Advertisement

ಏನಪ್ಪಾ ಲೇಟು?…ಅಪ್ಪನಿಗೆ ಪುಟ್ಟ ದೇವತೆ ಬೇಕಿತ್ತು!

10:24 AM Jul 16, 2021 | Team Udayavani |

ಅಪ್ಪನಿಗೆ ಪುಟ್ಟ ಪುಟ್ಟ ಹೆಜ್ಜೆ ಜೋಡಿಸಿಕೊಂಡು, ಅಪ್ಪನ ಕೈ ಹಿಡಿದು ನಡೆಯುವ ಪುಟ್ಟ ಮಗಳು ಬೇಕಿತ್ತು. ತನ್ನ ಮೋಟು ಜಡೆಯನ್ನು ಕಟ್ಟಿಕೊಂಡು, ಉರುಟು ಬಟ್ಟಲು ಕಣ್ಣು ಅಗಲಿಸಿ ಅಪ್ಪನನ್ನು ರಮಿಸುವ ಪುಟ್ಟ ಮಗಳು ಬೇಕಿತ್ತು. ರಾತ್ರಿ ಇಡೀ ಅಪ್ಪನ ಎದೆ ಮೇಲೆ ಮಲಗಿ ಎದೆ ಬಡಿತ ಕೇಳುವ ಪುಟ್ಟ ಕಂದಮ್ಮ ಬೇಕಿತ್ತು. ತೊಟ್ಟಿಲಲ್ಲಿ ಮಲಗಿ ಅಪ್ಪನ ಜೋಗುಳ ಕೇಳುತ್ತಾ ಮಲಗುವ ಚಿನ್ನಾರಿ ಮಗಳು ಬೇಕಿತ್ತು ಅಪ್ಪನಿಗೆ.

Advertisement

ಬಣ್ಣ ಬಣ್ಣದ ಫ್ರಾಕ್, ನೆರಿಗೆ ಬ್ಲೌಸ್, ಕಡು ಬಣ್ಣದ ರಿಬ್ಬನ್ ಬೇಕೆಂದು ಹಠ ಮಾಡುವ ರಾಜಕುಮಾರಿ ಬೇಕಿತ್ತು ಅಪ್ಪನಿಗೆ. ಅಪ್ಪನ ಬಟ್ಟಲಲ್ಲಿ ಕೈ ಹಾಕಿ ತನ್ನ ಅಪ್ಪನಿಗೆ ಕೈ ತುತ್ತು ಕೊಡುವ ಪುಟ್ಟ ಮಗಳು ಬೇಕಿತ್ತು. ಅಪ್ಪನ ಹಾಗೆ ಜಡೆಯ ಮೀಸೆ ಮಾಡಿ ಅಪ್ಪನನ್ನು ಕೀಟಲೆ ಮಾಡುವ ಪ್ರಿನ್ಸೆಸ್ ಬೇಕಿತ್ತು. ಅಪ್ಪನ ಬೈಕಿನ ಹಿಂದೆ ಕೂತು ಅಪ್ಪನನ್ನು ಗಟ್ಟಿಯಾಗಿ ಅಪ್ಪಿಕೊಂಡು ‘ನಿಧಾನ ಹೋಗಿ ಅಪ್ಪ’ ಎಂದು ಭಯ ಪಡುವ ಚಿನ್ನಮ್ಮ ಬೇಕಿತ್ತು.

ಸಂಜೆ ಅಪ್ಪ ಬರುವಾಗ ಸ್ವಲ್ಪ ತಡ ಆದರೂ ‘ಏನಪ್ಪಾ ಲೇಟು?’ ಎಂದು ಬಾಗಿಲಲ್ಲಿ ತಡೆದು ನಿಲ್ಲಿಸುವ ದ್ವಾರ ಪಾಲಕಿ ಬೇಕಿತ್ತು. ಅಪ್ಪನಿಗೆ ಗಾಢ ನಿದ್ರೆ ಬಂದಾಗ ಅಪ್ಪನ ಪಾದದ ಮೇಲೆ ಸ್ಕೆಚ್ ಪೆನ್ನಿನಲ್ಲಿ ಹಕ್ಕಿಯ ಚಿತ್ರ ಬಿಡಿಸುವ ಪುಟ್ಟ ದೇವತೆ ಬೇಕಿತ್ತು. ಶಾಲೆಯ ವೇದಿಕೆಯಲ್ಲಿ ಯೂನಿಫಾರ್ಮ್ ಹಾಕಿ ನಿಂತು ‘ ಆಪ್ಪಾ ಐ ಲವ್ ಯೂಪಾ’ ಎಂದು ಹಾಡನ್ನು ಹಾಡುವ ಪುಟ್ಟ ಕೋಗಿಲೆ ಬೇಕಿತ್ತು. ರಾತ್ರಿ ಚಂಡಿ ಹಿಡಿದು ಅಪ್ಪನ ಮಡಿಲಲ್ಲಿ ಬೆಚ್ಚಗೆ ಮಲಗುವ ಪುಟ್ಟ ಕಂದಮ್ಮ ಬೇಕಿತ್ತು. ಅಪ್ಪನ ಬೆನ್ನ ಮೇಲೆ ಕೂಸು ಮರಿ ಮಾಡಿ, ಕಣ್ಣಾ ಮುಚ್ಚಾಲೆ ಆಟ ಆಡುವ ಮುದ್ದು ಕೂಸಮ್ಮ ಬೇಕಿತ್ತು ಅಪ್ಪನಿಗೆ.

ಸಮುದ್ರದ ಬದಿಗೆ ಹೋಗಿ ಹೊಯಿಗೆಯಲ್ಲಿ ಅರಮನೆ ಮಾಡಿ, ಅಲೆಗಳು ಅರಮನೆಯನ್ನು ಕೊಚ್ಚಿಕೊಂಡು ಹೋದಾಗ ಜೋರಾಗಿ ಆಳುವ ಮಗಳು ಬೇಕಿತ್ತು. ‘ನೀನೇ ಬ್ರಶ್ ಮಾಡು ಅಪ್ಪ’ ಎಂದು ಹಲ್ಲು ಕಿಸಿದು ನಿಂತ ಪುಟ್ಟ ಮಗಳು ಬೇಕಿತ್ತು ಅಪ್ಪನಿಗೆ. ಅಪ್ಪನ ಎರಡು ಕೈಗಳನ್ನು ಗಟ್ಟಿಯಾಗಿ ಹಿಡಿದು ತನ್ನ ಎದೆಗೆ ಮೆದುವಾಗಿ ಒತ್ತಿ ಹಿಡಿದು ‘ಅಪ್ಪಾ, ನೀವು ನನ್ನನ್ನು ಬಿಟ್ಟು ಹೋಗುವುದಿಲ್ಲ ಅಲ್ವಾ?’ ಎಂದು ಅಂಗಲಾಚುವ ಮಗಳು ಬೇಕಿತ್ತು. ಶಾಲೆಯಲ್ಲಿ ‘ನನ್ನ ಅಪ್ಪ ನನ್ನ ಹೆಮ್ಮೆ’ ಎಂಬ ಪ್ರಬಂಧ ಬರೆದು ಬಹುಮಾನ ಗಿಟ್ಟಿಸಿ ಮನೆಗೆ ಬಂದು ಅಪ್ಪನನ್ನು ಅಪ್ಪಿಕೊಳ್ಳುವ ಪುಟ್ಟ ಸಿಂಡ್ರೆಲಾ ಬೇಕಿತ್ತು ಅಪ್ಪನಿಗೆ. ಬೊಂಬೆಯ ಅಂಗಡಿಗೆ, ಸ್ವೀಟ್ ಅಂಗಡಿಗೆ ಹೋಗಿ ಅದು ಬೇಕೂ ಇದು ಬೇಕೂ ಎಂದು ಅಪ್ಪನ ಕಿಸೆ ಖಾಲಿ ಮಾಡುವ ಮಗಳು ಬೇಕಿತ್ತು ಅಪ್ಪನಿಗೆ. ‘ ಅಪ್ಪಾ, ನಿನ್ನ ಕಣ್ಣಿನಲ್ಲಿ ನನ್ನ ಪ್ರತಿಬಿಂಬ ಚಂದ ಕಾಣ್ತಾ ಇದೆ ‘ ಎಂದು ಸಂಭ್ರಮ ಪಡುವ ಪ್ರಿನ್ಸೆಸ್ ಬೇಕಿತ್ತು ಅಪ್ಪನಿಗೆ.

ಅಪ್ಪ ಸುಸ್ತಾಗಿ ಮನೆಗೆ ಬಂದಾಗ ಅಪ್ಪನ ಹಣೆಯನ್ನು ಪ್ರೀತಿಯಿಂದ ಮೃದುವಾಗಿ ನೇವರಿಸುವ ಪುಟ್ಟಿ ಬೇಕಿತ್ತು ಅಪ್ಪನಿಗೆ. ತನ್ನ ಗೆಳತಿಯರ ಮುಂದೆ ‘ನನ್ನ ಅಪ್ಪ ನನ್ನ ಹೀರೋ’ ಎಂದು ಜಂಬ ಪಡುವ ಮಗಳು ಬೇಕಿತ್ತು. ಅಪ್ಪನ ಜೊತೆಗೆ ಒಂದೇ ಕೊಡೆಯಲ್ಲಿ ಜೋರಾದ ಮಳೆಯಲ್ಲಿ ಅರ್ಧ ಒದ್ದೆ ಆಗಿ ನಡೆಯುತ್ತ ರಚ್ಚ ಪಚ್ಚ ಎಂದು ಸದ್ದು ಮಾಡುವ ಮಗಳು ಬೇಕಿತ್ತು ಅಪ್ಪನಿಗೆ. ಮನೆಗೆ ಬಂದು ಬೇಕೆಂದೇ ಆಕ್ಷಿ! ಎಂದು ಸೀನಿ ಅಪ್ಪನಿಗೆ ಭಯ ಹುಟ್ಟಿಸಿ, ಮತ್ತೆ ಜೋರಾಗಿ ನಗುವ ತುಂಟತನದ ಮಗಳು ಬೇಕಿತ್ತು ಅಪ್ಪನಿಗೆ. ‘ ಅಪ್ಪಾ. ನಿನ್ನ ಮಗಳಿಗೆ ಕೋಪ ಬಂದಿದೆ ‘ ಎಂದು ಹುಸಿ ಮುನಿಸು ತೋರಿ ದೂರ ನಿಂತು, ಮತ್ತೆ ಹತ್ತಿರ ಬಂದು ಮುತ್ತು ಕೊಟ್ಟು ಖುಷಿ ಪಡುವ ಮಗಳು ಬೇಕಿತ್ತು.

Advertisement

‘ಅವ ನನ್ನ ಕ್ಲಾಸ್ ಮೇಟ್ ಹುಡುಗ ನನಗೆ ಕಣ್ಣು ಹೊಡೆದ’ ಎಂದು ಮನೆಗೆ ಬಂದು ಅಪ್ಪನ ಮುಂದೆ ಮುಖ ಊದಿಸುವ ಮಗಳು ಬೇಕಿತ್ತು ಅಪ್ಪನಿಗೆ. ಅಪ್ಪನ ಮುಖದಲ್ಲಿ ದುಗುಡ ಕಂಡಾಗ ‘ಏನಾಯ್ತಪ್ಪ ಇವತ್ತು?’ ಎಂದು ವಿಚಾರಿಸುವ ಮಗಳು ಬೇಕಿತ್ತು ಅಪ್ಪನಿಗೆ. ತನ್ನ ಹುಟ್ಟುಹಬ್ಬಕ್ಕೆ ಅದು ಬೇಕೂ ಇದು ಬೇಕೂ ಎಂದು ಹಠ ಹಿಡಿಯುವ ಅಪ್ಪನ ಜೊತೆ ಮಾತ್ರ ಸೆಲ್ಫಿ ಬೇಕು ಎನ್ನುವ ಮಗಳು ಬೇಕಿತ್ತು.

‘ ಏನಪ್ಪಾ ನಿನಗೆ ಇಷ್ಟು ಪ್ರಾಯ ಆಯ್ತು. ಇನ್ನೂ ಸೆಲ್ಫಿ ತೆಗೆಯಲು ಬರುವುದಿಲ್ಲ’ ಎಂದು ಜೋರಾಗಿ ನಗುವ ಮಾಡರ್ನ್ ಮಗಳು ಬೇಕಿತ್ತು ಅಪ್ಪನಿಗೆ. ‘ನೀವು ಅಣ್ಣನನ್ನು ಜಾಸ್ತಿ ಪ್ರೀತಿ ಮಾಡ್ತಾ ಇದ್ದೀರಿ. ನಾನು ನಿಮ್ಮ ಮಗಳು ಅಲ್ವಾ? ಮಗಳು ಸಂತೆಯಲ್ಲಿ ಸಿಕ್ಕಿದವಳಾ?’ ಎಂದು ಚೂಪು ಮುಖ ಮಾಡುವ ಬಿಗುಮಾನದ ಮಗಳು ಬೇಕಿತ್ತು ಅಪ್ಪನಿಗೆ. ‘ ಅಪ್ಪಾ, ನನ್ನ ಹತ್ತಿರ ಸುಳ್ಳು ಹೇಳಬಾರದು’ ಎಂದು ಅಪ್ಪನ ಕಿವಿ ಹಿಡಿದು ಕೇಳುವ ದೇವತೆ ಬೇಕಿತ್ತು ಅಪ್ಪನಿಗೆ. ಸ್ಲೇಟು ಹಿಡಿದು ಅಪ್ಪನ ಕಾಲಿನ ಮೇಲೆ ಕುಳಿತು ಗಣಿತವನ್ನು ಕಲಿಯುವ ಜೀನಿಯಸ್ ಮಗಳು ಬೇಕಿತ್ತು ಅಪ್ಪನಿಗೆ. ಮನೆಗೆ ಯಾರು ಬಂದರೂ ‘ಇದು ಅಪ್ಪ ಕೊಡಿಸಿದ್ದು, ಅದು ಅಪ್ಪ ಕೊಡಿಸಿದ್ದು’ ಎಂದು ಪ್ರತೀ ಒಂದು ಗಿಫ್ಟ್ ತೋರಿಸುವ, ಜಂಬ ಪಡುವ ಮಗಳು ಬೇಕು.

‘ಏನು ಮಗಳೆ ಮಾರ್ಕ್ಸ್ ಕಡಿಮೆ?’ ಎಂದು ಕೇಳಿದಾಗ ‘ಟೀಚರ್ ಸರಿ ಇಲ್ಲ ಅಪ್ಪ’ ಎಂದು ವಾದಿಸುವ ಮಗಳು ಬೇಕಿತ್ತು ಅಪ್ಪನಿಗೆ. ಪ್ರತಿಭಾ ಕಾರಂಜಿಯಲ್ಲಿ ಪುಟ್ಟ ಪುಟ್ಟ ಬಹುಮಾನ ಪಡೆದು ಅಪ್ಪನ ಮುಂದೆ ತಂದು ಹಿಡಿಯುವ ಮಗಳು ಬೇಕಿತ್ತು ಅಪ್ಪನಿಗೆ. ದೀಪಾವಳಿ ಬಂದಾಗ ಬುಟ್ಟಿ ಬುಟ್ಟಿ ಪಟಾಕಿ ತರಿಸಿ ಕಣ್ಣು ಕಿವಿ ಮುಚ್ಚಿ ನಿಂತು ಅಪ್ಪನಿಂದಲೇ ಪಟಾಕಿ ಸಿಡಿಸಿ ಭಯ ಪಡುವ ಪುಟ್ಟ ಮಗಳು ಬೇಕಿತ್ತು. ಮನೆಯಲಿ ಕೊಟ್ಟ ಬುತ್ತಿಯನ್ನು ಶಾಲೆಯಲ್ಲಿ ಎಲ್ಲರಿಗೂ ಹಂಚಿ ತಾನು ಬಿಸ್ಕೆಟ್ ತಿಂದು ಕ್ಲಾಸಲ್ಲಿ ಕೂರುವ ಮೋಟು ಜಡೆಯ ಹುಡುಗಿ ಬೇಕಿತ್ತು ಅಪ್ಪನಿಗೆ. ಅಪ್ಪನ ಕಣ್ಣಲ್ಲಿ ಧೂಳು ಬಿದ್ದಾಗ ಬಾಯಲ್ಲಿ ಗಾಳಿ ಹಾಕಿ ಊದಿ ‘ಕಸ ಹೋಯ್ತು ಅಪ್ಪಾ’ ಎಂದು ಸಂಭ್ರಮಿಸುವ ಪುಟ್ಟ ಮಗಳು ಬೇಕು ಅಪ್ಪನಿಗೆ.

‘ನಾನು ಮದುವೆಯೇ ಆಗುವುದಿಲ್ಲ. ಅಪ್ಪನನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ!’ ಎಂದು ಅಪ್ಪನ ಎದೆಯಲ್ಲಿ ಪ್ರೀತಿ ಹುಡುಕುವ ಮುಗ್ಧ ಮಗಳು ಬೇಕಿತ್ತು ಅಪ್ಪನಿಗೆ. ಅಪ್ಪ ತಂದ ಚಾಕೋಲೆಟ್ ಅನ್ನು ಕಾಗೆ ಎಂಜಲು ಮಾಡಿ ಮನೆಯ ಎಲ್ಲರಿಗೂ ಹಂಚುವ ಪುಟ್ಟ ದೇವತೆ ಬೇಕಿತ್ತು ಅಪ್ಪನಿಗೆ. ತನ್ನಿಂದ ತಪ್ಪಾದಾಗ ಪುಟ್ಟ ಕಿವಿ ಹಿಡಿದು ಬಸ್ಕಿ ತೆಗೆದು ಒಂದು ಎರಡು ಎಂದು ಎಣಿಸುವ ಪುಟ್ಟ ರಾಜಕುಮಾರಿ ಬೇಕಿತ್ತು. ಕಣ್ಣು ಮತ್ತು ಮೂಗು ಮುಚ್ಚಿ ಹಿಡಿದು ಕಹಿ ಔಷಧಿಯನ್ನು ಕಷ್ಟ ಪಟ್ಟು ಕುಡಿಯುವ ಅಪರಂಜಿ ಮಗಳು ಬೇಕಿತ್ತು ಅಪ್ಪನಿಗೆ. ‘ವಾರದ ಏಳೂ ದಿನ ಆದಿತ್ಯವಾರ ಆಗಿದ್ದರೆ ಚೆನ್ನಾಗಿತ್ತು ಅಲ್ವಾ ಅಪ್ಪ?’ ಎಂದು ಬೆಳಿಗ್ಗೆ ಏಳಲು ಉದಾಸೀನ ಮಾಡುವ ಪುಟ್ಟ ಮಗಳು ಬೇಕಿತ್ತು ಅಪ್ಪನಿಗೆ.

ಆದರೆ ಏನು ಮಾಡುವುದು?

ಮಗಳು ಈಗ ದೊಡ್ಡವಳಾಗಿದ್ದಾಳೆ. ಇದ್ಯಾವುದನ್ನು ಅವಳು ಮಾಡುವುದಿಲ್ಲ. ಮಾರು ದೂರ ನಿಂತು ‘ಅಪ್ಪ ಐ ಲವ್ ಯು’ ಅಂತಾಳೆ. ‘ನಿಮ್ಮನ್ನು ಬೆಟ್ಟದಷ್ಟು ಪ್ರೀತಿ ಮಾಡ್ತೇನೆ ಅಪ್ಪ’ ಅನ್ನುತ್ತಾಳೆ. ಮಗಳ ಆಳವಾದ ಕಣ್ಣುಗಳು ಸುಳ್ಳು ಹೇಳುವುದಿಲ್ಲ. ತಾನು ನೋಡಿದ ಪ್ರತೀ ಹುಡುಗನಲ್ಲಿಯೂ ಅವಳು ತನ್ನ ಅಪ್ಪನನ್ನು ಹುಡುಕುತ್ತಾಳೆ. ‘ ಅಪ್ಪಾ, ನೀನು ನನ್ನ ಸ್ಫೂರ್ತಿಯ ಕಣಜ’ ಎನ್ನುತ್ತಾಳೆ. ಅಪ್ಪನ ಎದೆ ಮೇಲೆ ಈಗ ಅವಳು ಮಲಗುವುದಿಲ್ಲ. ಅಪ್ಪನ ಕುತ್ತಿಗೆಯ ಸುತ್ತ ಕೈಗಳ ಹಾರ ಹಾಕಿ ಮೀಸೆಯನ್ನು ಮುಟ್ಟುವುದಿಲ್ಲ. ಛೇ! ಅವಳು ದೊಡ್ಡವಳು ಆಗಲೇ ಬಾರದಿತ್ತು!

*ರಾಜೇಂದ್ರ ಭಟ್ ಕೆ, ಜೇಸಿಐ ರಾಷ್ಟ್ರೀಯ ತರಬೇತುದಾರರು

Advertisement

Udayavani is now on Telegram. Click here to join our channel and stay updated with the latest news.

Next