ಲೋಕಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾವಿಸಿದ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಷಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಸುರೇಶ್ ಹೇಳಿಕೆ ಕಾಂಗ್ರೆಸ್‌ನ ವಿಭಾಜಕ ನೀತಿಯನ್ನು ಪ್ರತಿಧ್ವನಿಸುತ್ತದೆ. ಕಾಂಗ್ರೆಸ್ ಇದಕ್ಕಾಗಿ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು. ರಾಜ್ಯಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೇಶ ವಿಭಾಜಕ ಹೇಳಿಕೆಗಳನ್ನು ಕಾಂಗ್ರೆಸ್ ಸಹ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಗುರುವಾರ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಮೇಲೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿ.ಕೆ.ಸುರೇಶ್; ಕೇಂದ್ರ ಸರಕಾರ ಕರ್ನಾಟಕಕ್ಕೆ ತೆರಿಗೆ ಹಣ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ. ಇದು ಹೀಗೆಯೇ ಮುಂದುವರಿದರೆ ಪ್ರತ್ಯೇಕ ದಕ್ಷಿಣ ಭಾರತವನ್ನು ಕೇಳುವುದು ಅನಿವಾರ್ಯವಾಗಬಹುದು ಎಂದಿದ್ದರು. ಈ ಹೇಳಿಕೆ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ನಾಯಕರು, ಸುರೇಶ್ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಮುಗಿಬಿದ್ದಿದ್ದರು. ಆ ವೇಳೆ ಸ್ಪಷ್ಟೀಕರಣ ನೀಡಿದ್ದ ಸುರೇಶ್, ನನ್ನ ಹೇಳಿಕೆಯನ್ನು ತಿರುಚಲಾಗಿದೆ. ತೆರಿಗೆ ಹಂಚಿಕೆಯಲ್ಲಾಗುತ್ತಿರುವ ಅನ್ಯಾಯವನ್ನು ನಾನು ಪ್ರಸ್ತಾವಿಸಿದ್ದೇನೆ. ಆ ಹೇಳಿಕೆಗೆ ಈಗಲೂ ಬದ್ಧ. ಬಿಜೆಪಿ ಬೇಕಾದರೆ ದೂರು ನೀಡಲಿ ಎಂದಿದ್ದರು.
ಸಂಸದ ಡಿ.ಕೆ. ಸುರೇಶ್ ಅವರ “ಪ್ರತ್ಯೇಕತೆ’ಯ ಕೂಗಿಗೆ ಸ್ವತಃ ಅವರದ್ದೇ ಪಕ್ಷದ ನಾಯಕರಿಂದ ಅಪಸ್ವರ ಕೇಳಿಬಂದಿದೆ. ಆದರೆ ಸಂಸದರ ಆ ಆಕ್ರೋಶದ ಹಿಂದಿರುವ “ಕೇಂದ್ರದ ತಾರತಮ್ಯ’ ನೀತಿಯ ವಿರುದ್ಧ ಎಲ್ಲ ನಾಯಕರು ಒಕ್ಕೊರಲಿನಿಂದ ದನಿಗೂಡಿಸಿದ್ದಾರೆ. ಶುಕ್ರವಾರ ನಗರದ ವಿವಿಧ ಭಾಗಗಳಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡರು ಮತ್ತು ಸಚಿವರು, “ಭಾರತ ಅಖಂಡವಾಗಿರಬೇಕು. ನಾವೆಲ್ಲ ಒಂದು ಹಾಗೂ ಒಂದು ದೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ದೇಶದ ವಿಭಜನೆ ಮಾತು ಸಲ್ಲದು. ಹಾಗೆಂದು, ದಕ್ಷಿಣ ಭಾರತದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ ಸಹಿಸಲು ಆಗದು. ತಾರತಮ್ಯ ಆಗದಂತೆ ನೋಡಿಕೊಳ್ಳಬೇಕಾದದ್ದು ಕೇಂದ್ರದ ಹೊಣೆ’
ಎಂದು ಸ್ಪಷ್ಟಪಡಿಸಿದ್ದಾರೆ. ಮುಂದುವರಿದ ಬಿಜೆಪಿ ಹೋರಾಟ
ಡಿ.ಕೆ.ಸುರೇಶ್ ಹೇಳಿಕೆ ವಿರುದ್ಧ ಬಿಜೆಪಿ ವಾಗ್ಧಾಳಿ ಮುಂದುವರಿದಿದೆ. ಎರಡೂವರೆ ವರ್ಷದ ಬಳಿಕ ಸಿದ್ದರಾಮಯ್ಯ, ಶಿವಕುಮಾರ್‌ಗೆಅಧಿಕಾರ ಬಿಟ್ಟುಕೊಡದಿದ್ದರೆ ರಾಮನಗರವನ್ನೇ ಪ್ರತ್ಯೇಕ ರಾಜ್ಯ ಮಾಡಿ ಎಂದು ಸುರೇಶ್ ಬೇಡಿಕೆ ಇಡುತ್ತಾರಾ? ಹತಾಶೆಯಿಂದ ಬೇಜವಾಬ್ದಾರಿ ಹೇಳಿಕೆ ಕೊಡಬಾರದು, ದೇಶ ವಿಭಜಿಸುವ ಮಾತನಾಡಬಾರದು ಎಂದು ಬಿಜೆಪಿ ನಾಯಕ ವಿ.ಸುನೀಲ್ ಕುಮಾರ್ ಹೇಳಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಡಿ.ಕೆ.ಸುರೇಶ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು. ಸುರೇಶ್ ರಾಷ್ಟ್ರದ ಅಖಂಡತೆಯನ್ನು ಎತ್ತಿ ಹಿಡಿ ಯುವುದಾಗಿ ಪ್ರಮಾಣವಚನ ಸ್ವೀಕರಿಸಿ¨ªಾರೆ. ಆದರೂ ಇಂಥ ಹೇಳಿಕೆ ನೀಡಿದ್ದಾರೆಂದರೆ ಅವರ ವಿರುದ್ಧ ಕೇಸು ದಾಖಲಿಸಬೇಕು ಎಂದು ಆಗ್ರಹಿಸಿದರು.