Advertisement

ಜಾತಿ ಉಲ್ಲೇಖ: ಸಚಿವ ಸದಾನಂದ ಗೌಡರ ಟ್ವಿಟರ್‌ ಸ್ಪಷ್ಟನೆ

09:51 AM Jun 24, 2019 | keerthan |

ಸುಳ್ಯ,: ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್‌ ಮತ್ತು ಕೃಷಿಕ ಸಾಹಿತ್ಯ ಪರಿಷತ್ತು ವತಿಯಿಂದ ಬೆಂಗಳೂರಿನ ಕನ್ನಡ ಸಾಹಿತ್ಯಪರಿಷತ್ತಿನಲ್ಲಿ ಶನಿವಾರ ಆಯೋಜಿಸಿದ್ದ “ನಾಡಪ್ರಭು ಕೆಂಪೇಗೌಡ ಜಯಂತಿ’ ಮತ್ತು “ಕೆಂಪೇಗೌಡರ ಯಲಹಂಕ ಸಂಸ್ಥಾನದ ಇತಿಹಾಸ ಮತ್ತು ಐತಿಹ್ಯದ ಬಗ್ಗೆ ವಿಚಾರ ಸಂಕಿರಣ’ ಸಮಾರಂಭದಲ್ಲಿ ಮಾಡಿದ ಭಾಷಣ ಸಂದರ್ಭ ತಾನಾಡಿರುವ ಮಾತು ವಿವಾದಕ್ಕೆ ಈಡಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರು ಟ್ವಿಟರ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ.

Advertisement

“ನನ್ನ ಹೆಸರಿನೊಂದಿಗೆ ಗೌಡ ಎಂಬುದನ್ನು ಸೇರಿಸಿಕೊಂಡಿದ್ದಕ್ಕೆ ರಾಜ್ಯದ ಮುಖ್ಯಮಂತ್ರಿಯಾಗಿ, ಈಗ ಕೇಂದ್ರ ಸಚಿವನಾಗಿದ್ದೇನೆ. ಅದನ್ನು ಹೇಳಲು ನನಗೆ ಹಿಂಜರಿಕೆ, ನಾಚಿಕೆ ಇಲ್ಲ’ ಎಂಬುದಾಗಿ ಸದಾನಂದ ಗೌಡರು ಭಾಷಣದಲ್ಲಿ ಹೇಳಿದ್ದಾರೆ ಎಂಬ ಅಂಶ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ಜಾತಿ ಎಳೆದು ತಂದಿರುವ ಬಗ್ಗೆ ಹಿಂದೂಪರ, ಬಿಜೆಪಿ ಕಾರ್ಯಕರ್ತರು ಡಿವಿಎಸ್‌ ವಿರುದ್ಧ ಜಾಲ ತಾಣಗಳ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಎಚ್ಚೆತ್ತುಕೊಂಡಿರುವ ಸದಾನಂದ ಗೌಡ ಅವರು ಟ್ವಿಟರ್‌ಮೂಲಕ ಸ್ಪಷ್ಟನೆ ನೀಡಿದ್ದು, “ನನ್ನ ಬಿಜೆಪಿ ಪಕ್ಷ, ನನ್ನ ಹೆತ್ತ ತಾಯಿ ಸಮಾನ. ಕುಗ್ರಾಮ ಮಂಡೆಕೋಲಿನಿಂದ ಬಂದ ಈ ಹುಡುಗನಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ನನ್ನ ಪಕ್ಷ ಒಕ್ಕಲಿಗ ಸಮಾಜಕ್ಕೆ ಉತ್ತಮ ಸ್ಥಾನಮಾನ, ಪ್ರತಿನಿಧಿತ್ವವನ್ನು ನನ್ನ ಮೂಲಕ ಕೊಟ್ಟಿದೆ ಅನ್ನುವ ಮಾತನ್ನು ನಾನು ಹೆಮ್ಮೆಯಿಂದ ಹೇಳಿಕೊಂಡಿದ್ದನ್ನು ಬೇರೆ ರೀತಿ ಅರ್ಥೈಸಲಾಗಿದೆ. ನಾನಿಂದು ನಿರಂತರ ಚುನಾವಣೆಗಳನ್ನು ಗೆಲ್ಲಲು, ಜಾತ್ಯತೀತವಾಗಿ- ಪಕ್ಷಾತೀತವಾಗಿ ನನ್ನನ್ನು ಜನರು ಆಯ್ಕೆ ಮಾಡಲು ನನ್ನ ಪಕ್ಷ ಮತ್ತು ಮೋದಿಯವರ ನಾಯಕತ್ವವೇ ಕಾರಣ. ಮುಂದೆ ಜನ ನಮ್ಮನ್ನು ಗುರುತಿಸುವುದು, ಗೌರವಿಸುವುದು ಮೋದಿಯವರ ನೇತೃತ್ವದಲ್ಲಿ ನಾವು ಮಾಡುವ ಕೆಲಸದಿಂದ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next