ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಭಾವನಾತ್ಮಕ ವಿಚಾರ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅಭಿಪ್ರಾಯಪಟ್ಟರು.
ಬಿಬಿಎಂಪಿಯ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ. ದೇಣಿಗೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ವಿಚಾರ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ ತೆಗೆದುಕೊಂಡಿದೆ ಎಂದರು.
ಇದನ್ನೂ ಓದಿ:ಏಕಾಂಗಿ ಪ್ರತಿಭಟನೆ ಮಾಡುತ್ತಿದ್ದ ದಿಶಾ ರವಿ: ಕೋರ್ಟ್ ನಲ್ಲಿ ಕಣ್ಣೀರು!
ರಾಮಮಂದಿರ ನಿರ್ಮಾಣ ಈ ದೇಶದ ಜನರ ಸುದೀರ್ಘ ಕನಸು. ರಾಮಮಂದಿರ ನಿರ್ಮಾಣ ಮಾಡಲು ಹಲವರು ಅವರೇ ಕಟ್ಟಡ ನಿರ್ಮಾಣ ಮಾಡುವುದಾಗಿ ಮುಂದೆ ಬಂದಿದ್ದರು. ಆದರೆ, ಈ ದೇಶದ ಎಲ್ಲರೂ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಬೇಕು ಎನ್ನುವ ಉದ್ದೇಶದಿಂದ ಇದಕ್ಕೆ ಅವಕಾಶ ನೀಡಿಲ್ಲ. ದೇಶದಲ್ಲಿ 1947ರ ನಂತರ ಸರ್ಕಾರದ ಯಾವುದೇ ಹಣಕಾಸಿನ ನೆರವು ಇಲ್ಲದೆ, ಯಾವುದಾದರು ಬೃಹತ್ ಯೋಜನೆ ನಡೆಯುತ್ತಿದೆ ಎಂದರೆ ಅದು ರಾಮಮಂದಿರ ನಿರ್ಮಾಣ ಮಾತ್ರ ಎಂದು ಹೇಳಿದರು.
ಈ ದೇಶದ ಪ್ರತಿಯೊಬ್ಬರ ಕೊಡುಗೆಯಿಂದ ರಾಮ ಮಂದಿರ ನಿರ್ಮಾಣವಾಗುತ್ತಿದೆ. ರಾಮಮಂದಿರ ಜೊತೆಗೆ ರಾಮನ ಆದರ್ಶವೂ ಪಾಲನೆ ಆಗಬೇಕು. ನಗರದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಸಮರ್ಪಣಾ ನಿಧಿಯನ್ನು ನಗರದ 18 ಲಕ್ಷ ಗುರಿ ಇತ್ತು. ಇದೀಗ 23 ಲಕ್ಷ ಮುಟ್ಟಿದ್ದೇವೆ ಎಂದು ಸದಾನಂದ ಗೌಡರು ಮಾಹಿತಿ ನೀಡಿದರು.