Advertisement

ತಿ.ನರಸೀಪುರದಲ್ಲಿ ಅಪ್ಪನೇ ಸ್ಪರ್ಧೆ

02:06 PM Apr 15, 2018 | Team Udayavani |

ತಿ.ನರಸೀಪುರ: ಕ್ಷೇತ್ರದಲ್ಲಿ ಸ್ಪರ್ಧಿಸುವ ಸಂಬಂಧ ಅಪ್ಪ ಮತ್ತು ತನ್ನ ನಡುವೆ ಯಾವುದೇ ಗೊಂದಲವಾಗಲಿ, ಭಿನ್ನಾಭಿಪ್ರಾಯವಾಗಲಿ ಇಲ್ಲ ಎಂದು ಸಚಿವರ ಪುತ್ರ, ಅಂಬೇಡ್ಕರ್‌ ವಸತಿ ಯೋಜನೆ ಜಾಗೃತ ಸಮಿತಿ ಅಧ್ಯಕ್ಷ ಸುನೀಲ್‌ ಬೋಸ್‌ ಸ್ಪಷ್ಟಪಡಿಸಿದರು.

Advertisement

ಪಟ್ಟಣದ ಜೋಡಿ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ವಿಧಾನಸಭಾ ಚುನಾವಣೆ ಪ್ರಚಾರ ಆರಂಭಿಸುವ ಸಂಬಂಧ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ,

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ನಡುವೆ ಯಾವುದೇ ವೈಮನಸ್ಸಿಲ್ಲ. ಅವರಿಬ್ಬರೂ ರಾಜಕಾರಣದಲ್ಲಿ ಎಂದೆಂದಿಗೂ ಒಂದೇ ಆಗಿದ್ದಾರೆ. ರಾಜಕೀಯವಾಗಿ ಕೈ ಹಿಡಿದಂತಹ ಜಿಲ್ಲೆಯ ಜನರನ್ನು ಬಿಟ್ಟು ಹೋಗಲು ಮನಸ್ಸಿಲ್ಲದ್ದರಿಂದ ಮಹದೇವಪ್ಪ ಅವರೇ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಗೊಂದಲಗಳಿಗೆ ತೆರೆ ಎಳೆದರು.

ಪ್ರಗತಿಯ ಪಥದಲ್ಲಿರುವ ತಿ.ನರಸೀಪುರ ಕ್ಷೇತ್ರದಲ್ಲಿ ಬಾಕಿ ಉಳಿದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಬೇಕಾದರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಲೇಬೇಕು. ಪ್ರತಿ ಪಕ್ಷಗಳ ಅಭ್ಯರ್ಥಿಗಳು ಎಷ್ಟೇ ಅಪಪ್ರಚಾರ ಮಾಡಿದರೂ ಸಚಿವರ ವ್ಯಕ್ತಿತ್ವ, ಸಾರ್ವಜನಿಕ ಜೀವನದಲ್ಲಿನ ಬದ್ಧತೆ ಅರಿತಿರುವ ಕ್ಷೇತ್ರದ ಜನರು ಯಾವುದಕ್ಕೂ ಕಿವಿಗೊಡದೆ ಕಾಂಗ್ರೆಸ್‌ ಕೈ ಹಿಡಿಯಲಿದ್ದಾರೆ. ಪಕ್ಷದ ಕಾರ್ಯಕರ್ತರು ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಹಲವರು ಕಾಂಗ್ರೆಸ್‌ಗೆ ಸೇರ್ಪಡೆ: ರಾಜಕಾರಣದಲ್ಲಿ ಯಾರೂ ಶತ್ರುಗಳೂ ಅಲ್ಲ ಎನ್ನುವ ಮಾತಿನಂತೆಯೇ ಕ್ಷೇತ್ರದಲ್ಲಿ ಕಾಂಗ್ರೆಸ್‌ ಚುನಾವಣೆ ಪ್ರಚಾರವನ್ನು ಆರಂಭಿಸುವ ಮೊದಲು ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳಲ್ಲಿರುವ ಮುಖಂಡರು ಕಾಂಗ್ರೆಸ್‌ ಸೇರ್ಪಡೆಗೊಳ್ಳಲಿದ್ದಾರೆ ಎಂದು ಸುನೀಲ್‌ ಬೋಸ್‌ ತಿಳಿಸಿದರು.

Advertisement

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಪ್ರಯುಕ್ತ ಬಾಬಾ ಸಾಹೇಬರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕೆಪಿಸಿಸಿ ಉಪಾಧ್ಯಕ್ಷ ಹೊನ್ನನಾಯಕ, ಪಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಕೆ.ವಜ್ರೆಗೌಡ, ತಾಪಂ ಸದಸ್ಯರಾದ ಕೆ.ಎಸ್‌.ಗಣೇಶ, ರಾಮಲಿಂಗಯ್ಯ, ಎಚ್‌.ಎನ್‌.ಉಮೇಶ, ಮೃಗಾಲಯ ಪ್ರಾಧಿಕಾರದ ನಿರ್ದೇಶಕಿ ಲತಾ ಜಗದೀಶ್‌, ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯ ಸೋಸಲೆ ಮಹದೇವಸ್ವಾಮಿ, ಗ್ರಾಪಂ ಸದಸ್ಯ ಚಂದ್ರಧರ, ಮಾಜಿ ಅಧ್ಯಕ್ಷ ಚಿದರವಳ್ಳಿ ಚಂದ್ರಶೇಖರ,

ಮುಖಂಡರಾದ ಟಿ.ಬೆಟ್ಟಹಳ್ಳಿ ಗೋಪಾಲ್‌, ಲಕ್ಷ್ಮೀನಾರಾಯಣ, ಕಲಿಯೂರು ಶಿವಣ್ಣ, ಸಿದ್ದರಾಜು, ಕೇತಳ್ಳಿ ಸಿದ್ದಶೆಟ್ಟಿ, ಎಂ.ಮಹೇಶ, ಕುಕ್ಕೂರು ಶಂಭುಲಿಂಗ, ನಿಲಸೋಗೆ ಮರಿಸ್ವಾಮಿ, ಜೆ.ಅನೂಪ್‌ಗೌಡ, ಗುರುಮಲ್ಲಪ್ಪ, ಗದ್ದೆಮೋಳೆ ವಿಜಯ್‌, ಎಂ.ಮಹೇಶ, ಚೌಹಳ್ಳಿ ಗುರುಮಲ್ಲ, ನಿಲಸೋಗೆ ಸುರೇಶ, ಕೈಯಂಬಳ್ಳಿ ಸುರೇಶ, ಕೆಬ್ಬೆಹುಂಡಿ ಮಹೇಶ, ವೀರಪ್ಪ ಓಡೆಯರಹುಂಡಿ ಬಸವರಾಜು, ಕೋಳಿಮಲ್ಲನಹುಂಡಿ ಕೃಷ್ಣ, ತೊಟ್ಟವಾಡಿ ರವಿ, ಮಲ್ಲಯ್ಯ ಇದ್ದರು.

ಸಿ.ವಿ.ರಾಮನ್‌ ನಗರದಲ್ಲಿ ಸ್ಪರ್ಧೆ!
ಕಾಂಗ್ರೆಸ್‌ ಹೈಕಮಾಂಡ್‌ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಸೂಚನೆಯಂತೆ ಬೆಂಗಳೂರು ನಗರದ ಸಿ.ವಿ.ರಾಮನ್‌ ನಗರ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಈಗಾಗಲೇ ಮೂರು ದಿನಗಳ ಕಾಲ ಕ್ಷೇತ್ರ ಪ್ರವಾಸವನ್ನು ಕೈಗೊಂಡು ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದೇನೆ. ನರಸೀಪುರ ಹಾಗೂ ಸಿ.ವಿ.ರಾಮನ್‌ ನಗರ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲು ಅಗತ್ಯ ಕಾರ್ಯತಂತ್ರವನ್ನು ರೂಪಿಸಲಾಗುವುದು.
-ಸುನೀಲ್‌ ಬೋಸ್‌, ಸಿ.ವಿ.ರಾಮನ್‌ ನಗರ ಕ್ಷೇತ್ರದ ಕಾಂಗ್ರೆಸ್‌ನ ಸಂಭಾವ್ಯ ಅಭ್ಯಥಿ.

Advertisement

Udayavani is now on Telegram. Click here to join our channel and stay updated with the latest news.

Next