ಬೆಂಗಳೂರು: ‘ಭಾರತ ಜೋಡೋ’ ಪಾದಯಾತ್ರೆ ಬಳಿಕ ರಾಹುಲ್ ಗಾಂಧಿ ಅವರ ಖ್ಯಾತಿ ಹೆಚ್ಚುತ್ತದೆಯೋ ಎಂದು ಭಯಭೀತರಾಗಿ ಕೇಂದ್ರ ಸರಕಾರ ಈ ಕೆಲಸಕ್ಕೆ ಕೈ ಹಾಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ರಾಜಭವನ ಚಲೋ ಸಂದರ್ಭದಲ್ಲಿ ಮಾತನಾಡಿದ ಅವರು, ನೆಹರೂ ಕುಟುಂಬ ದೇಶಕ್ಕಾಗಿ ಅಲಹಬಾದ್ ನಲ್ಲಿ 20 ಸಾವಿರ ಕೋಟಿ ರೂ. ಮೊತ್ತದ ಆಸ್ತಿ ದಾನ ಮಾಡಿದೆ. ಯಂಗ್ ಇಂಡಿಯಾ ಹಾಗೂ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸಂಸ್ಥೆ ಅವರ ಸ್ವಂತ ಆಸ್ತಿ ಎಂದು ಘೋಷಿಸಿಲ್ಲ. ಇದು ಕಾಂಗ್ರೆಸ್ ಕಾರ್ಯಕರ್ತರ ಆಸ್ತಿ. ಪಕ್ಷದ ಆಚಾರ, ವಿಚಾರವನ್ನು ಪ್ರಚಾರ ಮಾಡಲು ಈ ಪತ್ರಿಕೆ ನಡೆಸುತ್ತಿದ್ದಾರೆ. ಅವರು ಈ ಸಂಸ್ಥೆಯ ಜವಾಬ್ದಾರಿ ಹೊತ್ತಿದ್ದಾರೆ ಅಷ್ಟೇ ಎಂದರು.
ನೆಹರೂ ಅವರು ಜೈಲಿಗೆ ಹೋಗಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ದೇಶಕ್ಕಾಗಿ ಅಧಿಕಾರ ತ್ಯಾಗ ಮಾಡಿದ್ದಾರೆ. ಇಂತಹವರಿಗೆ ಈ ರೀತಿ ಕಿರುಕುಳ ನೀಡುವುದನ್ನು ಜನ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ನೆಲಸಮ ಕಾರ್ಯಾಚರಣೆ : ಉತ್ತರ ಪ್ರದೇಶ ಸರಕಾರದಿಂದ ಉತ್ತರ ಕೋರಿದ ಸುಪ್ರೀಂ
ನಾಳೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ಪದಾಧಿಕಾರಿಗಳು ಪ್ರತಿಭಟನೆ ಮಾಡಬೇಕು. ಅಲ್ಲಿರುವ ಕೇಂದ್ರ ಸರ್ಕಾರದ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕು ಎಂದು ಕರೆ ನೀಡಿದರು.