ಹಾವೇರಿ: ಕೇಂದ್ರ ಮತ್ತು ರಾಜ್ಯದ್ದು ಡಬ್ಬಲ್ ಎಂಜಿನ್ ಸರಕಾರ ವಲ್ಲ. ಅವು ಡಬ್ಬಾ ಸರಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದರು.
ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಲಂಬಾಣಿ ಜನರಿಗೆ ಹಕ್ಕುಪತ್ರ ಕೊಡಲು ಕಲಬುರಗಿಗೆ ಮೋದಿ ಬಂದಿದ್ದಾರೆ. ಇದಕ್ಕೆ ಕಾನೂನು ಮಾಡಿದ್ದು ನಾವು. ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಅರಣ್ಯ ಇಲಾಖೆಯಲ್ಲಿ ತಿದ್ದುಪಡಿ ತಂದು ವಾಸಿಸುವವನೇ ಮನೆಯ ಒಡೆಯ ಎಂಬ ಕಾಯ್ದೆ ಮಾಡಿದ್ದು, ಸೇವಾಲಾಲ್ ಜಯಂತಿ ಮಾಡಿದ್ದು ನಾವು. ಈಗ ಮೋದಿ ಲಂಬಾಣಿ ಜನರ ಮತ ಪಡೆಯಲು ಬಂದಿದ್ದಾರೆ. ಅವರೀಗ ವಾರಕ್ಕೊಮ್ಮೆ ರಾಜ್ಯಕ್ಕೆ ಬರುತ್ತಿದ್ದು, ಬಿಜೆಪಿಯವರ ಬಂಡವಾಳವೇ ಮೋದಿ. ರಾಜ್ಯ ಸರ ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಮೋದಿ ಮುಖ ನೋಡಿಯಾದರೂ ರಾಜ್ಯದ ಜನ ಮತ ಹಾಕುತ್ತಾರಾ ಎಂಬ ನಿರೀಕ್ಷೆಯಲ್ಲಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮಾತನಾಡಿ, ಬಿಜೆಪಿ ಸರಕಾರದ ಅವಧಿ ಯಲ್ಲಿ ಅನೇಕರು ಮುಖ್ಯಮಂತ್ರಿ ಗಳಾಗಿದ್ದಾರೆ. ಯಾರಾದರೂ ತಮ್ಮ ಸ್ವಂತ ಜಿಲ್ಲೆಯಲ್ಲಿ ಕಾರ್ಖಾನೆ ತಂದು ಯುವಕರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡಿದ್ದಾರಾ? ನಾವು ಪ್ರತಿ ಮನೆಗೆ ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಹೇಳಿದರೆ, ಬಿಜೆಪಿಯವರು ಎಲ್ಲಿಂದ ಕರೆಂಟ್ ತಂದು ಕೊಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಮುಖ್ಯಮಂತ್ರಿಗಳೇ, ನೀವು ಅಥವಾ ನಿಮ್ಮ ಸಚಿವರನ್ನು ನಮ್ಮೊಂದಿಗೆ ಕಳುಹಿಸಿ. ಎಲ್ಲಿಂದ ಕರೆಂಟ್ ತರುತ್ತೇವೆ ಎಂಬುದನ್ನು ತೋರಿಸುತ್ತೇವೆ ಎಂದು ಸವಾಲೆಸೆದರು.
ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಮೋದಿ ಹುಬ್ಬಳ್ಳಿಗೆ ಬಂದಾಗ ಮಹಾದಾಯಿ ಯೋಜನೆ ಬಗ್ಗೆ ಮಾತನಾಡಲಿಲ್ಲ. ಹುಬ್ಬಳ್ಳಿಯ ಸರಕಾರಿ ಕಾರ್ಯಕ್ರಮದಲ್ಲಿ ಎಲ್ಲಿಯೂ ತ್ರಿವರ್ಣ ಧ್ವಜ ಕಾಣಲಿಲ್ಲ. ಬರೀ ಬಿಜೆಪಿ ಧ್ವಜ ಹಾರಿಸಿ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ್ದೀರಿ. ಬಿಜೆಪಿಯವರು ಮನೆಯಲ್ಲಿ ತಲ್ವಾರ್ ಇಟ್ಟುಕೊಳ್ಳಿ ಎನ್ನುತ್ತಿದ್ದಾರೆ. ಪಾಲಕರೇ, ನಿಮ್ಮ ಮಕ್ಕಳ ಕೈಗೆ ಪೆನ್ನು-ಪುಸ್ತಕ ಕೊಡುತ್ತೀರೋ, ತಲ್ವಾರ್ ಕೊಡುತ್ತೀರೋ ವಿಚಾರ ಮಾಡಿ ಎಂದು ಹೇಳಿದರು.
40 ಪರ್ಸೆಂಟ್ ಬಗ್ಗೆ ಪ್ರಶ್ನೆ ಮಾಡಿದರೆ ಸಿಎಂ ದಾಖಲೆ ಕೊಡಿ ಎನ್ನುತ್ತಾರೆ. ಯಡಿ ಯೂರಪ್ಪ ಮನೆಯಲ್ಲಿ ಯಾರಿಗೆ ಗುತ್ತಿಗೆ ಕೊಡಬೇಕು, ಯಾರಿಗೆ ಎಷ್ಟು ಹಣ ಕೊಡಬೇಕು ಎಂದು ನಿರ್ಧರಿಸುತ್ತಾರೆ. ಬಿಜೆಪಿ ನಾಯಕರೇ ಮಾಡಿರುವ ಲಂಚದ ಆರೋಪ ದಾಖಲೆ ಆಗುವುದಿಲ್ಲವಾ? ಎಂದು ಪ್ರಶ್ನಿಸಿದರು.
ಶರಣರು, ಸಂತರ ಮೇಲೆ ಶಪಥ
ಈಗಾಗಲೇ ಭರವಸೆ ನೀಡಿದಂತೆ ಗೃಹ ಲಕ್ಷ್ಮೀ ಯೋಜನೆಯಡಿ ಪ್ರತಿಯೊಂದು ಕುಟುಂಬದ ಮಹಿಳೆಗೆ ಮಾಸಿಕ 2 ಸಾವಿರ ರೂ., ಪ್ರತಿಮನೆಗೆ 200 ಯೂನಿಟ್ ಉಚಿತ ವಿದ್ಯುತ್, 10 ಕೆ.ಜಿ. ಅಕ್ಕಿಯನ್ನು ಕೊಟ್ಟೇ ಕೊಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಸಂತರು ಮತ್ತು ಶರಣರ ಮೇಲೆ ಶಪಥ ಮಾಡಿದರು.