಲೇ ಸಿನಿಮಾವನ್ನು ಮುಗಿಸಿದ್ದಾರೆ ಎಂದು ಖುಷಿಯಾದರು. ಚಿತ್ರಕ್ಕೆ ಅನೂಪ್ ಸೀಳೀನ್ ಸಂಗೀತ, ನಾಗೇಶ್ ಆಚಾರ್ಯ ಛಾಯಾಗ್ರಹಣವಿದೆ.