ಬೆಂಗಳೂರು: ಮಾಜಿ ಮೇಯರ್ ಸಂಪತ್ ರಾಜ್ ಬಂಧನದ ವಿಚಾರವಾಗಿ ಸುದ್ದಿಗೋಷ್ಟಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಸಂಪತ್ ರಾಜ್ ಎಲ್ಲಿಗೂ ಓಡಿ ಹೋಗಿರಲಿಲ್ಲ. ಅವರ ಆರೋಗ್ಯ ಸರಿಯಿರಲಿಲ್ಲ. ಬಿಜೆಪಿ ಸರ್ಕಾರ ಕಾಂಗ್ರೆಸ್ ನವರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಹೇಳಿದರು.
ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನವರನ್ನು ಟಾರ್ಗೆಟ್ ಮಾಡಬೇಕು ಎಂದು ಮಾಡುತ್ತಿದ್ದಾರೆ. ಏನಾದರೂ ಮಾಡಿ ತೊಂದರೆ ಮಾಡೋಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಗೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಆರೋಪಸಿದರು.
ಅಖಂಡ ಶ್ರೀನಿವಾಸ ಮೂರ್ತಿ ಪರವಾಗಿ ಇಲ್ಲ ಅಂತ ಹೇಗೆ ಹೇಳುತ್ತಾರೆ. ಘಟನೆ ನಡೆಯುತ್ತಲೇ ನಾವು ಅಲ್ಲಿಗೆ ಭೇಟಿ ಕೊಟ್ಟಿದ್ದೇವೆ. ಎಲ್ಲವನ್ನೂ ಪರಿಶೀಲಿಸಿದ್ದೇವೆ. ಪಕ್ಷದ ಚೌಕಟ್ಟಿನಲ್ಲಿ ಏನು ಮಾಡಬೇಕೋ ಮಾಡುತ್ತೇವೆ. ನಾವು ಅಖಂಡ ಅವರ ಪರವಾಗಿಯೇ ಇದ್ದೇವೆ ಎಂದರು.
ಒಬ್ಬರ ವೈಯುಕ್ತಿಕ ಹೇಳಿಕೆ ಮೇಲೆ ನಾನೇನೂ ಕ್ರಮ ಜರುಗಿಸಲು ಸಾಧ್ಯವಿಲ್ಲ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬಂದು ನನ್ನ ಬಳಿ ಮಾತನಾಡಲಿ. ನನ್ನ ಮನೆ ಇದೆ, ಪಕ್ಷದ ಕಚೇರಿ ಇದೆ, ಅಲ್ಲಿ ಬಂದು ಮಾತನಾಡಲಿ. ಮಾಧ್ಯಮಗಳ ಮುಂದೆ ಹೇಳಿದರೆ ಅದಕ್ಕೆ ಪ್ರತಿಕ್ರಿಯೆ ನೀಡಲು ಬರುವುದಿಲ್ಲ. ಏನಾದರೂ ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು ಎಂದು ಅಖಂಡ ಶ್ರೀನಿವಾಸ ಮೂರ್ತಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ:ಡಿಕೆ ಶಿವಕುಮಾರ್ ಅವರೇ ಇನ್ನಾದರೂ ನಮ್ಮ ಪರ ನಿಲ್ಲಿ.. ಅಖಂಡ ಶ್ರೀನಿವಾಸ ಮೂರ್ತಿ ಮನವಿ
ಸರ್ಕಾರದಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಬಗ್ಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಧರ್ಮ ಇರಬೇಕು. ಆದರೆ ಧರ್ಮದಲ್ಲಿ ರಾಜಕಾರಣ ಇರಬಾರದು. ಸರ್ಕಾರ ಎಲ್ಲವನ್ನೂ ಒಡೆಯುವ ಪ್ರಯತ್ನ ಮಾಡುತ್ತಿದೆ. ಎಲ್ಲಾ ಸಮುದಾಯಗಳನ್ನ ಬೇರೆ ಬೇರೆ ಮಾಡುತ್ತಿದ್ದಾರೆ. ಇದರ ಬಗ್ಗೆ ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ನಂತರ ಇದರ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.