ಹುಬ್ಬಳ್ಳಿ: “ಬಸಣ್ಣನನ್ನು ಅಪ್ಪಾಜಿ ರಾಜಕೀಯಕ್ಕೆ ಬರಬೇಡ ಉದ್ಯಮದಲ್ಲಿ ಮುಂದುವರಿಯುವಂತೆ ಆಗಾಗ ಹೇಳುತ್ತಿದ್ದರು. ಆದರೆ, ಬೊಮ್ಮಾಯಿ ಕುಟುಂಬದಿಂದ ಮತ್ತೂಬ್ಬರು ರಾಜಕೀಯಕ್ಕೆ ಬರಬೇಕು ಎಂಬುದು ಜನರ ಒತ್ತಾಯ, ಬೆಂಬಲಿಗರ ಆಪೇಕ್ಷೆಯಾಗಿತ್ತು. ಈ ವಿಚಾರವಾಗಿ ಮನೆಯಲ್ಲಿ ಬಹಳಷ್ಟು ಚರ್ಚೆಗಳು ಆದವು. ಆದರೆ ಜನರ ಬೇಡಿಕೆ ಗೆದ್ದು ಕೊನೆಗೆ ಬಸಣ್ಣ ರಾಜಕೀಯಕ್ಕೆ ಬಂದ. ಅಪ್ಪ ಅಲಂಕರಿಸಿದ ಸ್ಥಾನಕ್ಕೆ ನನ್ನ ತಮ್ಮ ಬಂದಿರುವುದು ಸಾಕಷ್ಟು ಸಂತಸ ಮೂಡಿಸಿದೆ’ ಇದು ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ದ್ವಿತೀಯ ಸಹೋದರಿ ಉಮಾ ಪಾಟೀಲ ಅವರು ಸಹೋದರನ ರಾಜಕೀಯ ಪ್ರವೇಶ, ರಾಜ್ಯದ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಬಗೆಗಿನ ಅನಿಸಿಕೆ.
ಬಾಲ್ಯದಲ್ಲಿ ಸಾಕಷ್ಟು ತುಂಟ: ಬಾಲ್ಯದಲ್ಲಿ ಸಾಕಷ್ಟು ತುಂಟ, ಇಬ್ಬರಿಗಿಂತ ಕಿರಿಯವನಾದರೂ ಇಬ್ಬರೂ ಅಕ್ಕಂದಿರನ್ನು ಮನೆಯಲ್ಲಿ ಹೆದರಿಸುತ್ತಿದ್ದ, ಅಷ್ಟೇ ಅನ್ಯೋನ್ಯವಾಗಿ ಇರುತ್ತಿದ್ದ. ಮನೆ ದುರ್ಗದ ಬಯಲಿನಲ್ಲಿದ್ದರೂ ಅಲ್ಲಿಂದ ನಡೆದುಕೊಂಡೇ ರೋಟರಿ ಶಾಲೆಗೆ ಬರುತ್ತಿದ್ದ. ಶಾಲೆಯಲ್ಲಿ
ಯಾರೇ ರೇಗಿಸಿದರೆ ಮನೆಗೆ ಬಂದು ನನ್ನ ಮುಂದೆ ಹೇಳಿ ಮಾರನೇ ದಿನ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ. ನೆಹರು ಮೈದಾನ ಇವರ ಆಟದ ಸ್ಥಳವಾಗಿತ್ತು. ಹೆಚ್ಚಾಗಿ ಕ್ರಿಕೆಟ್ ಆಟವನ್ನೇ ಆಡುತ್ತಿದ್ದ.
ಇಷ್ಟೊಂದು ಒತ್ತಡದ ನಡುವೆಯೂ ಮಕ್ಕಳು, ಸಂಸಾರದೊಂದಿಗೆ ಸಮಯ ಕಳೆಯಲು ಬಯಸುತ್ತಾರೆ. ಈ ಭಾಗದ ರೊಟ್ಟಿ, ಕೆಂಪು ಚಟ್ನಿ, ಮಿರ್ಚಿ ಮಂಡಕ್ಕಿ, ತಿಳಿ ಸಾರು ಅಂದರೆ ಸಾಕಷ್ಟು ಇಷ್ಟ. ಬಹಳ ಮೃದು ಸ್ವಭಾವ. ತತ್‌ಕ್ಷಣ ಯಾರಿಗಾದರೂ ಬೈದರೆ ನೊಂದುಕೊಳ್ಳುತ್ತಾರೆ ಎನ್ನುವ ಮನಸ್ಥಿತಿ. ಏನನ್ನಾದರೂ ಹೇಳಬೇಕಾದರೆ ಬಹಳ ಯೋಚಿಸಿ ಮಾತನಾಡುವ ವ್ಯಕ್ತಿತ್ವ ಅವರದು. ವೀರಶೈವರು ಎಂದು ಬೆಳೆದುಕೊಂಡು ಬಂದ ಸಂಪ್ರದಾಯ ನಮ್ಮದು.ಅದನ್ನೇ ರೂಢಿಸಿಕೊಂಡಿದ್ದೇವೆ.
ನಮ್ಮ ತಾಯಿಯ ತಂದೆ ಮಲ್ಲಯ್ಯ ಹುರಳಿಕೊಪ್ಪ ಮುಂಬೈ ಸರಕಾರದಲ್ಲಿ ಶಿಗ್ಗಾವಿ-ಸವಣೂರು ಕ್ಷೇತ್ರದ ಶಾಸಕರು. ನಂತರ ನಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರು ಶಾಸಕರು, ಮುಖ್ಯಮಂತ್ರಿ. ಇವರಿಬ್ಬರ ರಾಜಕೀಯ ಜೀವನ ತಮ್ಮನ ಮೇಲೆ ಪ್ರಭಾವ ಬೀರಿದೆ. ಒಂದು ಸಮಯದಲ್ಲಿ ರಾಜಕೀಯಕ್ಕೆ ಬರಬೇಡ ಎಂದು ತಂದೆ ಹೇಳಿದರೂ ಅಂದಿನ ಪರಿಸ್ಥಿತಿ ಇಲ್ಲಿಯವರೆಗೆ ಕರೆದುಕೊಂಡು ಬಂದು ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಇದು ನಮ್ಮ ಕುಟುಂಬದಲ್ಲಿ ಮೂರನೇ ತಲಾಮಾರಿನ ರಾಜಕೀಯವಾಗಿದೆ.
ನ್ಯಾಯ, ಅಭಿವೃದ್ಧಿ ಕನಸು: ನೊಂದವರಿಗೆ ನ್ಯಾಯ, ಪರಿಹಾರ ಕೊಡಿಸು, ಕೈಲಾದ ಸಹಾಯ ಮಾಡು ಎಂದು ಯಾವಾಗಲು ನಾವು ಹೇಳುತ್ತೇವೆ. ಇಂದು ಕೂಡ ಸಹೋದರ ಬಸವರಾಜನಿಗೆ ಹೇಳುವುದು ಇದನ್ನೇ. ಹಿಂದಿನಿಂದಲೂ ಉತ್ತರ ಕರ್ನಾಟಕದ ಅಭಿವೃದ್ಧಿಯಿಂದ ಹಿಂದೆ ಬಿದ್ದಿದೆ ಎನ್ನುವ ಮಾತಿದೆ. ಇದನ್ನು ತೊಲಗಿಸುವ ನಿಟ್ಟಿಲ್ಲಿ ಈ ಭಾಗದ ಅಭಿವೃದ್ಧಿಯೊಂದಿಗೆ ರಾಜ್ಯದ ಸಮಗ್ರ ಪ್ರಗತಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡುತ್ತೇವೆ. ಅವರ ಪ್ರಮಾಣ ವಚನ ಸ್ವೀಕರಿಸುವ ಶುಭ ಸಂದರ್ಭಕ್ಕೆ ಸಂತಸ ಹಂಚಿಕೊಂಡರು.