Advertisement

ಗ್ರಾಮಾಭಿವೃದ್ಧಿ ಮಹಿಳಾ ಸಶಕ್ತೀಕರಣದ ಶಕ್ತಿ: ಡಾ|ಹೇಮಾವತಿ ವೀ. ಹೆಗ್ಗಡೆಯವರಿಗೆ ಪೌರ ಸಮ್ಮಾನ

01:44 AM Jul 10, 2022 | Team Udayavani |

ಬೆಳ್ತಂಗಡಿ: ಗ್ರಾಮೀಣ ಭಾಗದಲ್ಲಿ ಬೆಳೆದಿರುವ ನನಗೆ ಮಹಿಳೆಯರ ತಳಮಟ್ಟದ ಕಷ್ಟಗಳನ್ನು ಕಂಡಾಗ ಅವರಿಗೆ ಬದುಕು ಕಟ್ಟಿಕೊಡುವ ಹಾಗೂ ಸ್ವಾವಲಂಬಿ ಗಳನ್ನಾಗಿಸುವ ಹಂಬಲವಿತ್ತು, ಆದರೆ ಅವಕಾಶವಿರಲಿಲ್ಲ. ನಾನು ಶ್ರೀ ಕ್ಷೇತ್ರಕ್ಕೆ ಬಂದ ಬಳಿಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ತೊಡಗಿಸಿಕೊಂಡು ಆನೇಕ ಕಾರ್ಯಕ್ರಮ ಆಯೋಜಿಸಿ ಜನರ ಆರ್ಥಿಕ ಮಟ್ಟ ಸುಧಾರಣೆಗೆ ಪ್ರಯತ್ನಿಸಿದ್ದೇನೆ ಎಂಬ ಸಾರ್ಥಕ್ಯ ಹೊಂದಿದ್ದೇನೆ ಎಂದು ಧರ್ಮಸ್ಥಳದ ಡಾ| ಹೇಮಾವತಿ ವೀ. ಹೆಗ್ಗಡೆಯವರು ಅಭಿಪ್ರಾಯಪಟ್ಟರು.

Advertisement

ಮಂಗಳೂರು ವಿ.ವಿ.ಯಿಂದ ಗೌರವ ಡಾಕ್ಟರೆಟ್‌ ಪಡೆದ ಹಿನ್ನೆಲೆಯಲ್ಲಿ ಮಂಗಳೂರಿನ ಪೌರ ಸಮ್ಮಾನ ಸಮಿತಿಯಿಂದ ಶನಿವಾರ ಧರ್ಮಸ್ಥಳ ಬೀಡು (ನಿವಾಸ)ವಿನಲ್ಲಿ ನೀಡಲಾದ ಗೌರವ ಸಮ್ಮಾನ ಸ್ವೀಕರಿಸಿ ಮಾತನಾಡಿದರು.

ಗ್ರಾಮೀಣ ಜನರ ಕಷ್ಟ- ಸಮಸ್ಯೆಗಳು, ಸವಾಲುಗಳನ್ನು ಅರಿತಾಗ ನಮಗೆ ನಿಜವಾದ ಜೀವನ ದರ್ಶನವಾಗುತ್ತದೆ. ಅದಕ್ಕಾಗಿ ಜ್ಞಾನವಿಕಾಸ ಕಾರ್ಯಕ್ರಮದಡಿ 253 ತಾಲೂಕುಗಳಲ್ಲಿ ಪ್ರತೀ ತಾಲೂಕಿಗೆ ತಲಾ 25ರಂತೆ 5,500 ಮಹಿಳೆಯರಿಗೆ ಬೇಕಾದ ಮಾಹಿತಿ, ಮಾರ್ಗದರ್ಶನ ಮತ್ತು ಪ್ರೇರಣೆ ನೀಡಲಾಗುತ್ತದೆ. 15 ಸಾವಿರ ಕಾರ್ಯಕರ್ತರಲ್ಲಿ 11 ಸಾವಿರ ಮಂದಿ ಮಹಿಳಾ ಕಾರ್ಯಕರ್ತರಿದ್ದಾರೆ. ಕಾರ್ಯಕರ್ತರ ಶಿಸ್ತು, ನಿಷ್ಠೆ, ಕಾರ್ಯತತ್ಪರತೆ, ಯೋಜನೆಯ ಬಗ್ಗೆ ಅವರಿಗಿರುವ ಪ್ರೀತಿ-ವಿಶ್ವಾಸ ಮತ್ತು ಗೌರವದಿಂದ ನಮ್ಮ ಪ್ರಶಸ್ತಿಗೆ ಗೌರವ ತಂದಿದೆ ಎಂದರು.

ಸಮಿತಿಯ ಪ್ರಧಾನ ಸಂಚಾಲಕ ಐವನ್‌ ಡಿ’ಸೋಜಾ ಮಾತನಾಡಿ, ಶ್ರೀಕ್ಷೇತ್ರದಿಂದ 50 ವರ್ಷಗಳಿಂದ ಸಾವಿರಾರು ಕುಟುಂಬಗಳಿಗೆ ಸ್ವಾವಲಂಬಿ ಜೀವನ ಕಲ್ಪಿಸುವ ಮೂಲಕ ಸಮಾಜದ ಮಾತೃಶ್ರೀಗಳಾಗಿ ಸೇವೆ ನೀಡಿದ್ದೀರಿ. ಈ
ಸಂದರ್ಭ ಮಂಗಳೂರು ವಿ.ವಿ. ನೀಡಿದ ಗೌರವ ಡಾಕ್ಟರೆಟ್‌ ಪದವಿ ಪ್ರಸ್ತುತ. ನಿಮ್ಮ ಸೇವಾ ಕಾರ್ಯದಲ್ಲಿ ಮಂಗಳೂರು ಜನತೆಯ ಸಹಕಾರ ವಿದೆ ಎಂದರು.

ಸಮಿತಿಯ ಕಾರ್ಯದರ್ಶಿ ಜೆ. ನಾಗೇಂದ್ರ ಕುಮಾರ್‌, ಜತೆ ಕಾರ್ಯದರ್ಶಿ ಜೆ. ನಾಗೇಶ್‌, ಪದಾಧಿಕಾರಿಗಳಾದ ಡಾ| ಕೆ. ಜನಾರ್ದನ್‌, ಡಾ| ದೇವರಾಜ್‌ ಕೆ., ರೊನಾಲ್ಡ್‌ರಾಯ್‌ ಕ್ಯಾಸ್ತಲಿನೊ, ಮಾರ್ಸೆಲ್‌ ಮೊಂತೇರೊ, ಮಾಜಿ ಕಾರ್ಪೊರೇಟರ್‌ ಕೆ. ಭಾಸ್ಕರ ರಾವ್‌, ಡಾ| ಕವಿತಾ ಡಿ’ಸೋಜಾ, ಮಹಿಳಾ ಕಾಂಗ್ರೆಸ್‌ ಸದಸ್ಯೆ ಮೀನಾ ಟೆಲ್ಲಿಸ್‌, ಅನಿಲ್‌ ತೋರಸ್‌, ಜೇಮ್ಸ್‌ ಪ್ರವೀಣ್‌, ಜೆ. ಶೇಖರ ಸನಿಲ್‌, ಶ್ರೀಧರ್‌ ಶೆಟ್ಟಿ, ಮಹೇಶ್‌ ಕುಮಾರ್‌, ಆಲಿಸ್ಟನ್‌ ಡಿ’ಕುನ್ಹಾ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next