Advertisement

D. K. Shivakumar`100 ಕೋ.ಆಮಿಷ: ದೇವರಾಜೇಗೌಡ ಬಾಂಬ್‌

12:37 AM May 18, 2024 | Team Udayavani |

ಹಾಸನ: “ಪ್ರಜ್ವಲ್‌ ರೇವಣ್ಣ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಿಸಿದ್ದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಎಂದು ಹೇಳು. ನಿನ್ನನ್ನು ನಾನು ರಕ್ಷಣೆ ಮಾಡುತ್ತೇನೆ ಎಂದು ಎಲ್‌.ಆರ್‌. ಶಿವರಾಮೇ ಗೌಡ ಅವರ ಮೂಲಕ ಡಿ.ಕೆ. ಶಿವಕುಮಾರ್‌ ನನಗೆ ಹೇಳಿಸಿದ್ದರು. ಅದಕ್ಕಾಗಿ 100 ಕೋಟಿ ರೂ. ಆಮಿಷ ಒಡ್ಡಿದ್ದರು’ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Advertisement

“ಇಂತಹ ಹೇಳಿಕೆ ನೀಡಲು 5 ಕೋಟಿ ರೂ. ಮುಂಗಡವನ್ನು ಬೌರಿಂಗ್‌ ಕ್ಲಬ್‌ನ ಕೊಠಡಿ ಸಂಖ್ಯೆ 110ಕ್ಕೆ ಕಳುಹಿಸಿದ್ದರು. ಮಾಜಿ ಎಂಎಲ್‌ಸಿ, ಚನ್ನರಾಯಪಟ್ಟಣದ ಎಂ.ಎ. ಗೋಪಾಲಸ್ವಾಮಿ ಸಂಧಾನಕಾರರಾಗಿ ಬಂದಿದ್ದರು. ಪೆನ್‌ಡ್ರೈವ್‌ ಹಂಚಿಕೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೇ ಮುಖ್ಯ ಸೂತ್ರಧಾರ.

ಈ ಪ್ರಕರಣದ ನಿರ್ವಹಣೆಯನ್ನು ನಾಲ್ವರು ಸಚಿವರ ತಂಡ ಮಾಡುತ್ತಿದೆ’ ಎಂಬ ಬಲವಾದ ಆರೋಪವನ್ನು ದೇವರಾಜೇಗೌಡ ಮಾಡಿದ್ದಾರೆ.

ಹೊಳೆನರಸೀಪುರ ನಗರ ಠಾಣೆ ಪೊಲೀಸರ ಕಸ್ಟಡಿಯಿಂದ ನ್ಯಾಯಾಂಗ ಬಂಧನಕ್ಕೆ ಪುನಃ ಒಪ್ಪಿಸುವ ಸಂದರ್ಭದಲ್ಲಿ ಪೊಲೀಸ್‌ ವಾಹನದಲ್ಲಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. “ಪ್ರಜ್ವಲ್‌ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ನಿಂದ ಎಲ್ಲ ಮಾಹಿತಿ ಪಡೆದು ಅಶ್ಲೀಲ ವೀಡಿಯೋಗಳನ್ನು ತರಿಸಿಕೊಂಡು ಪೆನ್‌ಡ್ರೈವ್‌ಗಳನ್ನು ಸಿದ್ಧಪಡಿಸಿದ್ದೇ ಡಿ.ಕೆ. ಶಿವಕುಮಾರ್‌. ಅದನ್ನು ಹಂಚಿಕೆ ಮಾಡಲು ನಾಲ್ವರು ಸಚಿವರ ತಂಡ ರಚಿಸಿದ್ದು, ಸಚಿವರಾದ ಚಲುವರಾಯಸ್ವಾಮಿ, ಕೃಷ್ಣಭೈರೇಗೌಡ, ಪ್ರಿಯಾಂಕ್‌ ಖರ್ಗೆ ತಂಡದಲ್ಲಿದ್ದಾರೆ’ ಎಂದು ಆರೋಪಿಸಿದ್ದಾರೆ.

“ದೇಶದಲ್ಲಿ ಪ್ರಧಾನಿ ಮೋದಿ ಅವರಿಗೆ ಮುಜುಗರ ವನ್ನುಂಟು ಮಾಡಬೇಕು. ರಾಸಲೀಲೆ ಪ್ರಕರಣದ ಆರೋಪಿಗಳನ್ನು ಮೋದಿ ಯವರೇ ರಕ್ಷಿಸುತ್ತಿದ್ದಾರೆ ಎಂದು ಬಿಂಬಿಸಿ ಕೆಟ್ಟ ಹೆಸರು ತರಬೇಕು. ರಾಜ್ಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರ ನಾಯಕತ್ವನ್ನು ಹಾಳು ಮಾಡಬೇಕು ಎಂಬುದು ಡಿ.ಕೆ. ಶಿವಕುಮಾರ್‌ ಅವರ ಮುಖ್ಯ ಉದ್ದೇಶ’ ಎಂದು ಹೇಳಿದ್ದಾರೆ.

Advertisement

“ಇದಕ್ಕೆ ನಾನು ಒಪ್ಪದಿದ್ದಾಗ ನನ್ನ ಮೇಲೆ ಅಟ್ರಾಸಿಟಿ ಕೇಸ್‌ ಹಾಕಿಸಿದರು. ಅನಂತರ ಲೈಂಗಿಕ ದೌರ್ಜನ್ಯದ ಕೇಸ್‌ ದಾಖಲು ಮಾಡಿದರು. ಅದು ಜಾಮೀನು ಕೊಡಬಹುದಾದ ಪ್ರಕರಣವಾಗಿ ದಾಖಲಾಗಿದ್ದರಿಂದ ಮತ್ತೆ ಅದಕ್ಕೆ ಐಪಿಸಿ 376 ಸೇರಿಸಿ ಅತ್ಯಾಚಾರದ ಪ್ರಕರಣ ದಾಖಲು ಮಾಡಿಸಿದರು. ನನ್ನನ್ನು ಸತತವಾಗಿ ಪೊಲೀಸರು ನಾಲ್ಕು ದಿನ ವಿಚಾರಣೆ ನಡೆಸಿದರು. ಹಾಸನ ಎಸ್‌ಪಿ ಹಾಗೂ ಐಜಿಪಿಯವರೂ ವಿಚಾರಣೆ ನಡೆಸಿದರು. ಆದರೆ ಅವರಿಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ’ ಎಂದು ತಿಳಿಸಿದರು.

“ನನ್ನ ಕಾರ್‌ನಲ್ಲಿ ಪೊಲೀಸರಿಗೆ ಸಿಕ್ಕಿರುವ ಪೆನ್‌ಡ್ರೈವ್‌ ಕಾರ್ತಿಕ್‌ ಪತ್ನಿಯನ್ನು ಅಪಹರಣ ಮಾಡಿರುವ ಹಾಗೂ ಕಾರ್ತಿಕ್‌ ಮನೆಯ ಸಿಸಿ ಕೆಮರಾದ ದೃಶ್ಯಾವಳಿಗಳು. ಡಿ.ಕೆ. ಶಿವಕುಮಾರ್‌ ಅವರು ಮಾತನಾಡಿದ ಆಡಿಯೋ ನನ್ನ ಬಳಿ ಇದೆ. ನಾನು ಹೊರಬಂದು ಎಲ್ಲವನ್ನೂ ಹೇಳುತ್ತೇನೆ. ನನ್ನ ಮನೆ ಮೇಲೆ ದಾಳಿ ಮಾಡಿದ್ದಾರೆ. ಅಲ್ಲಿ ಏನೂ ಸಿಕ್ಕಿಲ್ಲ. ನಾನು ಹೊರ ಬಂದು ಬಾಯಿ ಬಿಟ್ಟ ಅನಂತರ ಸರಕಾರ ಪತನವಾಗುತ್ತದೆ’ ಎಂದೂ ಹೇಳಿದರು.

ಬಿಜೆಪಿಯವರು ಎಲ್ಲದರಲ್ಲೂ ನನ್ನನ್ನು ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಹಿಂದೆ ಪಿಎಸ್‌ಐ ನೇಮಕಾತಿ ಹಗರಣ, ಬಿಟ್‌ ಕಾಯಿನ್‌ ಹಗರಣ, ಗಂಗಾಕಲ್ಯಾಣ ಯೋಜನೆ ಅವ್ಯವಹಾರ ಸಹಿತ ಹಲವು ಬಾರಿ ಇಂತಹ ಪ್ರಯತ್ನ ನಡೆದಿತ್ತು. ಬಹುಶಃ ಈ ಹಿಂದೆ ದೇವರಾಜೇಗೌಡರೇ ಹೇಳಿದಂತೆ ಎಲ್ಲವೂ ಅಮಿತ್‌ ಶಾ ಹೇಳಿದಂತೆ ನಡೆಯುತ್ತಿದೆ. ಇದರಲ್ಲೂ ಅವರ ಕೈವಾಡ ಇರಬೇಕು. ಅವರ ಒತ್ತಡಕ್ಕೆ ಮಣಿದು ಈ ರೀತಿ ಹೇಳಿಕೆ ನೀಡುತ್ತಿರಬೇಕು.
-ಪ್ರಿಯಾಂಕ್‌ ಖರ್ಗೆ, ಸಚಿವ

ಡಿಸಿಎಂ ಡಿಕೆಶಿ, ಸಚಿವರಾದ ಕೃಷ್ಣ ಬೈರೇಗೌಡ, ಎನ್‌. ಚಲುವರಾಯಸ್ವಾಮಿ, ಪ್ರಿಯಾಂಕ್‌ ಖರ್ಗೆ, ಮಾಜಿ ಸಂಸದ ಎಲ್‌.ಆರ್‌. ಶಿವರಾಮೇಗೌಡ ಮತ್ತು ಇನ್ನೊಬ್ಬ ಸಚಿವರು ಸೇರಿ ಹೂಡಿರುವ ಸಂಚು ಏನು ಗೊತ್ತಾ? ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರುವುದು. ಈ ಸಂಚು ಸಾಕಾರಗೊಳಿಸಲು ಸಿ.ಡಿ. ಶಿವಕುಮಾರ್‌ ಸಾಹೇಬರು ವಕೀಲ ದೇವರಾಜೇಗೌಡರಿಗೆ ಆಮಿಷವೊಡ್ಡಿದ ಮೊತ್ತ ಬರೋಬ್ಬರಿ ನೂರು ಕೋಟಿ ರೂ.
-ಜೆಡಿಎಸ್‌

Advertisement

Udayavani is now on Telegram. Click here to join our channel and stay updated with the latest news.

Next