Advertisement

ಚೀನದಲ್ಲಿ ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆ: ದ.ಕ., ಉಡುಪಿ ಜಿಲ್ಲಾಡಳಿತಗಳು ಅಲರ್ಟ್‌

01:09 AM Dec 25, 2022 | Team Udayavani |

ಮಂಗಳೂರು/ಉಡುಪಿ: ಚೀನದಲ್ಲಿ ಕೊರೊನಾ ಪ್ರಕರಣಗಳು ಉಲ್ಬಣವಾಗುತ್ತಿದ್ದಂತೆಯೇ ಎಲ್ಲ ರಾಜ್ಯಗಳಲ್ಲಿಯೂ ಮುನ್ನೆಚ್ಚರಿಕೆ ವಹಿಸಲು ಕೇಂದ್ರ ಸರಕಾರ ಸೂಚನೆ ನೀಡಿದ್ದು ಕರಾವಳಿಯ ದ.ಕ. ಮತ್ತು ಉಡುಪಿ ಜಿಲ್ಲಾಡಳಿತಗಳು ಅಲರ್ಟ್‌ ಆಗಿವೆ.

Advertisement

ಉಡುಪಿ ಜಿಲ್ಲೆಯಲ್ಲಿ ಒಂದು ತಿಂಗಳಿನಿಂದ ಯಾರಿಗೂ ಕೋವಿಡ್‌ ಸೋಂಕು ದೃಢಪಟ್ಟಿಲ್ಲ. ದ.ಕ. ಜಿಲ್ಲೆಯಲ್ಲಿ ಶೂನ್ಯ, ಒಂದು, ಎರಡು ಹೀಗೆ ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಿವೆ. ಹಾಗಿದ್ದರೂ ಮುನ್ನೆಚ್ಚರಿಕೆ ವಹಿಸಲಾಗುವುದು.

ತಪಾಸಣೆ ಹೆಚ್ಚಳಕ್ಕೆ ನಿರ್ಧಾರ
ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ದಿನಕ್ಕೆ 50ರಿಂದ 100, ದ.ಕ.ದಲ್ಲಿ 150ರಿಂದ 200 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಜ್ವರ, ಶೀತ ಅಥವಾ ಯಾವುದೇ ರೀತಿಯ ಆರೋಗ್ಯ ಸಂಬಂಧಿ ತೊಂದರೆಗಳು ಕಂಡುಬಂದಲ್ಲಿ ತಪಾಸಣೆ ಮಾಡಿಕೊಳ್ಳುವಂತೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ವಿದೇಶಗಳಿಂದ ಬರುವರ ಮೇಲೆ ಹೆಚ್ಚಿನ ನಿಗಾ ವಹಿಸಲು ಉದ್ದೇಶಿಸಲಾಗಿದ್ದು, ಶೀತ ಜ್ವರದ ಲಕ್ಷಣ ಇರುವವರನ್ನು ಕಡ್ಡಾಯ ಮತ್ತು ಉಳಿದವರನ್ನು ರ್‍ಯಾಂಡಮ್‌ ಟೆಸ್ಟಿಂಗ್‌ಗೆ ಒಳಪಡಿಸಲಾಗುತ್ತದೆ.

ನಿರ್ದೇಶನದ ನಿರೀಕ್ಷೆ
ಕೋವಿಡ್‌ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಹಿಂದೆ ಕಾಲಕಾಲಕ್ಕೆ ಮಾರ್ಗಸೂಚಿ ಬಿಡುಗಡೆಗೊಳಿಸುತ್ತಿತ್ತು. ಇದೀಗ ಪರಿಷ್ಕೃತ ಮುನ್ನೆಚ್ಚರಿಕೆ ಮಾರ್ಗಸೂಚಿಯನ್ನು ಜಿಲ್ಲಾಡಳಿತಗಳು ನಿರೀಕ್ಷಿಸುತ್ತಿವೆ. ಮುನ್ನೆಚ್ಚರಿಕೆ ಲಸಿಕೆ ಬಾಕಿ ಇರುವವರು ಪಡೆಯುವಂತೆ ಪ್ರೇರೇಪಿಸುವ ಜಿಲ್ಲಾಡಳಿತ ಚಿಂತನೆ ನಡೆಸಿದೆ. ಲಸಿಕೆ ಪಡೆಯದಿರುವವರು ಸಮೀಪದ ಆರೋಗ್ಯ ಕೇಂದ್ರದಲ್ಲಿ ನೋಂದಣಿ ಮಾಡಿಸಬೇಕು. 20 ಮಂದಿಯ ನೋಂದಣಿ ಆದ ಬಳಿಕ ಅವರೇ ಕರೆ ಮಾಡಿ ತಿಳಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಲಸಿಕೆ ವಿವರ
ಪ್ರಸ್ತುತ ಕೊವ್ಯಾಕ್ಸಿನ್‌ ಮಾತ್ರ ಲಭ್ಯವಿದ್ದು, ದ.ಕ.ದಲ್ಲಿ 41,920 ಡೋಸ್‌, ಉಡುಪಿಯಲ್ಲಿ 10 ಸಾವಿರ ಡೋಸ್‌ ದಾಸ್ತಾನಿದೆ.

Advertisement

ದ.ಕ.ದಲ್ಲಿ 18,85,935 ಮಂದಿ ಮೊದಲ ಡೋಸ್‌ ಪಡೆದಿದ್ದು, ಶೇ. 100.47 ಗುರಿ ಸಾಧನೆಯಾಗಿದೆ. 18,93,641 ಮಂದಿ ಎರಡನೇ ಡೋಸ್‌ ಪಡೆದಿದ್ದು, ಶೇ. 100.41ರಷ್ಟು ಗುರಿ ಸಾಧಿಸಲಾಗಿದೆ. ಮುನ್ನೆಚ್ಚರಿಕೆ ಲಸಿಕೆಯ ಗುರಿ 14,17,729ರಲ್ಲಿ ಕೇವಲ 2,26,373 ಮಂದಿ ಪಡೆದು ಶೇ. 15.97ರಷ್ಟು ಸಾಧನೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ 10,90,865 ಮಂದಿ ಮೊದಲ ಡೋಸ್‌ ಪಡೆದಿದ್ದು, ಶೇ. 100.68 ಗುರಿ ಸಾಧನೆಯಾಗಿದೆ. 10,86,733 ಮಂದಿ ಎರಡನೇ ಡೋಸ್‌ ಪಡೆದಿದ್ದು, ಶೇ. 100.3ರಷ್ಟು ಪ್ರಗತಿ. ಬೂಸ್ಟರ್‌ ಡೋಸ್‌ 3,00,0685 ಮಂದಿ ಪಡೆದಿದ್ದು ಶೇ. 30ರಷ್ಟು ಪ್ರಗತಿಯಾಗಿದೆ.

ವರ್ಷದ ಕೋವಿಡ್‌ ಪ್ರಕರಣ
ಉಡುಪಿ ಜಿಲ್ಲೆ
ತಪಾಸಣೆ 2,78,160
ಸಾವು 56
ಪ್ರಕರಣ 19,287
ಸಕ್ರಿಯ 0

ದ.ಕ. ಜಿಲ್ಲೆ
ತಪಾಸಣೆ 31,32,726
ಸಾವು 1,862
ಪ್ರಕರಣ 1,37,191
ಸಕ್ರಿಯ 0

ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕು. ಉಸಿರಾಟದ ಸಮಸ್ಯೆ ಕಂಡುಬಂದಲ್ಲಿ ಸ್ವಾಬ್‌ ಟೆಸ್ಟ್‌ ಮಾಡಬೇಕು. ಕೋವಿಡ್‌ ಲಸಿಕೆ ಮತ್ತು ಬೂಸ್ಟರ್‌ ಡೋಸ್‌ ಪಡೆಯದಿರುವವರು ಕೂಡಲೇ ಪಡೆದುಕೊಳ್ಳಬೇಕು. ಮಧುಮೇಹ, ಕ್ಯಾನ್ಸರ್‌, ದೀರ್ಘ‌ಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚಿನ ಜಾಗರೂಕತೆ ವಹಿಸಬೇಕು. ಎಲ್ಲರೂ ಸರಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು.
– ಡಾ| ನಾಗಭೂಷಣ್‌ ಉಡುಪ / -ಡಾ| ಕಿಶೋರ್‌ ಕುಮಾರ್‌
ಉಡುಪಿ ಮತ್ತು ದ.ಕ. ಜಿಲ್ಲಾ ಆರೋಗ್ಯಾಧಿಕಾರಿಗಳು

ಭಾರತದಲ್ಲಿ ಕೋವಿಡ್‌ ಆತಂಕವಿಲ್ಲ: ಶೋಭಾ
ಉಡುಪಿ:
ಪ್ರಪಂಚದ ಬೇರೆ ದೇಶಗಳಲ್ಲಿ ಕೋವಿಡ್‌ ಮತ್ತೆ ಕಾಣಿಸಿಕೊಂಡಿದ್ದು, ವರದಿಯ ಪ್ರಕಾರ ಚೀನದಲ್ಲಿ ಪ್ರತೀ ದಿನ ಐದರಿಂದ ಹತ್ತು ಸಾವಿರ ಜನ ಸಾಯುತ್ತಿದ್ದಾರೆ. ಭಾರತದಲ್ಲಿ ಕೋವಿಡ್‌ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next