Advertisement

ಡಿಕೆಶಿ ಕೆಪಿಸಿಸಿ ಬಾಸ್‌?

11:00 AM Jan 18, 2020 | mahesh |

ಬೆಂಗಳೂರು: ಬಹು ಚರ್ಚಿತ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ ಹೈಕಮಾಂಡ್‌ ಅಳೆದು ತೂಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ನೀಡಲು ನಿರ್ಧರಿಸಿದೆ ಎನ್ನಲಾಗಿದ್ದು, ಈ ಕುರಿತು ಯಾವುದೇ ಸಂದರ್ಭದಲ್ಲಿ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.

Advertisement

ಸಿದ್ದರಾಮಯ್ಯ ಅವರನ್ನು ವಿಪಕ್ಷ ನಾಯಕನ ಸ್ಥಾನದಲ್ಲಿಯೇ ಮುಂದುವರಿಸಲು ತೀರ್ಮಾನಿಸಲಾಗಿದ್ದು, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನು ಮಾಜಿ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌ ಅಥವಾ ಎಂ.ಬಿ. ಪಾಟೀಲ್‌ ಅವರಲ್ಲಿ ಓರ್ವರಿಗೆ ನೀಡಲು ಹೈಕಮಾಂಡ್‌ ನಿರ್ಧರಿಸಿದೆ. ಪರಮೇಶ್ವರ್‌ ಶಾಸಕಾಂಗ ಪಕ್ಷದ ನಾಯಕರಾದರೆ, ಎಂ.ಬಿ. ಪಾಟೀಲ್‌ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಥವಾ ಸಿಡಬ್ಲ್ಯುಸಿ ಸದಸ್ಯ ಹುದ್ದೆಗೆ ಪರಿಗಣಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಉನ್ನತ ಮೂಲಗಳು ತಿಳಿಸಿವೆ.

ಡಿ.ಕೆ.ಶಿ. ನೇಮಕಕ್ಕೆ ಸಿದ್ದ ರಾಮಯ್ಯ ಬಣದಿಂದ ಸಾಕಷ್ಟು ವಿರೋಧ ವ್ಯಕ್ತ ವಾಗಿ ದ್ದರೂ ಹೈಕಮಾಂಡ್‌ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಿ ಕೊಂಡು ಹೋಗುವುದರ ಜತೆಗೆ ಜೆಡಿಎಸ್‌ ಜತೆಗೂ ಉತ್ತಮ ಸಂಬಂಧ ಇಟ್ಟುಕೊಂಡು ಹೋಗುವ ಅಗತ್ಯ ಇದೆ ಎನ್ನುವ ಕಾರಣಕ್ಕೆ ಅವರನ್ನೇ ಆಯ್ಕೆ ಮಾಡಲು ಬಹುತೇಕ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯವನ್ನು ಸೆಳೆಯಲು ಎಂ.ಬಿ.ಪಾಟೀಲ್‌ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಸಿದ್ದರಾಮಯ್ಯ ಅವರ ವಾದಕ್ಕೆ ಹೈಕಮಾಂಡ್‌ ಮಣೆ ಹಾಕಿಲ್ಲ. ಸದ್ಯ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಎನಿಸಿಕೊಂಡಿರುವ ಬಿಜೆಪಿಯ ಬಿ.ಎಸ್‌. ಯಡಿಯೂರಪ್ಪ ಸಿಎಂ ಆಗಿ ಅಧಿಕಾರದಲ್ಲಿದ್ದಾರೆ. ಈಗ ಅದೇ ಸಮುದಾಯದ ನಾಯಕನನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರೂ ತತ್‌ಕ್ಷಣವೇ ಲಿಂಗಾಯತ ಸಮುದಾಯದವರನ್ನು ಸೆಳೆಯುವುದು ಕಷ್ಟ ಎಂಬುದು ಹೈಕಮಾಂಡ್‌ನ‌ ಅಭಿಪ್ರಾಯ ಎನ್ನಲಾಗುತ್ತಿದೆ. ಅಲ್ಲದೆ ಈಗ ಎಂ.ಬಿ. ಪಾಟೀಲ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದರೂ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅವರನ್ನು ಮೂರು ವರ್ಷಗಳ ಅವಧಿಯ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸುವುದೂ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಹೈಕಮಾಂಡ್‌ ಡಿಕೆಶಿ ಅವರಿಗೆ ಆದ್ಯತೆ ನೀಡಿದೆ ಎಂಬ ಮಾತುಗಳು ಕೇಳಿಬಂದಿವೆ.

ಡಿ.ಕೆ. ಶಿವಕುಮಾರ್‌ ಆಯ್ಕೆಯಾದರೆ ಮೂಲ ಕಾಂಗ್ರೆಸಿಗರ ಬೇಡಿಕೆಗೆ ಹೈಕಮಾಂಡ್‌ ಮನ್ನಣೆ ನೀಡಿ ದಂತಾಗುತ್ತದೆ. ಈ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಏಕಪಕ್ಷೀಯ ನಿರ್ಧಾರಗಳಿಗೆ ತಡೆಯೊಡ್ಡಿದಂತಾಗುತ್ತದೆ. ಜತೆಗೆ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಪಕ್ಷದ ಮೇಲೆ ಸಾಧಿಸಿರುವ ಹಿಡಿತವನ್ನು ಸಡಿಲಗೊಳಿಸಿದಂತಾಗುತ್ತದೆ ಎಂಬ ಮಾತು ಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

Advertisement

ಕಾರ್ಯಾಧ್ಯಕ್ಷರ ನೇಮಕ ಗೊಂದಲ
ಕೆಪಿಸಿಸಿಗೆ ಯಾರನ್ನೇ ಅಧ್ಯಕ್ಷರನ್ನಾಗಿ ನೇಮಿಸಿದರೂ ವಿಭಾಗವಾರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲು ಕಾಂಗ್ರೆಸ್‌ ಹೈಕಮಾಂಡ್‌ ಆಸಕ್ತಿ ತೋರಿದೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಕೂಡ ಕಾರ್ಯಾಧ್ಯಕ್ಷ ರನ್ನು ನೇಮಕ ಮಾಡುವಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗುತ್ತಿದೆ.

ಆದರೆ ಕೆಪಿಸಿಸಿ ಅಧ್ಯಕ್ಷರಾಗುವ ಭರವಸೆ ಹೊಂದಿ ರುವ ಡಿ.ಕೆ. ಶಿವಕುಮಾರ್‌ ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಿಭಾಗವಾರು ಕಾರ್ಯಾ ಧ್ಯಕ್ಷರನ್ನು ನೇಮಕ ಮಾಡಿ, ತಮ್ಮ ಅಧಿಕಾರ ಮೊಟಕುಗೊಳಿಸುವ ತಂತ್ರ ಇದಾಗಿದೆ ಎಂಬ ಕಾರಣಕ್ಕೆ ಡಿಕೆಶಿ ವಿರೋಧಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ವಿಭಾಗವಾರು ಕಾರ್ಯಾಧ್ಯಕ್ಷರ ಬದಲು, ಉಪಾಧ್ಯಕ್ಷರನ್ನು ನೇಮಿಸುವಂತೆ ಹೈಕಮಾಂಡ್‌ಗೆ ಡಿಕೆಶಿ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಆದರೆ ತಾನು ಸೂಚಿಸಿದವರಿಗೆ ಅಧ್ಯಕ್ಷ ಸ್ಥಾನ ದೊರೆಯದಿರುವುದರಿಂದ ಸಿದ್ದರಾಮಯ್ಯ ನಾಲ್ಕು ವಿಭಾಗಗಳಿಗೂ ಜಾತಿ ಆಧಾರದಲ್ಲಿ ಕಾರ್ಯಾ ಧ್ಯಕ್ಷ ರನ್ನು ನೇಮಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ ಹೈಕಮಾಂಡ್‌ ಮಟ್ಟದಲ್ಲಿ ಇನ್ನೂ ಗೊಂದಲ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.

ಖಂಡ್ರೆ ಸ್ಥಾನ ಅಬಾಧಿತ?
ಒಂದು ವೇಳೆ ಡಿ.ಕೆ.ಶಿವಕುಮಾರ್‌ ಒತ್ತಡಕ್ಕೆ ಮಣಿದು ಹೈಕಮಾಂಡ್‌ ನೂತನ ಕಾರ್ಯಾ ಧ್ಯಕ್ಷರನ್ನು ನೇಮಕ ಮಾಡದಿದ್ದರೂ ಈಶ್ವರ್‌ ಖಂಡ್ರೆ ಅವರ ಕಾರ್ಯಾಧ್ಯಕ್ಷ ಸ್ಥಾನ ಅಬಾಧಿತ ಎಂದು ಮೂಲಗಳು ತಿಳಿಸಿವೆ. ಈಗ ಅವರನ್ನು ಕಾರ್ಯಾ ಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಆತಂಕ ಕಾಂಗ್ರೆಸ್‌ ನಾಯಕರಲ್ಲಿ ಮೂಡಿದೆ ಎಂದು ಹೇಳ ಲಾಗುತ್ತಿದೆ. ಹೀಗಾಗಿ ಜಾತಿ ಹಾಗೂ ಪ್ರಾದೇಶಿಕ ಲೆಕ್ಕಾಚಾರದಲ್ಲಿ ಈಶ್ವರ್‌ ಖಂಡ್ರೆ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೆಪಿಸಿಸಿ ಅಧ್ಯಕ್ಷರ ನೇಮಕದಲ್ಲಿ ಯಾವುದೇ ಗೊಂದಲವಿಲ್ಲ. ಹೈಕಮಾಂಡ್‌ ಆದಷ್ಟು ಬೇಗ ಗೊಂದಲಗಳಿಗೆ ತೆರೆ ಎಳೆಯಬೇಕು. ಪಕ್ಷದಲ್ಲಿ ಮೂಲ ವಲಸಿಗರು ಎಂಬ ಭೇದವಿಲ್ಲ.
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ನಮ್ಮದು ರಾಷ್ಟ್ರೀಯ ಪಕ್ಷ. ಇಲ್ಲಿ ಭಿನ್ನಾಭಿಪ್ರಾಯ ಇರುವುದು ಸಹಜ. ಅಧ್ಯಕ್ಷರ ಆಯ್ಕೆ ಕುರಿತು ಹೈಕಮಾಂಡ್‌ ಎಲ್ಲರ ಅಭಿಪ್ರಾಯ ಪಡೆದುಕೊಂಡಿದೆ. ವಾಸ್ತವಾಂಶ ಯಾರಿಗೂ ಗೊತ್ತಿಲ್ಲ.
– ಕೆ.ಎಚ್‌. ಮುನಿಯಪ್ಪ, ಕೇಂದ್ರದ ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next