Advertisement

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

10:50 PM Apr 30, 2024 | Shreeram Nayak |

ಬೆಂಗಳೂರು: ಪೆನ್‌ಡ್ರೈವ್‌ ಇದೆ ಅಂತ ನಾನು ಹೆದರಿಸುವುದೂ ಇಲ್ಲ; ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸವನ್ನೂ ನಾನು ಮಾಡುವುದಿಲ್ಲ. ನಾನೇನಿದ್ದರೂ ಚುನಾವಣೆಯಲ್ಲಿ ಫೇಸ್‌ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಪೆನ್‌ಡ್ರೈವ್‌ ಇದೆ ಎಂದು ಹೆದರಿಸುವುದಿಲ್ಲ. ಅಸೆಂಬ್ಲಿಗೆ ಬನ್ನಿ ಅಂತ ಕರೆದಿದ್ದೇನೆ. ಪೆನ್‌ಡ್ರೈವ್‌ ಹಂಚುವಂತಹ ಚಿಲ್ಲರೆ ಕೆಲಸ ನಾನು ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಆರೋಪಕ್ಕೆ ತೀಕ್ಷ್ಣವಾಗಿ ಉತ್ತರಿಸಿದರು.

ಅಷ್ಟಕ್ಕೂ ಹಳೆಯ ವಿಡಿಯೋ ಅಂತಾ ಆರೋಪಿ ಪ್ರಜ್ವಲ್‌ ತಂದೆ ರೇವಣ್ಣ ಹೇಳಿದ್ದಾರೆ. ಆ ಮೂಲಕ ಅವರೇ ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ಗೌಡರು ತೀರ್ಮಾನ ಮಾಡುತ್ತಾರೆ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ. ಈ ಮಧ್ಯೆ ಬಿಜೆಪಿ ನಾಯಕ ದೇವರಾಜೇಗೌಡ ಅಮಿತ್‌ ಶಾ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ. ಈ ಎಲ್ಲದರ ನಡುವೆಯೂ ನನ್ನ ಕಡೆ ಬೊಟ್ಟು ಮಾಡುತ್ತಿದ್ದಾರೆ. ಕುಮಾರಸ್ವಾಮಿ ಮತ್ತು ಅವರ ಕುಟುಂಬಕ್ಕೆ ನನ್ನ ನೆನಸಿಕೊಳ್ಳದೆ ಸ್ಫೂರ್ತಿ ಬರುವುದಿಲ್ಲ ಎಂದು ವಾಗ್ಧಾಳಿ ನಡೆಸಿದರು.

ಕುಮಾರಸ್ವಾಮಿ ಅವರ ಭಾಷಣ ಕೇಳಿದ್ದೇನೆ. ನನ್ನ ಮಗ ಎಂದು ಹೇಳಿದ್ದಾರೆ. ತಪ್ಪೇನೂ ಇಲ್ಲ ಕುಟುಂಬದ ಕುಡಿ. ನೂಲಿನಂತೆ ಸೀರೆ ಅಂತಾ ಮಾಧ್ಯಮಗಳಲ್ಲಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಪ್ರಕರಣದ ನಂತರ ಅವರ ಪ್ರತಿಕ್ರಿಯೆಯನ್ನೂ ನೋಡಿದ್ದೇನೆ ಎಂದು ಸೂಚ್ಯವಾಗಿ ತಿರುಗೇಟು ನೀಡಿದರು.

ಕರ್ನಾಟಕದಲ್ಲಿ ಮಹಿಳೆಯರ ರಕ್ಷಣೆ ಬಗ್ಗೆ ಕೇಂದ್ರ ಸಚಿವ ಅಮಿತ್‌ ಶಾ ಮಾತನಾಡುತ್ತಾರೆ. ಉಡುಪಿಯಲ್ಲಿ ಫೋಟೋ ಹಿಡಿದಿದ್ದಾರೆ ಅಂತಾ ಈ ಹಿಂದೆ ರಾಷ್ಟ್ರೀಯ ಮಹಿಳಾ ಆಯೋಗವನ್ನು ಕಳುಹಿಸಿದ್ದರು. ಆದರೆ ಈಗ ಬಿಜೆಪಿಯವರು ಯಾಕೆ ಮಾತನಾಡುತ್ತಿಲ್ಲ. ಅವರ ಕುಟುಂಬದವರು ಹೌದೋ ಅಲ್ಲವೋ ನೀವು ಹೇಳಬೇಕು. ಬಿಜೆಪಿ ನಾಯಕರು ಯಾಕೆ ಮಾತಾಡುತ್ತಿಲ್ಲ ಎಂದು ಪ್ರಶ್ನಿಸಿದರು.

Advertisement

ಪಕ್ಷದಿಂದ ವಜಾ ಮಾಡಲಿ, ಒಳಗೆ ಇಟ್ಟುಕೊಳ್ಳಲಿ. ಅದೆಲ್ಲ ಕಣ್ಣು ಒರೆಸುವ ನಾಟಕ. ರಾಜಕಾರಣದಲ್ಲಿ ನನಗೂ ಗೊತ್ತಿದೆ ಅಮಾನತು ಎಂದು ವಾಗ್ಧಾಳಿ ನಡೆಸಿದ ಶಿವಕುಮಾರ್‌, ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹೋಗುವಾಗ ಯಾರು ಅವರ ಜತೆಗಿದ್ದರು. ಯಾರು ಯಾರಿಗೆ ಕರೆ ಮಾಡಿದರು ಕೇಳಿ ಅವರಿಗೆ (ಕುಮಾರಸ್ವಾಮಿಗೆ). ಈ ವಿಚಾರದಲ್ಲಿ ಬಿಜೆಪಿಯವರ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಅಶೋಕ್‌ ಬೆನ್ನುಮೂಳೆ ಇಲ್ಲದ ನಾಯಕ
ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಬೆನ್ನುಮೂಳೆ ಇಲ್ಲದ ನಾಯಕ ಎಂದು ಡಿ.ಕೆ.ಶಿವಕುಮಾರ್‌ ವಾಗ್ಧಾಳಿ ನಡೆಸಿದರು. ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಸಾವಿರಾರು ಮಹಿಳೆಯರು ಸಂತ್ರಸ್ತರಾಗಿದ್ದಾರೆ. ಆದರೆ ಬಿಜೆಪಿಯವರು ಬಾಯಿ ಬಿಡುತ್ತಿಲ್ಲ. ಪ್ರಹ್ಲಾದ್‌ ಜೋಶಿ, ವಿ.ಸುನೀಲ್‌ಕುಮಾರ್‌, ಬಸನಗೌಡ ಪಾಟೀಲ ಯತ್ನಾಳ್‌, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ ಯಾಕೆ ಮಾತಾಡುತ್ತಿಲ್ಲ. ಅಶೋಕ್‌ ಪ್ರತಿಪಕ್ಷ ನಾಯಕರಾದವರು, ಅವರ ಪಕ್ಷದವರು ನೋಡಿಕೊಳ್ಳುತ್ತಾರೆ ಎಂದು ಹೇಳುತ್ತಿದ್ದಾರೆ.

ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಬೆನ್ನುಮೂಳೆ ಇಲ್ಲದ ನಾಯಕ ಎಂದು ವಾಗ್ಧಾಳಿ ನಡೆಸಿದರು. “ಬಿಜೆಪಿಯವರು ಸ್ವಲ್ಪ ಪ್ರಾಬ್ಲಿಮ್‌ ಇದೆ ಎಂದು ಹೇಳಿದ್ದರು ಬ್ರದರ್‌. ಐ ವಿಲ್‌ ಟೇಕ್‌ ಕೇರ್‌ ಅಂತಾ ದೊಡ್ಡವರು ಹೇಳಿದ್ದಾರೆ ಬ್ರದರ್‌ ಅಂತಾ ಹೇಳಿದ್ದಾರೆ’ ಎಂದು ಕುಮಾರಸ್ವಾಮಿ ಶೈಲಿಯಲ್ಲೇ ಶಿವಕುಮಾರ್‌ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next