Advertisement

ಬಿ.ಎಸ್‌.ಯಡಿಯೂರಪ್ಪ ಹೊಗಳಿದ ಮೋದಿಗೆ ಡಿಕೆಶಿ ಪ್ರಶ್ನೆ

08:25 PM Feb 28, 2023 | Team Udayavani |

ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪ ಅವರ ಬಗ್ಗೆ ಈಗ ಇಷ್ಟೊಂದು ಪ್ರೀತಿ, ಗೌರವ ತೋರುತ್ತಿರುವವರು ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಏಕೆ? ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದ್ದಾರೆ.

Advertisement

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಯಡಿಯೂರಪ್ಪ ಅವರನ್ನು ಹೊಗಳಿರುವ ಬಗ್ಗೆ ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮೋದಿ ಅವರ ಬಗ್ಗೆ ಗೌರವವಿದೆ. ಆದರೆ, ಯಡಿಯೂರಪ್ಪನವರಿಗೆ ಕೊಟ್ಟ ನೋವು, ಕಣ್ಣೀರು ಮರೆಯಲು ಸಾಧ್ಯವೇ?

ವಿಧಾನಸೌಧದಿಂದ ರಾಜಭವನದವರೆಗೆ ಕಣ್ಣೀರು ಹಾಕಿಕೊಂಡು ಹೋದರು. ಕುಟುಂಬ ಸದಸ್ಯರಿಗೆ ಜಾರಿ ನಿರ್ದೇಶನಾಲಯದವರು ಎಷ್ಟು ಸಲ ನೋಟಿಸ್‌ ಕೊಟ್ಟಿದ್ದಾರೆ, ಎಷ್ಟು ಸಲ ವಿಚಾರಣೆ ನಡೆದಿದೆ, ಏನೇನು ಆಗಿದೆ ಎಂಬುದರ ವಿವರಗಳನ್ನು ಇಡಬೇಕೆಂದು ಆಗ್ರಹಿಸಿದರು.

ಕಳೆದ ಚುನಾವಣೆಯಲ್ಲಿ ಬಿಜೆಪಿಗೆ 104 ಸೀಟು ತಂದುಕೊಟ್ಟಿದ್ದ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಏಕೆ? ಎಂಬುದರ ಬಗ್ಗೆ ಜನರಿಗೆ ಉತ್ತರ ಕೊಡಬೇಕು. ಈಗ ಯಡಿಯೂರಪ್ಪ ಬಗ್ಗೆ ಇಷ್ಟೊಂದು ಪ್ರೀತಿ-ಗೌರವ ತೋರುತ್ತಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಸರ್ಕಾರ ಹಾಗೂ ಸಮಾಜಕ್ಕೆ ಅಭದ್ರತೆ ಆಗಿದೆ ಎಂಬ ಕಾರಣದಿಂದ ಇಷ್ಟೊಂದು ಗೌರವ ಕೊಡುತ್ತಿದ್ದಾರೆ.

ಯಡಿಯೂರಪ್ಪ ನಾಯಕತ್ವದಲ್ಲೇ ಚುನಾವಣೆ ಮಾಡುತ್ತೇವೆಂದು ಹೇಳಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತೆಗೆದು ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿ ಮಾಡಲು ಎಂದು ಸವಾಲು ಹಾಕಿದರು.

Advertisement

“ಲಿಪ್ಸ್‌ ಸಿಂಪಥಿ’ ಬೇಡ: ಮಾಜಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲರಿಗೆ ಕಾಂಗ್ರೆಸ್‌ ಅವಮಾನ ಮಾಡಿದೆ ಎಂಬ ಪ್ರಧಾನಿ ಮೋದಿ ಟೀಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್‌, ವೀರೇಂದ್ರ ಪಾಟೀಲರಿಗೆ ಆರೋಗ್ಯ ಸರಿಯಾಗಿರಲಿಲ್ಲ. ಆಗಿನ ಪರಿಸ್ಥಿತಿ ನೋಡಿಕೊಂಡು ರಾಜೀವ್‌ಗಾಂಧಿ ಅವರು ತೀರ್ಮಾನ ಕೈಗೊಂಡರು. ಅಂದಿನ ವಿದ್ಯಮಾನಗಳಿಗೆ ನಾನೇ ಸಾಕ್ಷಿ. ನಿಜಲಿಂಗಪ್ಪ, ವೀರೇಂದ್ರ ಪಾಟೀಲರ ಬಗ್ಗೆ ಮಾತನಾಡುವ ಮೋದಿಗೆ ರಾಜಕಾರಣ ಏನು ಗೊತ್ತು? ಈಗ ಅವರ ಬಗ್ಗೆ “ಲಿಪ್‌ ಸಿಂಪಥಿ” ಬೇಡ ಎಂದು ತಾಕೀತು ಮಾಡಿದರು.

ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ನಿಜಲಿಂಗಪ್ಪ ಅವರನ್ನು ಸೋನಿಯಾಗಾಂಧಿ ಭೇಟಿಯಾಗಿದ್ದರು. ಅವರ ಅಳಿಯನಿಗೆ ರಾಜ್ಯಸಭಾ ಸದಸ್ಯತ್ವ, ಕೇಂದ್ರದಲ್ಲಿ ಸಚಿವ ಸ್ಥಾನ, ಆ ನಂತರ ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಲಾಯಿತು, ಇವೆಲ್ಲಾ ಅವರಿಗೆ ಗೊತ್ತಿಲ್ಲವೇ ಎಂದು ಕಿಡಿ ಕಾರಿದರು.

 

Advertisement

Udayavani is now on Telegram. Click here to join our channel and stay updated with the latest news.

Next