ಬೆಂಗಳೂರು: ರಾಜ್ಯ ಕಾಂಗ್ರೆಸ್(Congress) ವಲಯದಲ್ಲಿ ಸಿಎಂ-ಡಿಸಿಎಂ ಹುದ್ದೆಗಳ ಮುಸುಕಿನ ಗುದ್ದಾಟವು ಈಗ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಅದೀಗ ಕೆಪಿಸಿಸಿ(KPCC) ಅಧ್ಯಕ್ಷ ಪಟ್ಟದ ಮೇಲೆ ತಿರುಗಿದೆ. ಇದರಿಂದ ಹೇಗೇ ಮಾಡಿದರೂ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಇಕ್ಕಟ್ಟು ತಂದಿಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಅಂಥದ್ದೊಂದು ಚಕ್ರವ್ಯೂಹವನ್ನು ಈಗ ಸಿಎಂ ಬಣ ರೂಪಿಸುತ್ತಿದೆ.
ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಗಾದಿ ಮೇಲೆ ಸಿಎಂ ಬಣ ಕಣ್ಣಿಟ್ಟಿದ್ದು, ಇದಕ್ಕೆ “ಈಶ್ವರ ಖಂಡ್ರೆ’ ದಾಳವನ್ನು ಮುಂದೆ ಬಿಡಲಾಗಿದ್ದು, ಅವರನ್ನೂ ಒಪ್ಪಿಸಲಾಗಿದೆ ಎನ್ನಲಾಗಿದೆ.
ಒಬ್ಬ ವ್ಯಕ್ತಿ ಒಂದು ಹುದ್ದೆಯ ತಿಕ್ಕಾಟ ಸೇರಿದಂತೆ ಹಲವು ರಾಜಕೀಯ ಬೆಳವಣಿಗೆಗಳ ನಡುವೆ ರಾಜ್ಯ ಕಾಂಗ್ರೆಸ್ ನಾಯಕರು ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದಾರೆ. ಸಿಎಂ ಸೇರಿ ಅವರ ಬಣದವರು ರಾಹುಲ್ ಗಾಂಧಿಗೆ ದೂರು ನೀಡಿದ್ದಾರೆನ್ನಲಾಗಿದೆ.
ಇತ್ತ ಡಿ.ಕೆ. ಶಿವಕುಮಾರ್ ದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ದೂರನ್ನಿತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದು ಈಗ ಪಕ್ಷದ ವಲಯದಲ್ಲಿ ಬೇರೆ ರೀತಿಯದೇ ಚರ್ಚೆಯನ್ನು ಹುಟ್ಟುಹಾಕಿದೆ ಎನ್ನಲಾಗಿದೆ.
ಬಣ ಬಡಿದಾಟದ ಬಗ್ಗೆ ಸ್ವತಃ ಹೈಕಮಾಂಡ್ ಕೂಡ ಬೇಸರ ವ್ಯಕ್ತಪಡಿಸಿದೆ. ಹೀಗಾಗಿ ಯಾವುದಾದರೂ ಒಂದು ಬದಲಾವಣೆ ಮೂಲಕ ಇದೆಲ್ಲದಕ್ಕೂ ಅಂತ್ಯ ಹಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.