Advertisement

ಬುರ್ಖಾಧಾರಿಗಳೂ ನಿನಗೆ ಮತ ಹಾಕಿದ್ದಾರೆ: ಯೋಗಿಗೆ ತಂದೆಯ ಕಿವಿಮಾತು

11:37 AM Mar 22, 2017 | Team Udayavani |

ಡೆಹಾರಾಡೂನ್‌ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ತಂದೆ, 84ರ ಹರೆಯದ ನಿವೃತ್ತ ವಲಯ ಅರಣ್ಯಾಧಿಕಾರಿ, ಆನಂದ್‌ ಸಿಂಗ್‌ ಬಿಷ್‌ತ್‌ ಅವರು ತಮ್ಮ ಮಗನಿಗೆ ಕೆಲವೊಂದು ಕಿವಿಮಾತುಗಳನ್ನು ಹೇಳಿದ್ದಾರೆ.

Advertisement

“ಎಲ್ಲರನ್ನೂ ಸಂಭಾಳಿಸಿಕೊಂಡು ಮುನ್ನಡೆಯಬೇಕು. ಬುರ್ಖಾ ತೊಟ್ಟ ಮಹಿಳೆಯರು ಕೂಡ ನಿನಗೆ ಮತ ಹಾಕಿದ್ದಾರೆ ಎನ್ನುವುದನ್ನು ಮರೆಯಬೇಡ; ಎಲ್ಲ ಧರ್ಮೀಯರನ್ನು ನೀನು ಗೌರವಿಸಬೇಕು; ಅವರ ಹೃದಯಗಳನ್ನು ನೀನು ಪ್ರೀತಿ, ಮಮತೆ, ವಾತ್ಸಲ್ಯದಿಂದ ಗೆಲ್ಲಬೇಕು’ ಎಂದು ಆನಂದ್‌ ಸಿಂಗ್‌ ತಮ್ಮ ಮಗನಿಗೆ ಹೇಳಿದ್ದಾರೆ.

ಊರಿಗೆ ಅರಸನಾದರೂ ಹೆತ್ತವರಿಗೆ ಮಗ ಎಂಬ ನಾಣ್ಣುಡಿಯಂತೆ ಸಿಂಗ್‌ ಅವರು ರಾಜ್ಯದ ಮುಖ್ಯಮಂತ್ರಿಯಾಗಿರುವ ತಮ್ಮ ಮಗನಿಗೆ, ಓರ್ವ ಹೊಣೆಯರಿತ ತಂದೆಯಾಗಿ ಈ ಮಾತುಗಳನ್ನು ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡುತ್ತಿದ್ದ ಆನಂದ್‌ ಸಿಂಗ್‌ ಬಿಷ್‌ತ್‌ ಅವರು, “ಮುಸ್ಲಿಂ ಮಹಿಳೆಯರು ಬಿಜೆಪಿಗೆ ಮತ ಹಾಕಿದ್ದಾರೆ. ತ್ರಿವಳಿ ತಲಾಕ್‌ ವಿಷಯದಲ್ಲಿ ಅವರು ಬಿಜೆಪಿಯ ಮೇಲೆ ಭಾರೀ ಭರವಸೆಯನ್ನು ಇರಿಸಿದ್ದಾರೆ. ಎಲ್ಲ ಧರ್ಮೀಯರು ಬಿಜೆಪಿಯಲ್ಲಿ ಮತ್ತು ಆದಿತ್ಯನಾಥ್‌ನಲ್ಲಿ ವಿಶ್ವಾಸ ಇರಿಸಿದ್ದಾರೆ. ಅಂತೆಯೇ ಆತ ಎಲ್ಲರನ್ನೂ ಅಭಿವೃದ್ಧಿಯ ಪಥದಲ್ಲಿ ಒಯ್ಯಬೇಕಾಗಿದೆ.  ಈ ಎಲ್ಲ ವಿಷಯಗಳನ್ನು ಆತ ಸದಾ ಮನಸ್ಸಿನಲ್ಲಿ ಇರಿಸಿಕೊಳ್ಳಬೇಕು’ ಎಂದು ಹೇಳಿದರು.

ಆದಿತ್ಯನಾಥ್‌ ಅವರ ತಂದೆ ಬಿಷ್‌ತ್‌ ಅವರು ಪತ್ನಿ ಸಾವಿತ್ರಿ ಅವರೊಂದಿಗೆ ಪೌಡಿ ಜಿಲ್ಲೆಯ ಪಂಚೂರ್‌ಗ್ರಾಮದಲ್ಲಿ ವಾಸವಾಗಿದ್ದಾರೆ. 

Advertisement

“ನನ್ನ ಮಗ ಹಿಂದೂ ಧರ್ಮದ ಪ್ರಚಾರಕ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಬೇಕು. ಅಧಿಕಾರ ಸ್ವೀಕರಿಸಿದ ಮೊದಲನೇ ಆತ ತನ್ನ ಸಿಬಂದಿಗಳನ್ನು ಕರೆದು ಯಾವತ್ತೂ  ಜನರ ಮನಸ್ಸನ್ನು ನೋಯಿಸುವ ರೀತಿಯಲ್ಲಿ ಮಾತನಾಡಕೂಡದು ಎಂದು ಹೇಳಿದ್ದಾನೆ; ಇದು ನಿಜಕ್ಕೂ ಒಳ್ಳೆಯದು’ ಎಂದು ಬಿಷ್‌ತ್‌ ಹೇಳಿದರು. 

ಅಜಯ್‌ ಸಿಂಗ್‌ ಬಿಷ್‌ತ್‌ ಆಗಿ 1972ರ ಜೂನ್‌ 5ರಂದು ಜನಿಸಿದ್ದ ಆದಿತ್ಯನಾಥ್‌ ಪೌಡಿಯಲ್ಲಿ ತನ್ನ ಆರಂಭಿಕ ಶಿಕ್ಷಣವನ್ನು ಪಡೆದು ಬಳಿಕ ಕೋಟ್‌ವಾರ್‌ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದರು. 1993ರಲ್ಲಿ ಗೋರಖ್‌ಪುರಕ್ಕೆ ತೆರಳಿ ಎಂಎಸ್ಸಿ ಪದವಿ ಪಡೆದರು. 1994ರಲ್ಲಿ ಅವರು ಸನ್ಯಾಸತ್ವವನ್ನು ಸ್ವೀಕರಿಸಿದರು. ಇದನ್ನು ಅರಗಿಸಿಕೊಳ್ಳಲು ತಮ್ಮ ಕುಟುಂಬಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಯಿತು ಎಂದು ಆದಿತ್ಯನಾಥ್‌ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next