ನಗರ: ಮಂಗಳೂರಿನ ಬಿ.ಜಿ. ಎಜುಕೇಶನಲ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಡಿ. 23ರಂದು ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ- 2017 ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ನಳಿನಾಕ್ಷಿ ಎ.ಎಸ್. ಅವರು ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ಫೋಸಿಸ್, ಬಿಪಿಓ, ವಿಪ್ರೋ, ಹಿಂದುಜಾ ಗ್ಲೋಬಲ್ ಸೊಲ್ಯೂಷನ್ಸ್, ವಿನ್‌ಮ್ಯಾನ್ ಸಾಫ್ಟ್ ವೇರ್ ಇಂಡಿಯಾ ಮೊದಲಾದ ಬೆಂಗಳೂರಿನ 24 ಕಂಪೆನಿಗಳು ಹಾಗೂ ಪುತ್ತೂರು, ಮಂಗಳೂರಿನ 6 ಕಂಪೆನಿಗಳು ಪಾಲ್ಗೊಳ್ಳಲಿವೆ. ಸುಮಾರು 500ಕ್ಕೂ ಅಧಿಕ ಉದ್ಯೋಗ ಅವಕಾಶಗಳು ಲಭ್ಯವಿವೆ ಎಂದು ಮಾಹಿತಿ ನೀಡಿದರು.
ಶಾಸಕಿ, ರಾಜ್ಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ ಮೇಳ ಉದ್ಘಾಟಿಸಲಿದ್ದು, ಬಿ.ಜಿ. ಎಜು ಕೇಶನಲ್ ಆ್ಯಂಡ್ ಚಾರಿ ಟೆಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಗಣೇಶ್ ಜಿ. ಭಟ್, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ| ಉದಯಶಂಕರ ಎಚ್., ಕಾಲೇಜು ಶಿಕ್ಷಣ ಇಲಾಖೆಯ ಪ್ಲೇಸ್‌ಮೆಂಟ್ ಸೆಲ್‌ನ ನೋಡೆಲ್ ಅ ಧಿಕಾರಿ ಎ. ನಾರಾಯಣ ಪ್ರಸಾದ್ ಭಾಗವಹಿಸುವರು. ಗ್ರಾಮೀಣ ಪ್ರದೇಶದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಪದವಿ ಪೂರ್ಣಗೊಂಡ ಮತ್ತು ಅಂತಿಮ ಪದವಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಬಿ.ಜಿ. ಎಜುಕೇಶನಲ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್‌ನ ಸಂಪನ್ಮೂಲ ಅಧಿಕಾರಿ ನಳಿನಾಕ್ಷಿ ಎ.ಎಸ್. ಮಾತನಾಡಿ, ಪುತ್ತೂರು, ಸುಳ್ಯ, ಬಂಟ್ವಾಳ, ಮಂಗಳೂರು, ಉಡುಪಿ, ಬೆಳ್ತಂಗಡಿ ಪರಿಸರದ ಸ.ಪ್ರ.ದ. ಕಾಲೇಜಿನ 500 ವಿದ್ಯಾರ್ಥಿಗಳು ಈಗಾಗಲೇ ತಮ್ಮ ಹೆಸರು ನೋಂದಾಯಿಸಿದ್ದಾರೆ. ಸುಮಾರು 800 ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಹೆಸರು ನೋಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೇಳದ ದಿನದಂದು ಪುತ್ತೂರು ಖಾಸಗಿ ಬಸ್ ನಿಲ್ದಾಣದ ಬಳಿಯಿಂದ ಕಾಲೇಜಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಇಂದು ತರಬೇತಿ
ಮೇಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಡಿ. 21ರಂದು ಕಾಲೇಜಿನಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದ ತನಕ ರಾಷ್ಟ್ರೀಯ ಮಾನ್ಯತೆ ಪಡೆದ ತರಬೇತುದಾರರಿಂದ ಉಚಿತ ಸಂದರ್ಶನಪೂರ್ವ ತರಬೇತಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ಲೇಸ್ ಮೆಂಟ್ ಸೆಲ್‌ನ ಸಂಚಾಲಕ ಪದ್ಮನಾಭ, ಕಾಲೇಜಿನ ಆಂತರಿಕ ಗುಣಮಟ್ಟದ ಭರವಸಾ ಕೋಶದ ಸಂಚಾಲಕ ಹರೀಶ್ ನಾಯಕ್ ಎನ್. ಉಪಸ್ಥಿತರಿದ್ದರು.