ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಕಡೆಯಿಂದ ಬಂದ ಇಂತಹ ಗೊಡ್ಡು ಬೆದರಿಕೆಗಳಿಗೆ ಜಗ್ಗುವುದಾಗಲಿ ಮತ್ತು ಕುಗ್ಗುವುದಾಗಲಿ ದೂರದ ಮಾತು. ರಾಜಕೀಯವನ್ನು ರಾಜಕೀಯವಾಗಿ ಎದುರಿಸಲು ನಾವು ಸದಾ ಸಿದ್ದರಿದ್ದೇವೆ ಎಂದು ಸಂಸದ ಡಿ ಕೆ ಸುರೇಶ್ ಕಿಡಿಕಾರಿದ್ದಾರೆ.
ಸಿಬಿಐ ಶೋಧದ ನಂತರ ಟ್ವೀಟ್ ಮಾಡಿರುವ ಡಿ ಕೆ ಸುರೇಶ್, ಇಂದು ಮುಂಜಾನೆಯ ವೇಳೆಗೆ ನಮ್ಮ ಮನೆಯ ಮೇಲೆ ಸಿಬಿಐ ದಾಳಿ ನಡೆದಿದೆ. ಕಾನೂನಿನ ಚೌಕಟ್ಟಿನಲ್ಲಿ ಅಧಿಕಾರಿಗಳಿಗೆ ಎಲ್ಲಾ ರೀತಿಯಲ್ಲೂ ನಮ್ಮ ಕಡೆಯಿಂದ ಸಂಪೂರ್ಣವಾದ ಸ್ಪಂದನೆ ಸಿಕ್ಕಿದೆ. ಮುಂದೆಯೂ ಸಹ ಸಿಗಲಿದೆ ಎಂದಿದ್ದಾರೆ.
ಇದನ್ನೂ ಓದಿ:ಉಪಚುನಾವಣೆ ಹೊಸ್ತಿಲಲ್ಲಿ ಸಿಬಿಐ ದಾಳಿ: ರಾಜಕೀಯ ಚದುರಂಗದಾಟದಲ್ಲಿ ಲಾಭ ಯಾರಿಗೆ?
ಈ ವಿಚಾರದಲ್ಲಿ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅವಶ್ಯಕತೆ ಇಲ್ಲ. ಈ ಎಲ್ಲಾ ರಾಜಕೀಯ ಷಡ್ಯಂತ್ರಗಳನ್ನು ಎದುರಿಸಿ ಜಯಿಸಿ ಬರುವ ಶಕ್ತಿಯನ್ನು ಆ ದೇವರು ನಮಗೆ ಕರುಣಿಸಿದ್ದಾನೆ. ಹಾಗಾಗಿ ಅಭಿಮಾನಿಗಳು ವಿಚಲಿತರಾಗುವುದು ಬೇಡ. ನಿಮ್ಮ ಆಶೀರ್ವಾದ ಹಾರೈಕೆ ಸದಾ ಹೀಗೇ ಇರಲಿ ಎಂದು ಡಿಕೆ ಸುರೇಶ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಡಿ.ಕೆ.ಸುರೇಶ್ ಅವರ ಮನೆಯ ಸಿಬಿಐ ದಾಳಿ ಮುಕ್ತಾಯವಾಗಿದ್ದು, ಈ ಹಿನ್ನೆಲೆಯಲ್ಲಿ ಸಹೋದರ ಡಿ.ಕೆ.ಶಿವಕುಮಾರ್ ಮನೆಗೆ ಡಿ.ಕೆ.ಸುರೇಶ್ ತೆರಳಿದರು.