Advertisement

ಧಾಬಾ ಪ್ರೀತಿ; ಪ್ರಯಾಣಿಕರಿಗೆ ಫ‌ಜೀತಿ

11:48 AM May 22, 2019 | Suhan S |

ಹುಬ್ಬಳ್ಳಿ: ಧಾಬಾಗಳಲ್ಲಿನ ಆಹಾರ ಗುಣಮಟ್ಟ, ಸ್ವಚ್ಛತೆ ಹಾಗೂ ದರದ ಬಗ್ಗೆ ಸಾಕಷ್ಟು ಪ್ರಶ್ನೆಗಳಿರುವಾಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಾತ್ರ ಧಾಬಾಗಳಿಗೆ ಹೆಚ್ಚು ಒಲವು ತೋರುತ್ತಿದೆ. ಒಂದು ಬಸ್‌ಗೆ ಧಾಬಾದಿಂದ ನಿಗಮಗಳಿಗೆ 100 ರೂ. ದೊರೆಯುತ್ತದೆ ಎನ್ನುವ ಕಾರಣ ಮುಂದಿಟ್ಟುಕೊಂಡು ಬೇಕಾಬಿಟ್ಟಿ ಅನುಮತಿ ನೀಡುತ್ತಿದ್ದು, ಧಾಬಾ ಮಾಲೀಕರ ಲಾಬಿಗೆ ಮಣಿದ ಕೆಲ ಅಧಿಕಾರಿಗಳು ಪ್ರಯಾಣಿಕರ ಹಿತಚಿಂತನೆ ಮರೆತಿದ್ದಾರೆ.

Advertisement

ಪ್ರಯಾಣಿಕರ ಹಿತದೃಷ್ಟಿಯಿಂದ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಊಟ, ತಿಂಡಿಗಾಗಿ ಹೊಟೆಲ್ ಅಥವಾ ಧಾಬಾ ಗುರುತಿಸಬೇಕು ಎಂಬುದು ಮೊದಲ ನಿಯಮ. ಆದರೆ ಮೂಲ ಆದ್ಯತೆಯನ್ನು ಮರೆತಿರುವ ಕೆಲ ಅಧಿಕಾರಿಗಳು ಧಾಬಾ ಮಾಲೀಕರ ಲಾಬಿಗೆ ಮಣಿದು ಧಾಬಾಗಳಲ್ಲಿನ ಸ್ವಚ್ಛತೆ, ಪ್ರಯಾಣಿಕರಿಗೆ ನೀಡಬೇಕಾದ ಮೂಲ ಸೌಲಭ್ಯಗಳು, ಆಹಾರದ ಗುಣಮಟ್ಟ ಹಾಗೂ ದರ ಇದಾವುದನ್ನು ನೋಡದೆ ಬೇಕಾಬಿಟ್ಟಿಯಾಗಿ ಪರವಾನಗಿ ನೀಡಲಾಗುತ್ತಿದೆ. ದಾಬಾ ಅನುಮತಿ ನೀಡುವುದೇ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ದೊಡ್ಡ ಕಾರ್ಯವಾಗಿದೆ.

ನಿಯಮಗಳು ಗಾಳಿಗೆ: ಪ್ರಮುಖ ಬಸ್‌ ನಿಲ್ದಾಣದಿಂದ 80-100 ಕಿ.ಮೀ.ಅಥವಾ 2 ತಾಸಿನ ಪ್ರಯಾಣ ನಂತರ ಲಘು ವಿಶ್ರಾಂತಿಗಾಗಿ ಸುಮಾರು 10-15 ನಿಮಿಷಗಳ ಕಾಲ ನೈಸರ್ಗಿಕ ಕರೆ, ಉಪಹಾರಕ್ಕಾಗಿ ಬಸ್‌ ನಿಲ್ಲಿಸಬೇಕೆಂಬುದು ನಿಯಮ. ಆದರೆ ಎಲ್ಲಾ ನಿಗಮಗಳಲ್ಲೂ ಈ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಹುಬ್ಬಳ್ಳಿ ಕೇಂದ್ರ ಬಸ್‌ ನಿಲ್ದಾಣದಿಂದ ಹೊರಡುವ ಬೆಂಗಳೂರು, ಮಂಗಳೂರ, ಕಾರವಾರ, ರಾಯಚೂರು ಹಾಗೂ ಬಾಗಲಕೋಟೆ ಮಾರ್ಗದ ಬಸ್‌ಗಳು ಇಲ್ಲಿನ ಕೇಂದ್ರ ಬಸ್‌ ನಿಲ್ದಾಣ ಬಿಟ್ಟು ಅರ್ಧ ಗಂಟೆ ಕಳೆಯುವುದರೊಳಗೆ ಡಾಬಾಗಳಲ್ಲಿ ನಿಲ್ಲಿಸುತ್ತಿರುವುದು ಸ್ಪಷ್ಟ ನಿದರ್ಶನವಾಗಿದೆ.

ಮಾರ್ಗಬದಿಯ ಫ‌ಲಹಾರ ಮಂದಿರಗಳಿಂದ ನಿಗಮಗಳಿಗೆ ಆದಾಯ ಬರುತ್ತಿದೆ ಎನ್ನುವ ಕಾರಣಕ್ಕೆ ಬೇಕಾಬಿಟ್ಟಿ ಪರವಾನಗಿ ನೀಡುತ್ತಿರುವುದರಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕನಿಷ್ಠ 100 ಕಿ.ಮೀ. ಪ್ರಯಾಣ ನಂತರ ನಿಲುಗಡೆ ಮಾಡಬೇಕೆಂಬ ನಿಯಮ ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. 10-15 ನಿಮಿಷಕ್ಕೂ ಹೆಚ್ಚು ಕಾಲ ನಿಲ್ಲಬಾರದು ಎನ್ನುವುದಿದ್ದರೂ 30-45 ನಿಮಿಷ ನಿಲ್ಲಿಸಲಾಗುತ್ತಿದೆ. ಇದರಿಂದ ಅರ್ಧಗಂಟೆಯಲ್ಲೇ ಊರು ಸೇರುತ್ತೇವೆ ಎನ್ನುವ ಪ್ರಯಾಣಿಕರು ಗಂಟೆಗಟ್ಟಲೆ ಕಾಯುವಂತಾಗುತ್ತಿದೆ.

ಪರವಾನಗಿ ನೀಡಿದ ಮಾರ್ಗ ಬದಿಯ ಫ‌ಲಹಾರ ಮಂದಿರಗಳ ಆಹಾರ ಗುಣಮಟ್ಟ, ಸ್ವಚ್ಛತೆ, ದರ ಪರಿಶೀಲಿಸಬೇಕು. ಇಂತಹ ಧಾಬಾಗಳಲ್ಲಿ ಒಂದು ದೂರು ಪುಸ್ತಕ ಅಳವಡಿಸಬೇಕು. ಪ್ರಯಾಣಿಕರು ಆ ಪುಸ್ತಕದಲ್ಲಿ ದೂರು ದಾಖಲಿಸಿದರೆ ಆ ಕುರಿತು ಕ್ರಮ ಕೈಗೊಳ್ಳಬೇಕೆಂಬುದು ನಿಯಮದಲ್ಲಿವೆ. ಇನ್ನೂ ಕೆಲ ಧಾಬಾಗಳಲ್ಲಿ ಮದ್ಯ ಸೇವನೆಗೆ ಅವಕಾಶ ಇರುವುದರಿಂದ ಇತರೆ ಪ್ರಯಾಣಿಕರಿಗೂ ಇದರಿಂದ ತೊಂದರೆಯಾಗಿದೆ.

Advertisement

ಪ್ರಮುಖ ನಿಲ್ದಾಣದಿಂದ 90 ಕಿ.ಮೀ. ಅಂತರದಲ್ಲಿ ಯಾವುದೇ ಧಾಬಾ ಅಥವಾ ಹೊಟೇಲ್ಗಳಲ್ಲಿ ನಿಲುಗಡೆ ಮಾಡಬಾರದೆಂಬ ವಾಯವ್ಯ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿಯಿಂದ ಆದೇಶ ಮಾಡಿದ್ದರೂ ಇದನ್ನು ಉಲ್ಲಂಘಿಸಿ ಅನುಮತಿ ನೀಡಲಾಗುತ್ತಿದೆ. ಕೆಎಸ್‌ಆರ್‌ಟಿಸಿ, ಈಶಾನ್ಯ ಸಾರಿಗೆ ಸಂಸ್ಥೆ ಬಸ್‌ಗಳೇ ಹುಬ್ಬಳ್ಳಿಯಿಂದ 20 ಕಿ.ಮೀ. ಅಂತರದಲ್ಲಿರುವ ಧಾಬಾಗಳಲ್ಲಿ ಹೆಚ್ಚಾಗಿ ನಿಲ್ಲಿಸಲಾಗುತ್ತಿದೆ.

ಹೇಳುವುದೊಂದು, ಮಾಡುವುದು ಇನ್ನೊಂದು: ಪರವಾನಗಿ ಅರ್ಜಿ ಸಲ್ಲಿಸುವಾಗ ನೀಡುವ ದರಪಟ್ಟಿ ವಾಸ್ತವದಲ್ಲಿ ಇರಲ್ಲ. ಬಸ್‌ ನಿಲ್ದಾಣಗಳಲ್ಲಿನ ಹೊಟೇಲ್ಗಳಲ್ಲಿ 60-70 ರೂ.ನಲ್ಲಿ ಊಟ ದೊರೆಯುತ್ತಿದೆ. ಇದೇ ಊಟ ಧಾಬಾ ಗಳಲ್ಲಿ ಕನಿಷ್ಠ 120-150 ರೂ. ಇದು ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ.

ಧಾಬಾ ಲಾಬಿ: ವಿಭಾಗೀಯ ಕಚೇರಿ ಹಂತದಲ್ಲಿ ಧಾಬಾ ಪರಿಶೀಲಿಸಿ ಕೇಂದ್ರ ಕಚೇರಿಯ ಅನುಮೋದನೆ ಪಡೆದು ಒಪ್ಪಂದ ಮಾಡಿಕೊಳ್ಳಬೇಕು. ಪರವಾನಗಿ ನೀಡಲು ನಿಯಮದ ಪ್ರಕಾರ ಅವಕಾಶ ಇಲ್ಲದಿದ್ದರೆ ಜನಪ್ರತಿನಿಧಿಗಳಿಂದ ಒತ್ತಡ ಹಾಕಿಸಿ ಪರವಾನಗಿ ಪಡೆಯಲಾಗುತ್ತಿದೆ. ಇನ್ನೂ ವಿಭಾಗೀಯ ಕಚೇರಿಗಳಲ್ಲಿ ಕೆಲಸ ಆಗದಿದ್ದರೆ ಕೇಂದ್ರ ಕಚೇರಿಗಳಲ್ಲಿ ತಮ್ಮ ಕೆಲಸ ಮಾಡಿಕೊಳ್ಳುವಂತಹ ಲಾಬಿ ಇದೆ. ಇಂತಹ ಧಾಬಾಗಳಿಗೆ ಪರವಾನಗಿ ನೀಡುವುದಕ್ಕಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದು, ಇದೊಂದು ದೊಡ್ಡ ದಂಧೆಯಾಗಿದೆ.

ಹುಬ್ಬಳ್ಳಿ ನಿಲ್ದಾಣ ಬಿಟ್ಟು ಅರ್ಧ ಗಂಟೆಯಾಗಿರುವುದಿಲ್ಲ ಊಟಕ್ಕೆ ನಿಲ್ಲಿಸುವುದರಿಂದ ಕೆಲ ಪ್ರಯಾಣಿಕರು ಆಕ್ಷೇಪಿಸುತ್ತಾರೆ. ಸಂಸ್ಥೆ ಅಧಿಕಾರಿಗಳು ಮಾಡಿದ ಇಂತಹ ಎಡವಟ್ಟಿನಿಂದ ಪ್ರಯಾಣಿಕರೊಂದಿಗೆ ನಿತ್ಯ ಜಗಳವಾಡಬೇಕು. ಒಂದು ಬಸ್‌ನ ಪ್ರಯಾಣಿಕರಿಗೆ ಬೇಕಾದ ಶೌಚಾಲಯ ವ್ಯವಸ್ಥೆ ಈ ಧಾಬಾದಲ್ಲಿ ಇಲ್ಲ. ಮೂತ್ರ ವಿಸರ್ಜನೆಗೆ ಮಹಿಳೆಯರು ಪಕ್ಕದ ಹೊಲಗಳಿಗೆ ಹೋಗುತ್ತಿರುವುದನ್ನು ನೋಡಿದರೆ ನಮಗೆ ನಾಚಿಕೆಯಾಗುತ್ತದೆ. –ಹೆಸರೇಳಿಚ್ಚಿಸದ ಬಸ್‌ ಚಾಲಕ
• ಹೇಮರಡ್ಡಿ ಸೈದಾಪುರ
Advertisement

Udayavani is now on Telegram. Click here to join our channel and stay updated with the latest news.

Next