ಮಲ್ಪೆ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ 2023ನೇ ಸಾಲಿನ ಕೇಂದ್ರ ಸರಕಾರದ ಮೀನುಗಾರಿಕೆ ಇಲಾಖೆ ವತಿಯಿಂದ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿಮಂಡಳಿ ವತಿಯಿಂದ ಮೀನುಗಾರಿಕೆ ಸಹಕಾರಿ ಸಂಘ ವಿಭಾಗದಲ್ಲಿ “ರಾಷ್ಟ್ರೀಯ ಅತ್ಯುತ್ತಮ ಮೀನು ಗಾರಿಕೆ ಸಹಕಾರಿ ಸಂಸ್ಥೆ’ ಪ್ರಶಸ್ತಿ ಪಡೆದುಕೊಂಡಿದೆ.
ವಿಶ್ವ ಮೀನುಗಾರಿಕೆ ದಿನಾಚರಣೆ ಅಂಗವಾಗಿ ಗುಜರಾತ್‌ನ ಅಹ್ಮದಾ ಬಾದ್‌ನಲ್ಲಿ ಆಯೋಜಿಸಿದ್ದ ಗ್ಲೋಬಲ್ ಫಿಶರೀಸ್ ಕಾನ್ಫರೆನ್ಸ್ ಇಂಡಿಯಾ ಸಮಾರಂಭದಲ್ಲಿ ದ.ಕ., ಉಡುಪಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾಗಿರುವ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಖಾತೆ ಸಚಿವ ಪರ್ಶೋತ್ತಮ ರೂಪಾಲ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ದ.ಕ. ಮೀನು ಮಾರಾಟ ಫೆಡರೇಶನ್ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 85 ಸಾವಿರ ಸದಸ್ಯರು ಹಾಗೂ 73 ಸದಸ್ಯ ಸಹಕಾರಿ ಸಂಸ್ಥೆಗಳನ್ನು ಒಳಗೊಂಡಿದ್ದು ಸಂಸ್ಥೆಯ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರದ ಮೀನುಗಾರಿಕೆಗೆ ಸಂಬಂಧಿಸಿದ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನ, ಸದಸ್ಯರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ, ಆರೋಗ್ಯ ವಿಮೆ, ಮೀನುಗಾರಿಕೆ ಚಟುವಟಿಕೆಗಳಿಗೆ ಪ್ರೋತ್ಸಾಹ, ಮತ್ಸéಮೇಳ ಆಯೋಜನೆ ಮೂಲಕ ಮೀನುಗಾರಿಕೆ ಉತ್ನನ್ನಗಳಿಗೆ ಪ್ರೋತ್ಸಾಹ ಸಹಿತ ಸಮಾಜಮುಖೀ ಕಾರ್ಯಕ್ರಮಗಳನ್ನು ಗುರುತಿಸಿ ಕೇಂದ್ರ ಸರಕಾರ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಫೆಡರೇಶನ್ 2015ರಲ್ಲಿ ಅತ್ಯುತ್ತಮ ಮೀನುಗಾರ ಸಹಕಾರಿ ಸಂಘ ರಾಷ್ಟ್ರ ಪ್ರಶಸ್ತಿ, 2020ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಸಹಕಾರಿ ಮೀನು ಮಾರಾಟ ಮಹಾಮಂಡಳ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಅರ್. ಪಟೇಲ್, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವ ಎಲ್. ಮುರುಗನ್, ಡಾ| ಸಂಜೀವ್ ಬಲ್ಯಾನ್ ಉಪಸ್ಥಿತರಿದ್ದರು.