ಇದು ನನಗೆ ತುಂಬಾನೇ ಸ್ಪೆಷಲ್ ಸಿನಿಮಾ…’ – ಹೀಗೆ ಹೇಳಿ ಒಂದು ಕ್ಷಣ ಮೌನವಾದರು ಧನಂಜಯ್. ಅವರ ಮಾತಲ್ಲಿ ಒಂದು ತೃಪ್ತಭಾವವಿತ್ತು. ಒಂದೊಳ್ಳೆಯ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುತ್ತಿರುವ ಖುಷಿಯೂ ಇತ್ತು. ಇಷ್ಟು ಹೇಳಿದ ಮೇಲೆ ಧನಂಜಯ್ ಯಾವ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆಂಬುದನ್ನು ಪ್ರತ್ಯೇಕವಾಗಿ ಹೇಳುವಂತಿಲ್ಲ.
ಹೌದು, ಧನಂಜಯ್ ನಿರ್ಮಿಸಿ, ನಟಿಸಿರುವ “ಬಡವ ರಾಸ್ಕಲ್’ ಚಿತ್ರ ಇಂದು ತೆರೆಕಾಣುತ್ತಿದೆ. ಧನಂಜಯ್ ಸ್ವಲ್ಪ ಹೆಚ್ಚೇ ಎಕ್ಸೈಟ್ ಆಗಿದ್ದಾರೆ. ಅದಕ್ಕೆ ಮುಖ್ಯ ಕಾರಣ ನಿರ್ಮಾಣ. ನಟನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು, ಆರಂಭದಲ್ಲಿ ಸಾಕಷ್ಟು ಕಷ್ಟದ ದಿನಗಳನ್ನು ನೋಡಿ, “ಡಾಲಿ’ ಪಾತ್ರದ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದ ನಟ ಧನಂಜಯ್, ನಟನಾಗಿ ಬೇಡಿಕೆಯಲ್ಲಿರುವಾಗಲೇ ನಿರ್ಮಾಣದ ಕನಸು ಕಂಡವರು. ಅದರ ಫಲವಾಗಿ ಮೂಡಿಬಂದಿರೋದು “ಬಡವ ರಾಸ್ಕಲ್’.
ಇದು ಡಾಲಿ ಶ್ರಮದ ಸಿನಿಮಾ, ಜೊತೆಗೊಂದು ಕನಸು. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಹಾಡು, ಟ್ರೇಲರ್ ಹಿಟ್ ಆಗುವ ಮೂಲಕ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.
ಚಿತ್ರದ ಬಗ್ಗೆ ಮಾತನಾಡುವ ಧನಂಜಯ್, “ಬಡವ ರಾಸ್ಕಲ್ ಫ್ಯಾಮಿಲಿ ಆಡಿಯನ್ಸ್‌ಗೆ ಹೆಚ್ಚು ಕನೆಕ್ಟ್ ಆಗುವ ಸಿನಿಮಾ. ಬರೀ ಹೀರೋಯಿಸಂ ಇಲ್ಲ. ಪ್ರತಿ ಪಾತ್ರವೂ ಮಾತನಾಡುತ್ತದೆ. ಅಷ್ಟೊಂದು ಪ್ರಾಮುಖ್ಯತೆ ಇಲ್ಲಿದೆ. ಸಮಯ, ಸಂದರ್ಭಕ್ಕನುಗುಣವಾಗಿ ಹೀರೋಯಿಂಸ ತೋರಿಸಲಾಗಿದೆ’ ಎನ್ನುವ ಧನಂಜಯ್ ಸ್ವಲ್ಪ ಹೆಚ್ಚೇ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಪ್ರೀಮಿಯರ್ ಶೋ. ಮೈಸೂರಿನಲ್ಲಿ ಪ್ರೀಮಿಯರ್ ಶೋ ನಡೆದಿದೆ. ಪ್ರೀಮಿಯರ್ ಶೋ ಟಿಕೆಟ್ ಬುಕ್ಕಿಂಗ್ ಓಪನ್ ಆದ ಕೇವಲ ಎರಡು ಗಂಟೆಯಲ್ಲೇ ಅಷ್ಟೂ ಟಿಕೆಟ್‌ಗಳು ಮಾರಾಟವಾಗುವ ಮೂಲಕ ಜನ ಸಿನಿಮಾದ ಬಗೆಗಿನ ಕುತೂಹಲ ತೋರಿಸಿದ್ದಾರೆ.
ಇನ್ನು, ಮೊದಲ ಬಾರಿಗೆ ನಿರ್ಮಾಣ ಮಾಡಿರುವ ಧನಂಜಯ್‌ಗೆ ಮುಂದೆ ಮತ್ತಷ್ಟು ಸಿನಿಮಾಗಳನ್ನು ನಿರ್ಮಿಸುವ ಕನಸಿದೆ. “ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳನ್ನು ನಿರ್ಮಿಸಿ, ಹೊಸಬರಿಗೆ ಅವಕಾಶ ನೀಡುವ ಕನಸಿದೆ. ಅವೆಲ್ಲವೂ “ಬಡವ ರಾಸ್ಕಲ್’ ಮೇಲೆ ನಿಂತಿದೆ. ಈಗಾಗಲೇ ಸಿನಿಮಾ ನೋಡಿರುವವರು ನಿರ್ಮಾಪಕರಾಗಿಯೂ ಯಶಸ್ವಿಯಾಗುತ್ತೀರಿ ಎನ್ನುವ ಭರವಸೆ ನೀಡಿದ್ದಾರೆ. ಅಂತಿಮವಾಗಿ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದಷ್ಟೇ ಮುಖ್ಯವಾಗುತ್ತದೆ’ ಎನ್ನುವುದು ಧನಂಜಯ್ ಮಾತು.
“ಬಡವ ರಾಸ್ಕಲ್’ ಸಾಕಷ್ಟು ಅಡೆತಡೆಗಳನ್ನು ದಾಟಿಕೊಂಡು ಬಂದು ಇಂದು ತೆರೆಕಾಣುತ್ತಿದೆ. ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದು, ಧನಂಜಯ್, ಅಮೃತಾ ಅಯ್ಯಂ ಗಾರ್, ರಂಗಾಯಣ ರಘು, ತಾರಾ, ನಾಗಭೂಷಣ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ರವಿಪ್ರಕಾಶ್ ರೈ