ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಇಂದು ಕಾಂಗ್ರೆಸ್ ಪಕ್ಷದ ನೂತನ ಕಚೇರಿಯಲ್ಲಿ ವಿಶೇಷ ಹೋಮ ನಡೆಸಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ನಿರ್ಮಿಸಿರುವ ನೂತನ ಕೆಪಿಸಿಸಿ ಕಟ್ಟಡದಲ್ಲಿ ಭಾನುವಾರ ಬೆಳಗ್ಗೆ ಪೂಜೆ ನೆರವೇರಿಸಿದರು.
ಗಣಪತಿ ಹೋಮ, ವಾಸ್ತು ಹೋಮ, ರಕ್ಷೋಜ್ಞ ಹೋಮ, ಭೂ ವರಹ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಅಷ್ಟ ಲಕ್ಷ್ಮಿ ಹೋಮ, ಗಾಯಿತ್ರಿ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ನಡೆಯಿತು. ಮುಂದೆ ಯಾವುದೇ ವಿಘ್ನಗಳು ಎದುರಾಗಬಾರದೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೋಮ ನಡೆಸಿದರು.
ಲೋಕಕಲ್ಯಾಣಾರ್ಥವಾಗಿಯೂ ನಡೆದ ಪೂಜೆ-ಪುನಸ್ಕಾರಗಳ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಸಿದ್ದರಾಮಯ್ಯ, ಎಸ್. ಆರ್. ಪಾಟೀಲ್, ಮಲ್ಲಿಕಾರ್ಜುನ ಖರ್ಗೆ, ಡಾ ಜಿ. ಪರಮೇಶ್ವರ ಮತ್ತಿತರ ಮುಖಂಡರು ಹಾಗೂ ಸಮಸ್ತ ಕಾಂಗ್ರೆಸ್ ಕಾರ್ಯಕರ್ತರ ಹೆಸರಿನಲ್ಲಿ ಡಿ ಕೆ ಶಿವಕುಮಾರ್ ಅವರು ಸಂಕಲ್ಪ ಮಾಡಿದರು.
ನಂತರ ಮಾತನಾಡಿದ ಡಿಕೆ ಶಿವಕುಮಾರ್, ಎಲ್ಲಾ ವಿಘ್ನಗಳನ್ನು ನಿವಾರಣೆ ಮಾಡಲಿ ಎಂದು ಶುಭ ಮೂಹೂರ್ತದಲ್ಲಿ ಪೂಜೆ ಶುರು ಮಾಡಿದ್ದೇವೆ. ಎರಡು ವರ್ಷಗಳಿಂದ ಈ ಕಟ್ಟಡದ ಕೆಲಸ ನಿಂತಿತ್ತು. ರಾಜ್ಯಕ್ಕೆ, ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಒಳ್ಳೆಯದಾಗಲಿ ಎಂದು ಹೋಮ ಮಾಡುತ್ತಿದ್ದೇವೆ. ಜೊತೆಗೆ ರಾಜ್ಯ ಆದಷ್ಟು ಬೇಗ ಕೋವಿಡ್-19 ಸೋಂಖಿನಿಂದ ಮುಕ್ತವಾಗಲಿ ಎಂದರು.
ಡಿ ಕೆ ಶಿವಕುಮಾರ್ ಅವರು ಇಂದಿನಿಂದ ಎರಡು ದಿನಗಳ ಕಾಲ ದೇವಾಲಯಗಳ ದರ್ಶನ ಮಾಡಲಿದ್ದಾರೆ. ಇಂದು ಸಂಜೆ ತಮಿಳುನಾಡಿನ ಅರುಣಾಚಲೇಶ್ವರನ ದರ್ಶನ ಪಡೆಯಲಿದ್ದಾರೆ. ಡಿಕೆಶಿ ಪದಗ್ರಹಣ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಅನುಮತಿ ನೀಡಿದ್ದು, ಸದ್ಯದಲ್ಲಿ ಕಾರ್ಯಕ್ರಮದ ದಿನಾಂಕ ಘೋಷಣೆಯಾಗಲಿದೆ.