ಬೆಂಗಳೂರು: ಭೂ ಸ್ವಾಧೀನ ವಿವಾದ ಕಾರಣದಿಂದ ಸುಮಾರು 6 ವರ್ಷಗಳಿಗೂ ಹೆಚ್ಚು ಕಾಲದಿಂದ ನನೆಗುದಿಗೆ ಬಿದ್ದಿದ್ದ ಭದ್ರಾ ಮೇಲ್ಡಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆಯ ಕಾಮಗಾರಿಗೆ ದೊಡ್ಡ ತೊಡಕು ನಿವಾರಣೆ ಆಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಅಬ್ಬಿನಹೊಳಲು ಗ್ರಾಮದಲ್ಲಿ ಗುರುವಾರದಿಂದ ಕಾಮಗಾರಿ ಆರಂಭವಾಗಲಿದೆ.
ಚಿತ್ರದುರ್ಗ ಶಾಖಾ ಕಾಲುವೆಯ ಚೈನ್‌ಲಿಂಕ್ ಪಾಯಿಂಟ್ 9ರಿಂದ 2.7 ಕಿಮೀವರೆಗಿನ ಒಟ್ಟು 1.7 ಕಿಮೀ ಉದ್ದದ ಭೂ ಸ್ವಾಧೀನ 6 ವರ್ಷಗಳಿಂದ ವಿವಾದದ ಸ್ವರೂಪ ಪಡೆದು ಕಾಮಗಾರಿ ಆರಂಭಕ್ಕೆ ದೊಡ್ಡ ಕಗ್ಗಂಟಾಗಿತ್ತು. ಈ ವಿವಾದ ಬಗೆಹರಿಯದ ಹೊರತು ಚಿತ್ರದುರ್ಗ ಶಾಖಾ ಕಾಲುವೆಯ ಅಂಚಿನವರೆಗೆ ನೀರು ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಜತೆಗೆ ಹಲವು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು.
ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಕಳೆದ ವಾರ ಚಿಕ್ಕಮಗಳೂರು ಜಿಲ್ಲೆಯ ಐವರು ಶಾಸಕರು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಜತೆಗೆ ಜಿಲ್ಲೆಯ ಶಾಸಕರು, ಚಿತ್ರದುರ್ಗದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಸಹಿತ ಹಿರಿಯ ಅಧಿಕಾರಿಗಳೊಂದಿಗೆ ಅಬ್ಬಿನಹೊಳಲು ಗ್ರಾಮಕ್ಕೆ ಭೇಟಿ ನೀಡಿ ಜನಪ್ರತಿನಿಧಿಗಳು ಹಾಗೂ ಭೂ ಹಿಡುವಳಿ ರೈತರೊಂದಿಗೆ ನಡೆಸಿದ ಸಭೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಹಲವು ವರ್ಷಗಳ ಭೂ ವಿವಾದ ಬಗೆಹರಿದು ಈಗ ಗುರುವಾರದಿಂದ ಕಾಮಗಾರಿ ಆರಂಭವಾಗಲಿದೆ.
ಕಾಮಗಾರಿ ಆರಂಭಿಸಲು ಅಗತ್ಯವಾದ 33 ರೈತರಿಗೆ ಸೇರಿದ 42 ಎಕ್ರೆ ಜಮೀನನ್ನು ಬಿಟ್ಟುಕೊಡುವಂತೆ ರೈತರ ಮನವೊಲಿಸುವಲ್ಲಿ ಡಿಸಿಎಂ ಯಶಸ್ವಿಯಾಗಿದ್ದಾರೆ. ಗುರುವಾರದಿಂದ ಪೊಲೀಸರ ನೆರವಿನೊಂದಿಗೆ ಕಾಮಗಾರಿ ಆರಂಭವಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.