Advertisement

ಯಡಿಯೂರಪ್ಪಗಿಂತ ಸಿ.ಟಿ. ರವಿ ತುಂಬಾ ದೊಡ್ಡವರು: ಡಿಕೆಶಿ

11:46 PM Mar 14, 2023 | Team Udayavani |

ಬೆಂಗಳೂರು: “ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗಿಂತ ತುಂಬಾ ದೊಡ್ಡವರಾಗಿದ್ದಾರೆ. ಹಾಗಾಗಿ, ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರರ ಟಿಕೆಟ್‌ ಬಗ್ಗೆ ಮಾತನಾಡಿದ್ದಾರೆ’ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

Advertisement

ಶಿಕಾರಿಪುರ ಟಿಕೆಟ್‌ ವಿಚಾರದಲ್ಲಿ ಸಿ.ಟಿ.ರವಿ ಹೇಳಿಕೆಗೆ ಮಂಗಳವಾರ ಸದಾಶಿವನಗರದಲ್ಲಿ ಪ್ರತಿಕ್ರಿಯಿಸಿದ ಅವರು, “ಇದು ಬಿಜೆಪಿಯ ಆಂತರಿಕ ವಿಚಾರ. ಬಿಜೆಪಿಯಲ್ಲಿ ಬಹಳ ಹಿಂದಿನಿಂದ ಈ ಬಗ್ಗೆ ಚರ್ಚೆಯಾಗುತ್ತಿದೆ. ಈಗ ಸಿ.ಟಿ.ರವಿ ಅವರೇ ಬಿಜೆಪಿ ಹೈಕಮಾಂಡ್‌ ಆಗಿದ್ದಾರೆ. ಯಡಿಯೂರಪ್ಪ ಅವರಿಗಿಂತಲೂ ಬಹಳ ದೊಡ್ಡವರೂ ಆಗಿದ್ದಾರೆ. ಹೀಗಾಗಿ, ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಟಿಕೆಟ್‌ ವಿಚಾರವಾಗಿ ಮಾತನಾಡುತ್ತಿದ್ದಾರೆ’ ಎಂದು ತೀಕ್ಷ್ಣವಾಗಿ ಹೇಳಿದರು.

ಬಿಜೆಪಿಯಲ್ಲಿ ಪಿತೂರಿ ಮಾಡಿ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿದ್ದಾಯ್ತು. ಇದರಲ್ಲಿ ಕಾಂಗ್ರೆಸ್‌ನ ಯಾವುದೇ ಪಾತ್ರವಿಲ್ಲ. ಜನ ಯಡಿಯೂರಪ್ಪ ಅವರ ಮುಖ ನೋಡಿ ಬಿಜೆಪಿಗೆ ಮತ ಹಾಕಿದ್ದರು. ಆದರೆ ಅದೇ ಯಡಿಯೂರಪ್ಪ ಅವರ ಕಣ್ಣೀರು ರಾಜ್ಯ ರಾಜಕಾರಣದ ಚಿತ್ರಣ ಬದಲಿಸಲಿದೆ ಎಂದರು.

ಪಕ್ಷಕ್ಕೆ ಪಕ್ಷಾಂತರಿಗಳ ಅಗತ್ಯವಿಲ್ಲ; ಡಿಕೆಶಿ
ಹಾಲಿ ಸಚಿವರ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಕೇಳಿದಾಗ, “ಸಮಯ ಎಲ್ಲದಕ್ಕೂ ಉತ್ತರ ನೀಡಲಿದೆ. ಈ ವಿಚಾರವಾಗಿ ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ. ಆದರೆ, ನಾನು ಯಾವುದೇ ಸಚಿವರ ಜತೆ ಸಂಪರ್ಕ ಮಾಡಿಲ್ಲ. ಹಾಲಿ ಶಾಸಕರು ಕಾಂಗ್ರೆಸ್‌ ಟಿಕೆಟ್‌ ಕೇಳುತ್ತಿದ್ದು, ಆ ಕ್ಷೇತ್ರಗಳಲ್ಲಿ ನಮ್ಮದೇ ಪಕ್ಷದ ನಾಯಕರು, ಕಾರ್ಯಕರ್ತರು ಇದ್ದಾರೆ. ಹೀಗಾಗಿ ಈಗ ಪಕ್ಷಕ್ಕೆ ಅವರ ಅಗತ್ಯವಿಲ್ಲ. ನಾವು ಕೆಲವು ಕ್ಷೇತ್ರಗಳ ಬಗ್ಗೆ ಮಾತ್ರ ಈ ವಿಚಾರವಾಗಿ ಚಿಂತನೆ ಮಾಡುತ್ತಿದ್ದು, ಈಗಲೇ ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ’ ಎಂದು ಹೇಳಿದರು.

ರಮೇಶ್‌ ಜಾರಕಿಹೊಳಿ ಸಿಡಿ ಬೆದರಿಕೆ ಆರೋಪದ ಬಗ್ಗೆ ಕೇಳಿದಾಗ, “ಸ್ವತಃ ರಮೇಶ್‌ ಜಾರಕಿಹೊಳಿ ಅವರೇ ಜನರಿಗೆ ಸ್ಪಷ್ಟನೆ ನೀಡಬೇಕು. ಬಿಜೆಪಿ ಇಂತಹ ನಾಯಕರನ್ನು ಇಟ್ಟುಕೊಂಡು ಬಳಸಿಕೊಳ್ಳಲಿ. ನಾನು ಅವರ ಬಗ್ಗೆ ಮಾತನಾಡುವುದಿಲ್ಲ’ ಎಂದು ಖಾರವಾಗಿ ಹೇಳಿದರು.

Advertisement

ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಆಜಾನ್‌ ವಿಚಾರದಲ್ಲಿ ನೀಡಿರುವ ಹೇಳಿಕೆ ಹಾಗೂ ಬಿಜೆಪಿ ಎಲ್ಲ ಮುಸ್ಲಿಂ ಬಂಧುಗಳ ವಿರುದ್ಧವಾಗಿಲ್ಲ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಈಶ್ವರಪ್ಪ ರಾಜಕೀಯ ಅಸ್ತ್ರ ಬಳಸುತ್ತಿದ್ದಾರೆ.

ಭ್ರಷ್ಟಾಚಾರದ ಆರೋಪದ ಮೇಲೆ ಅವರನ್ನು ಸರ್ಕಾರದಿಂದ ಹೊರದಬ್ಬಲಾಗಿದೆ. ಅವರು ಭ್ರಷ್ಟಾಚಾರದ ನಾಯಕರಾಗಿದ್ದು, ಶಿವಮೊಗ್ಗ ಹಾಗೂ ಮಲೆನಾಡಿಗೆ ತಂದಿರುವ ಕಪ್ಪುಚುಕ್ಕೆಯಿಂದ ಆ ಭಾಗ ಚೇತರಿಸಿಕೊಳ್ಳಲು 20-30 ವರ್ಷಗಳೇ ಬೇಕಾಗುತ್ತದೆ. ಮಾಜಿ ಸಂಸದ ಆಯನೂರು ಮಂಜುನಾಥ್‌ ಅವರ ಇತ್ತೀಚಿನ ಹೇಳಿಕೆಯಿಂದಲೇ ಇದು ಸಾಬೀತಾಗಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next