ಹಾದಿಗಳು ಹಲವಿದ್ದರೂ ಹೋಗುವ ದಾರಿ ಯಾವುದೆಂಬ ಗೊಂದಲ ನನ್ನಲ್ಲಿದೆ. ಹೆಜ್ಜೆ ಮುಂದಿಡಬೇಕು ಎಂಬ ಮನಸ್ಸಿದೆ, ಆದರೂ ಹೆದರಿಸುವವರು ನೂರು ಮಂದಿ. ಅದೊಂದು ಜೀವ ನನ್ನೊಂದಿಗಿದ್ದರೆ, ಎದೆಯಲ್ಲಿನ ಭಯದ ಛಾಯೆ ಮಾಯವಾಗುತ್ತದೆ. ಪರಕೀಯರ ಮಾತಿನಿಂದ ಆತ್ಮವಿಶ್ವಾಸ ಕುಸಿಯುತ್ತಾ ಬಂದಾಗ, “ನಾನಿದ್ದೇನೆ ನಿನ್ನೊಡನೆ’ ಎಂಬ ನಿನ್ನ ಒಂದು ಮಾತು ಸಾಕು ಆತ್ಮಸ್ಥೈರ್ಯ ನನ್ನಲ್ಲಿ ಮರುಕಳಿಸಲು. ಅತ್ತಾಗ ಗದರಿದೆ, ಬಿದ್ದಾಗ ಕೈಹಿಡಿದು ಎತ್ತಿದೆ, ಗೆದ್ದು ಖುಷಿಯಲ್ಲಿ ಕುಣಿಯುತ್ತಿದ್ದಾಗ ಎಲ್ಲೋ ಮೂಲೆಯಲ್ಲಿ ನಿಂತು ನಸು ನಗೆ ಬೀರಿದೆ. ಸದಾ ಬೆನ್ನಹಿಂದೆ ನಿಂತು ಕಾಣದಂತೆ ನನ್ನ ಕಾಪಾಡಿದೆ.
ಏನೇ ಬೇಕೆಂದು ಹಟ ಮಾಡಿದರೂ ಇಲ್ಲವೆನ್ನದೆ ನನ್ನೆದುರು ಇರಿಸಿದ ಸಾಹುಕಾರ. ಎದೆಯಲ್ಲಿ ಹುಟ್ಟಿದ ಭಯವ ಅಳಿಸಿ, ಹೊಸ ಹುರುಪು ನೀಡುವ ಹಮ್ಮಿರ. ಮಗಳ ಮನವು ಮರಳಿನಂತೆ ಚಂಚಲವೆಂದು ತಿಳಿದರೂ ಮರಳಲ್ಲೇ ಕಲೆಯನ್ನು ನಿರ್ಮಿಸುವ ಕಲಾಗಾರ ನೀನು ಅಪ್ಪ.
ಚಿಕ್ಕವಳಿದ್ದಾಗ ನಿನ್ನ ಹೆಗಲ ಮೇಲೆ ಕೂರಿಸಿಕೊಂಡು, ಸುತ್ತಲ ಜಗವ ತೋರಿಸಿ “ಈ ಪ್ರಪಂಚ ಬಹು ಸುಂದರವಾಗಿದೆ’ ಎಂದೆ. ಮೊದಲ ಬಾರಿ ಸೈಕಲ್ ಕಲಿಯುತ್ತಾ ಬಿದ್ದಾಗ “ಏನೇ ಹೊಸತನ್ನು ಕಲಿಯುವಾಗ ಬೀಳುವುದು ಸಹಜ, ಮೇಲೇಳು ಮತ್ತೆ ಪ್ರಯತ್ನಿಸು, ಹಿಂದಿನಿಂದ ನಿನ್ನ ಧೈರ್ಯವಾಗಿ ನಾನಿರುವೆ’ ಎಂಬ ಭರವಸೆ ನೀಡಿದೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದು, ಕಣ್ಣೀರೊಂದಿಗೆ ನಿನ್ನೆದುರು ನಿಂತಾಗ “ಮುಂದಿನ ಬಾರಿ ಒಳ್ಳೆಯ ಅಂಕ ಪಡೆಯಲು ಪ್ರಯತ್ನಿಸು ಪುಟ್ಟ’ ಎನ್ನುತ್ತಿದ್ದೆ. ಯಾರೊಂದಿಗಾದರೂ ಜಗಳವಾಡಿ ಬಂದಾಗ “ನಿನ್ನ ತಪ್ಪೇನು’ ಎಂದು ಗದರಿ, ಅನಂತರ ನನ್ನ ಪರವಾಗಿ ನಿಂತು ಅವರನ್ನು ಎದುರಿಸುತ್ತಿದ್ದೆ. ಹೀಗೆ ಪ್ರತೀ ಹೆಜ್ಜೆಯನ್ನು ಕೈಹಿಡಿದು ನಡೆಸಿದವನು ನೀನು ಅಪ್ಪ.
ಸಮಾಜಕ್ಕೆ ಹೆದರಿ ನನಗ್ಯಾರೂ ಸ್ನೇಹಿತರಿಲ್ಲಾ ಎಂದು ಕುಸಿದು ಕೂತಾಗ, ಸ್ನೇಹಿತನಾಗಿ ಸಂತೈಸಿದೆ. ಓದಲು ಹೊಸತೊಂದು ಹಾದಿಯನ್ನು ಆರಿಸಿಕೊಂಡಾಗ ಎಲ್ಲರ ವಿರೋಧಗಳ ಮಧ್ಯೆಯೂ “ನಿನ್ನ ಕನಸ ನನಸಾಗಿಸಿಕೊ, ಇಟ್ಟ ಹೆಜ್ಜೆ ಎಂದೂ ಹಿಂದಿಡಬೇಡ’ ಎಂದು ಮಾರ್ಗದರ್ಶನ ನೀಡಿದೆ. ಸಾಗುವ ಹಾದಿಯಲ್ಲಿ ಎದುರಾದ ಕಷ್ಟಗಳ ಎದುರಿ ಸಲು ಹೆದರಿ ನಿನ್ನ ಸಹಾಯ ಕೋರಿದಾಗ, “ಅದು ನಿನ್ನ ಹಾದಿ, ನೀನೇ ಅನುಭವಿಸಬೇಕು, ಎದುರಿಸ ಬೇಕು. ನಿನ್ನ ಗೆಲುವಿನ ಬರುವಿಕೆಗಾಗಿ ನಾನು ಕಾಯುತ್ತಿರುವೆ’ ಎಂದೆ. ಅಂದು ದಿಕ್ಕರಿಯದೆ ಕುಳಿತೆ ನಾನು, ಇಂದಿನವರೆಗೂ ನನ್ನೊಂದಿಗಿದ್ದ ಅಪ್ಪ ಇಂದು ಏಕೆ ಹೀಗೆಂದರು ಎಂದು ದುಃಖವಾಯಿತು. ಆದರೂ ಗೆಲ್ಲಬೇಕು, ಗೆದ್ದು ಅಪ್ಪನೆದುರು ನಿಲ್ಲಬೇಕು ಎಂಬ ಛಲ ಅದೆಲ್ಲಿಂದಲೋ ಮೂಡಿತು. ಕಾರ್ಯ ಸಾಧನೆಯ ಬಳಿಕ ಅವರೆದುರು ನಿಂತು ಬೀಗಿದಾಗ, “ನೀನಿನ್ನು ಯಾರನ್ನೂ ಅವಲಂಬಿಸುವ ಅಗತ್ಯವಿಲ್ಲ, ಜೀವನವನ್ನು ಅದರ ಸವಾಲುಗಳನ್ನು ಸುಗಮವಾಗಿ ಎದುರಿಸಬಲ್ಲೆ ಎಂದು ತಿಳಿಯಿತೆ’ ಎಂದರು. ಅವರಿಂದ ಬಂದ ಮೃದು ಮಾತು ನನ್ನಲ್ಲಿ ಅಪರಾಧಿ ಭಾವವನ್ನು ಮೂಡಿಸಿತು. ಅವರತ್ತ ಕೊಂಚ ಅಂಜಿಕೆಯಿಂದ ನೋಡಿದಾಗ “ಇದಕ್ಕೆಲ್ಲ ತಲೆಕೆಡಸಿಕೊಳ್ಳಬೇಡ, ನಿನ್ನ ಬೆಂಬಲಕ್ಕೆ ಸದಾ ನಾನಿದ್ದೇನೆ’ ಎಂಬ ಆಶಾಭಾವದ ನಗು ಪ್ರತಿಕ್ರಿಯೆಯಾಗಿ ದೊರಕಿದಾಗ ಮನಸ್ಸು ನಿರಾಳವೆನಿಸಿತು.
ಆ ಕ್ಷಣದಿ ನನ್ನ ಮನದಲ್ಲಿ ಮೂಡಿ ಬಂದ ಪದಗಳಿದು…
ಕಳೆಗುಂದಿದ ನನ್ನ ಕಣ್ಣುಗಳಿಗೆ ನಿನ್ನ ನಗು ಕಾಂತಿಯಾಯಿತು…,
ಹೆದರಿದ ಹೃದಯಕ್ಕೆ ನಿನ್ನ ಸ್ವರ ಧೈರ್ಯವಾಯಿತು… ಅಂಜಿಕೆಯ
ಮಾತುಗಳಿಗೆ ನಿನ್ನ ಇರುವಿಕೆ ಬಲ ನೀಡಿತು… ಕತ್ತಲ ಹಾದಿಗೆ ನಿನ್ನ ಆಶೀರ್ವಾದ ದಾರಿದೀಪವಾಯಿತು…,
ನಿನ್ನ ಎಲ್ಲ ಮಾತುಗಳು ನನ್ನ ಜೀವನದ ಗೆಲುವಿಗೆ ಅಡಿಪಾಯವಾಯಿತು.
ಮೇಘ ಆರ್. ಸಾನಾಡಿ, ವಿವೇಕಾನಂದ ಕಾಲೇಜು, ಪುತ್ತೂರು