ಬೆಂಗಳೂರು: ಶಿವಮೊಗ್ಗದಲ್ಲಿ ಹತ್ಯೆಯಾದ ಯುವಕನ ಮೃತದೇಹದ ಮೆರವಣಿಗೆ ವೇಳೆ ಉಂಟಾದ ಗಲಭೆಗೆ ಸಚಿವ ಈಶ್ವರಪ್ಪ ಕಾರಣ ಎಂದು ದೂರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸರ್ಕಾರ ಮತ್ತು ಪೋಲಿಸರ ವಿರುದ್ದ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಒಬ್ಬ ಮಂತ್ರಿ ಸೆಕ್ಷನ್ 144 ಉಲ್ಲಂಘನೆ ಮಾಡಿದರೂ ಯಾಕೆ ಕೇಸ್ ಹಾಕಿಲ್ಲ? ಒಬ್ಬ ಮಂತ್ರಿ ಹಾಗೆಲ್ಲ ಮಾಡಿದ ಮೇಲೂ ಯಾಕೆ ಬಿಟ್ಟಿದ್ದಾರೆ? ಅವನೆ ನಿಂತುಕೊಂಡು ಮೆರವಣಿಗೆ ಮಾಡಿಸಿ ಕಲ್ಲು ಹೊಡೆಸಿದರೂ ಕೇಸ್ ಯಾಕೆ ಹಾಕಿಲ್ಲ? ಡಿಜಿ, ಎಸ್ ಪಿ ಇದಕ್ಕೆ ಉತ್ತರ ಹೇಳಬೇಕು. ಗೃಹ ಸಚಿವರು ಏನು ಹೇಳಲ್ಲ ಬಿಡಿ. ಖಾಕಿ ಬಟ್ಟೆ ಹಾಕಿರುವವರು ಇದಕ್ಕೆ ಉತ್ತರಿಸಬೇಕು ಇಲ್ಲ, ಖಾಕಿ ಕಳಚಿ ಕೇಸರಿ ಹಾಕಲಿ” ಎಂದು ಗರಂ ಆದರು.
“ಇಂತಹ ರಾಷ್ಟ್ರದ್ರೋಹಿಯನ್ನು ಸಚಿವರನ್ನಾಗಿ ಇಟ್ಟುಕೊಂಡಿರುವುದರಿಂದ ಯುವಕನ ಹತ್ಯೆಯಾಗಿದೆ. ಸರ್ಕಾರ 144 ಸೆಕ್ಷನ್ ಹಾಕಿದೆ. ಆದರೂ ಮಂತ್ರಿ ಮೆರವಣಿಗೆ ಮಾಡಿ ಆಸ್ತಿ ಪಾಸ್ತಿ ಹಾನಿ ಮಾಡಿದ್ದಾರೆ. ನನ್ನಿಂದ (ಡಿಕೆ ಶಿವಕುಮಾರ್) ಪ್ರಚೋದನೆಯಾಗಿದ್ದರೆಂದು ಹೇಳಿದರು, ಹಾಗಿದರೆ ನನ್ನನ್ನು ಬಂಧಿಸಲಿ. ಆದರೆ ಹೊರಗಿನವರ ಸಂಚಿದೆ, ವಿದೇಶದಿಂದ ಬಂದಿದ್ದಾರೆ ಎಂದೂ ಈಶ್ವರಪ್ಪ ದೂರಿದ್ದಾರೆ. ಎನ್ ಐಎ ತನಿಖೆಯಾಗಬೇಕೆಂದು ಹೇಳಿದ್ದಾರೆ, ಹಾಗಾದರೆ ಸಚಿವರಿಗೆ ಪೋಲಿಸರ ಮೇಲೆ ನಂಬಿಕೆ ಇಲ್ವೇ” ಎಂದರು.
ಇದನ್ನೂ ಓದಿ:ಸರ್ಕಾರಕ್ಕೆ ಕೆಟ್ಟ ಹೆಸರು ತರಲೆಂದು ಹಿಂದೂ ಯುವಕರ ಕೊಲೆ ಮಾಡುತ್ತಿದ್ದಾರೆ: ಈಶ್ವರಪ್ಪ
ಗೃಹ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರು ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪನವರು ಶಿವಮೊಗ್ಗ ಸೇವೆ ಮಾಡಿದ್ದಾರೆ ಎಂದು ಒಪ್ಪುತ್ತೇನೆ. ಆದರೆ ಈ ರೀತಿ ಆದರೆ ಜಿಲ್ಲೆಯಲ್ಲಿ ಯಾರು ಬಂಡವಾಳ ಹೂಡಿಕೆ ಮಾಡುತ್ತಾರೆ. ದಕ್ಷಿಣ ಕನ್ನಡ -ಉಡುಪಿಯಲ್ಲಿ ಎಷ್ಟು ಪರಿಣಾಮವಾಗಿದೆ ಎಂದು ಈಗಾಗಲೇ ಗೊತ್ತಿದೆ. ಈಶ್ವರಪ್ಪ ಜಿಲ್ಲೆಯ ನಾಗರಿಕರನ್ನು ಬದುಕಿದ್ದಂಗೆ ಸಾಯಿಸುತ್ತಿದ್ದಾರೆ. ತನಿಖೆಯಾಗಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು.
ರಾಜ್ಯಪಾಲರಿಗೆ ಮನವಿ: ಕಳೆದ ಐದು ದಿನದಿಂದ ನಮ್ಮೆಲ್ಲ ಶಾಸಕರು ಅಹೋರಾತ್ರಿ ಧರಣಿ ಮಾಡುತ್ತಿದ್ದೇವೆ. 24 ಪರಿಷತ್ ಸದಸ್ಯರು, 52 ಜನ ಶಾಸಕರು ಸದನದಲ್ಲಿ ಮಲಗಿದ್ದೇವೆ, ಧರಣಿ ನಡೆಸಿದ್ದೇವೆ. ಇಂದು ಕೂಡ ಮುಂದುವರಿಸುತ್ತೇವೆ. ಆಂತರಿಕವಾಗಿ ಸದನ ಮೊಟಕು ಮಾಡುತ್ತಾರೆಂದು ತಿಳಿದು ಬಂದಿದೆ. ಅಧಿವೇಶನ ಮೊಟಕು ಮಾಡಿದರೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.