Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವರು ಭಾಷಣದಲ್ಲಿ ಬಳಸುತ್ತಿರುವ ಭಾಷೆ, ಶೈಲಿ ಸರಿಯಿಲ್ಲ, ಸಾಕು ಎಂದು ಸ್ವತಃ ಮುಖ್ಯಮಂತ್ರಿಗಳೇ ಸೂಚಿಸುತ್ತಿದ್ದರೂ ಅವರು ಆ ರೀತಿ ಮಾತನಾಡಿದ್ದು ಎಷ್ಟು ಸರಿ? ಮಾಜಿ ಉಪಮುಖ್ಯಮಂತ್ರಿಯಾಗಿ, ಹಾಲಿ ಮಂತ್ರಿಯಾಗಿ, ಉನ್ನತ ಶಿಕ್ಷಣ ಸಚಿವರಾಗಿ ಅವರು ತಮ್ಮ ಮಾತು, ವರ್ತನೆಯಿಂದ ರಾಜ್ಯದ ಎಲ್ಲ ಯುವ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಹೌದು, ನಾನು ಕ್ಷೇತ್ರದ ಸಂಸತ್ ಸದಸ್ಯನಾಗಿ ಸಚಿವರ ಅನುಚಿತ ಮಾತು ತಡೆಯಲು ಪ್ರಯತ್ನ ಮಾಡಿದೆ. ರಾಮನಗರ ಜಿಲ್ಲೆ ಜನರ ಗೌರವ ಉಳಿಸುವುದು ನನ್ನ ಕರ್ತವ್ಯ. ಸಂಸ್ಕೃತಿ, ಧರ್ಮ ಯಾವುದೂ ಬಿಜೆಪಿ ಮುಂದೆ ಇಲ್ಲ. ಪ್ರಚೋದನಾಕಾರಿ ಹಾಗೂ ಭಾವನಾತ್ಮಕ ವಿಚಾರಗಳಿಗೆ ಒತ್ತು ಕೊಡುವುದು ಬಿಜೆಪಿಯ ಅಜೆಂಡಾ. ಇವೆರಡನ್ನು ಬಿಟ್ಟು ಬೇರೆ ವಿಚಾರ ಅವರಲ್ಲಿ ಇಲ್ಲ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ದೇಶವನ್ನು ಒಡೆದು ಆಳುತ್ತಿದ್ದಾರೆ. ಯುವಕರ ಮನಸ್ಸು ಕೆರಳಿಸುತ್ತಾ ಬಂದಿದ್ದಾರೆ. ಇದು ಅತಿ ಶೀಘ್ರದಲ್ಲೇ ಅಂತ್ಯವಾಗಲಿದೆ.
ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನನಗೆ ಕುಮಾರಸ್ವಾಮಿ ಅವರ ಮಾತುಗಳಲ್ಲಿ ನಂಬಿಕೆ ಇಲ್ಲ. ಅವರು ಮಾಜಿ ಮುಖ್ಯಮಂತ್ರಿಗಳು. ಅವರ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ನನ್ನ ಗಮನ ಏನಿದ್ದರೂ ಜಿಲ್ಲೆಯ ಅಭಿವೃದ್ಧಿ, ಪಕ್ಷದ ವಿಚಾರವಾಗಿಯೇ ಹೊರತು, ಕುಮಾರಸ್ವಾಮಿ ಅವರ ವಿರುದ್ಧವಲ್ಲ. ಕುಮಾರಸ್ವಾಮಿ ಅವರು ಏನು ಹೇಳಿದರೂ ಸಮಯ ಬಂದಾಗ ರಾಜ್ಯದ ಹಾಗೂ ಜಿಲ್ಲೆಯ ಜನ ಉತ್ತರ ನೀಡಲಿದ್ದಾರೆ’ ಎಂದು ಉತ್ತರಿಸಿದರು.
ಒಮಿಕ್ರಾನ್ ಹೆಚ್ಚಾಗುತ್ತಿದ್ದು ಮೇಕೆದಾಟು ಹೋರಾಟ ಹಿಂಪಡೆಯಲು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡುತ್ತೇನೆ ಎಂಬ ಆರೋಗ್ಯ ಸಚಿವರ ಹೇಳಿಕೆಗೆ, ‘ನಾನು ಆರೋಗ್ಯ ಸಚಿವರಿಗೆ ಹೇಳುತ್ತೇನೆ. ಒಮಿಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿ, ಬಿಜೆಪಿ ದೇಶದಲ್ಲಿ ನಡೆಸುತ್ತಿರುವ ಎಲ್ಲ ರಾಜಕೀಯ ಸಮಾವೇಶ, ರಾಲಿಗಳನ್ನು ನಿಲ್ಲಿಸುವಂತೆ ಮನವಿ ಮಾಡಲಿ’ ಎಂದು ಪ್ರತಿಕ್ರಿಯೆ ನೀಡಿದರು.
ಸೋಂಕು ಹೆಚ್ಚಿದರೆ ಕಾಂಗ್ರೆಸ್ ಹೊಣೆಯಾಗುತ್ತದೆ ಎಂಬ ಹೇಳಿಕೆಗ ಪ್ರತಿಕ್ರಿಯಿಸಿದ ಅವರು, ‘ಈ ದೇಶದಲ್ಲಿ ಸೋಂಕು ಹೆಚ್ಚಿದೆ ಎಂದರೆ ಅದಕ್ಕೆ ಪ್ರಧಾನ ಮಂತ್ರಿಗಳ ರಾಲಿ, ಸಮಾವೇಶ ಕಾರಣ ಎಂದು ನಾನು ಹೇಳುತ್ತೇನೆ’ ಎಂದರು.
ಆರ್. ಅಶೋಕ್ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಬಿಜೆಪಿಯವರು ಈಗಾಗಲೇ ಗುಂಡಾಗಿರಿಯ ಗುತ್ತಿಗೆ ತೆಗೆದುಕೊಂಡಿದ್ದಾರೆ. ಅಶೋಕ್ ಅವರು ನಿನ್ನೆ ಅಶ್ವಥ್ ನಾರಾಯಣ ಅವರ ಶೈಲಿ, ವರ್ತನೆಯನ್ನು ನೋಡಲಿಲ್ಲವೇ? ಅವರಿಗೆ ಅಶ್ವಥ್ ನಾರಾಯಣ ಅವರ ಧಿಮಾಕು ಎಲ್ಲವನ್ನು ತೋರಿಸಿ. ಒಂದು ಹೆಣ್ಣು ಮಗಳು ಅನಿತಾ ಕುಮಾರಸ್ವಾಮಿ ಅವರು ಏನು ಹೇಳಿದರು ಎಂಬುದನ್ನೂ ಅವರು ನೋಡಲಿ. ಅದಕ್ಕೆ ಅಶ್ವಥ್ ನಾರಾಯಣ ಅವರು ಅನಿತಾ ಕುಮಾರಸ್ವಾಮಿಯವರಿಗೆ ಯಾವ ಧಾಟಿಯಲ್ಲಿ ಪ್ರತ್ಯುತ್ತರಿಸಿದರು ಎಂಬುದನ್ನು ನೋಡಲಿ’ ಎಂದು ಉತ್ತರಿಸಿದರು.