ಕಲಬುರಗಿ: ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಗುರುವಾರ ಕಲಬುರಗಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗಾಣಗಾಪುರಕ್ಕೆ ಭೇಟಿ ನೀಡಿದರು.
ಗಾಣಗಾಪುರದ ದತ್ತಾತ್ರೇಯನ ದೇವಸ್ಥಾನಕ್ಕೆ ತೆರಳಿದ ಡಿ.ಕೆ.ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಗಾಣಗಾಪುರದ ದತ್ತನ ಪಾದ ಪವಿತ್ರವಾದಂತಹ ಪಾದ. ಇದು ನಮ್ಮ ರಾಜ್ಯದಲ್ಲಿ ಬಹಳ ಪವಿತ್ರವಾದ ಸ್ಥಳ ಎಂದರು.
ಮಹಾರಾಷ್ಟ್ರ ಆಂಧ್ರಪ್ರದೇಶ, ಕರ್ನಾಟಕದಿಂದ ಅನೇಕರು ಬಂದು ತಮ್ಮ ಮನೋಕಾಮನೆಗಳು ತೋಡಿಕೊಳ್ಳುತ್ತಾರೆ. ನಾನೂ ಹಿಂದೆ ಕೂಡ ಬಂದಿದ್ದೆ. ಇವತ್ತು ಕೂಡ ಬಂದು ಪೂಜೆ ಸಲ್ಲಿಸಿದ್ದೇನೆ. ಒಂದೇ ಸ್ಥಳದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ದರ್ಶನ ಮಾಡಿದ್ದು, ದತ್ತನ ನಿರ್ಗುಣ ಪಾದದ ದರ್ಶನ ನನಗೆ ದೊರೆತಿದೆ ಎಂದರು.
ಅನುದಾನ ರದ್ದಾಗಿದೆ: ಈ ಹಿಂದೆ ಗಾಣಗಾಪುರದ ಸಂಗಮದಲ್ಲಿ ಒಂದು ಕೆಲಸ ಆಗಬೇಕು ಅಂತಾ ನಮ್ಮ ಶಾಸಕರು ಹೇಳಿದ್ದರು. ಈಗ ಅದರ ಕೆಲಸ ನಡೆಯುತ್ತಿದೆ. ಇದರಿಂದ ನನಗೆ ಸಂತೋಷವಾಗಿದೆ ಎಂದು ಡಿಕೆಶಿ ತಿಳಿಸಿದರು.
ಆದರೆ, ಅಧಿಕಾರ ಇರೋದು ಜನರಿಗೆ ಸಹಾಯ ಮಾಡೋದಕ್ಕೆ. ಯಾರೋ ಕೊಟ್ಟಂತಹ ಕಾರ್ಯಕ್ರಮ ರದ್ದು ಮಾಡುವುದಕ್ಕಲ್ಲ. ನಾನು ಕೊಟ್ಟ ಅನುದಾನ ರದ್ದಾಗಿದೆ. ದತ್ತಾತ್ರೇಯ ನೋಡಿಕೊಳ್ಳುತ್ತಾನೆ. ನಾನು ಕೊಟ್ಟ ಅನುದಾನ 5 ಕೋಟಿ ರೂ. ಕಡಿತಗೊಳಿಸಿರುವ ಬಗ್ಗೆ ನಾನು ಈಗ ಮಾತಾಡಲ್ಲ. ದೇವಸ್ಥಾನದಲ್ಲಿ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.