Advertisement

Temple: ದ.ಭಾರತದಲ್ಲಿರುವ ಪ್ರಮುಖ ದೇಗುಲಗಳ ದರ್ಶನಕ್ಕೆ ಸಹಾಯಧನ- ರಾಮಲಿಂಗಾ ರೆಡ್ಡಿ

11:15 PM Jan 14, 2024 | Team Udayavani |

ಬೆಂಗಳೂರು: ಕರ್ನಾಟಕ ಭಾರತ್‌ ಗೌರವ್‌ ಕಾಶಿ-ಗಯಾ ದರ್ಶನ ಮಾದರಿಯಲ್ಲೇ ಕರ್ನಾಟಕ ಭಾರತ್‌ ಗೌರವ್‌ ದಕ್ಷಿಣ ಯಾತ್ರೆ ನಡೆಸಲು ಹಿಂದೂ ಧಾರ್ಮಿಕ ದತ್ತಿ ಮತ್ತು ಧರ್ಮಾದಾಯ ಇಲಾಖೆ ನಿರ್ಧರಿಸಿದ್ದು, ದಕ್ಷಿಣ ಭಾರತದಲ್ಲಿರುವ ಪ್ರಮುಖ ದೇವಾಲಯಗಳ ದರ್ಶನಕ್ಕೆ ರಾಜ್ಯ ಸರಕಾರ ಸಹಾಯಧನ ನೀಡಲಿದೆ.

Advertisement

ಪ್ರಸ್ತುತ ಚಳಿ ಹೆಚ್ಚಿರುವುದರಿಂದ ಕಾಶಿ-ಗಯಾ ಯಾತ್ರೆಗೆ ಹೆಚ್ಚು ಮಂದಿ ನೋಂದಣಿ ಮಾಡಿಕೊಳ್ಳುತ್ತಿಲ್ಲ. ಆದರೆ, ರೈಲ್ವೆ ಇಲಾಖೆ 2 ವರ್ಷಗಳಿಗೆಂದು ರೈಲನ್ನು ಕೊಟ್ಟಿದೆ. ಹೀಗಾಗಿ ದಕ್ಷಿಣ ಭಾರತದ ಪ್ರಮುಖ ದೇಗುಲಗಳ ದರ್ಶನಕ್ಕೆ ವ್ಯವಸ್ಥೆ ಮಾಡಲು ತೀರ್ಮಾನಿಸಿದ್ದು, ಕಾಶಿ-ಗಯಾ ಯಾತ್ರೆ ಮಾದರಿಯಲ್ಲೇ ದಕ್ಷಿಣ ಯಾತ್ರೆಗೂ ಸರಕಾರದಿಂದ 5 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ ಎಂದು ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಜನವರಿ ತಿಂಗಳಲ್ಲಿ ಎರಡು ಬಾರಿ ದಕ್ಷಿಣ ಯಾತ್ರೆಗೆ ಅವಕಾಶ ಮಾಡಿಕೊಡಲು ನಿರ್ಧರಿಸಿದ್ದು, ಒಟ್ಟು 15 ಸಾವಿರ ರೂ.ಗಳ ಪ್ಯಾಕೇಜ್‌ ಇದಾಗಿದೆ. ಈ ಪೈಕಿ 5 ಸಾವಿರ ರೂ. ಸರಕಾರ ಭರಿಸಲಿದ್ದು, ಉಳಿದ 10 ಸಾವಿರ ರೂ.ಗಳು ಯಾತ್ರಾರ್ಥಿಗಳದ್ದೇ ಆಗಿರುತ್ತದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ರಾಮೇಶ್ವರದ ರಾಮೇಶ್ವರ, ಕನ್ಯಾಕುಮಾರಿಯ ಶ್ರೀಭಗವತಿ ದೇವಿ, ಮಧುರೈ ಮೀನಾಕ್ಷಿ ಹಾಗೂ ತಿರುವನಂತಪುರದ ಅನಂತಪದ್ಮನಾಭ ದೇವಸ್ಥಾನಗಳ ದರ್ಶನ ಮಾಡಬಹುದಾಗಿದೆ. 6 ದಿನಗಳ ಯಾತ್ರೆಯಲ್ಲಿ ತಿಂಡಿ, ಊಟ, ವಸತಿ ಹಾಗೂ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, 3 ಟೈರ್‌ ಹವಾನಿಯಂತ್ರಿತ ಬೋಗಿಗಳಲ್ಲಿ ಯಾತ್ರಾರ್ಥಿಗಳ ಆರೋಗ್ಯ, ಕ್ಷೇಮಾಭಿವೃದ್ಧಿಗಾಗಿ ವೈದ್ಯಕೀಯ ಸೌಕರ್ಯವನ್ನೂ ಒದಗಿಸಲಾಗಿದೆ.

ಮುಂಗಡ ಟಿಕೆಟ್‌ ಕಾದಿರಿಸಿದವರಿಗೆ ಆದ್ಯತೆ ನೀಡಲಾಗುತ್ತದೆ. ಬೆಳಗಾವಿ, ಹುಬ್ಬಳ್ಳಿ, ಬೀರೂರು, ತುಮಕೂರು, ಹಾವೇರಿ, ದಾವಣಗೆರೆ, ಯಶವಂತಪುರ ನಿಲ್ದಾಣಗಳಿಂದ ಯಾತ್ರೆಯನ್ನು ಆರಂಭಿಸಬಹುದು ಹಾಗೂ ಯಾತ್ರೆ ಪೂರ್ಣಗೊಳಿಸಿ ಮರಳುವಾಗ ಇದೇ ನಿಲ್ದಾಣಗಳಲ್ಲಿ ಇಳಿಯಲೂಬಹುದು. ಮುಂಗಡ ಟಿಕೆಟ್‌ ಕಾದಿರಿಸಲು – 8595931291 / 8595931292 / 8595931294 ಸಂಖ್ಯೆಗಳಿಗೆ ಸಂಪರ್ಕಿಸಬಹುದು.

ಅರ್ಚಕರು, ನೌಕರರಿಗೆ ಉಚಿತ ಯಾತ್ರೆ
ಇಲಾಖೆಯ “ಸಿ” ದರ್ಜೆ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ನೌಕರರಿಗೂ ಕರ್ನಾಟಕ ಭಾರತ್‌ ಕಾಶಿ-ಗಯಾ ದರ್ಶನ ಹಾಗೂ ಕರ್ನಾಟಕ ಭಾರತ್‌ ಗೌರವ್‌ ದಕ್ಷಿಣ ಯಾತ್ರೆಗೆ ಕಳುಹಿಸಿಕೊಡಲಾಗುತ್ತದೆ. ವರ್ಷಕ್ಕೆ ಗರಿಷ್ಠ 1,200 ಮಂದಿಗೆ ಮಾತ್ರ ಅವಕಾಶ ಇರಲಿದ್ದು, ಕುಟುಂಬದ ಓರ್ವ ಸದಸ್ಯರನ್ನು ಮಾತ್ರ ನೋಂದಾಯಿಸಬಹುದು. ಜಿಲ್ಲಾಧಿಕಾರಿ, ತಹಶೀಲ್ದಾರ್‌ ಕಚೇರಿ, ಮುಜರಾಯಿ ಶಾಖೆ, ಧಾರ್ಮಿಕ ದತ್ತಿ ಆಯುಕ್ತರ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಂಡವರಿಗೆ ಆದ್ಯತೆ ನೀಡಲಾಗುತ್ತದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next