ಹಾನಗಲ್ಲ: ಬಿಜೆಪಿಯವರು ಕೇವಲ ಸುಳ್ಳು ಹೇಳಿ ಮೋಸ ಮಾಡುತ್ತಿದ್ದಾರೆ. ಸರ್ಕಾರ ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳಬೇಕು. ಆದರೆ, ಸರ್ಕಾರ ನಡೆಸುವವರು ರೈತರು, ಕಾರ್ಮಿಕರು, ಕೋವಿಡ್ ಸೋಂಕಿತರು, ಸತ್ತವರ ಕುಟುಂಬಕ್ಕೆ ಸಹಾಯ ಮಾಡಲಿಲ್ಲ. ಆದರೂ, ಅದ್ಯಾವ ಮುಖ ಇಟ್ಟುಕೊಂಡು ಬಂದು ಮತ ಕೇಳುತ್ತಿದ್ದಾರೋ ಗೊತ್ತಿಲ್ಲ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ವಾಗ್ಧಾಳಿ ನಡೆಸಿದರು.
ತಾಲೂಕಿನ ಕೆಲವರಕೊಪ್ಪ, ಶಿರಗೋಡ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಸೋಮವಾರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ನಾಡಿಗೆ ಒಂದು ಶಾಪ. ಕರ್ನಾಟಕದವರೇ ಕೇಂದ್ರದಲ್ಲಿ ಕಲ್ಲಿದ್ದಲು ಮಂತ್ರಿ. ಆದರೆ, ಇಲ್ಲಿ ಕಲ್ಲಿದ್ದಲು ಕೊರತೆ ಇದೆ. ಕರ್ನಾಟಕದವರೇ ಕೇಂದ್ರದಲ್ಲಿ ಗೊಬ್ಬರದ ಮಂತ್ರಿ. ಆದರೆ ಕರ್ನಾಟಕದಲ್ಲಿ ಗೊಬ್ಬರದ ಕೊರತೆ ಇದೆ. ಜತೆಗೆ ಬೆಲೆಯೂ ಹೆಚ್ಚಳವಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಹೋದ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರು. ಆದರೆ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲಾಗಲಿ, ಆರ್ಥಿಕ ಅನುದಾನವಾಗಲಿ, ನೆರೆ ಪರಿಹಾರವಾಗಲಿ ಬರಲಿಲ್ಲ. ಇದು ನಮ್ಮ ರಾಜ್ಯದ ಹಣೆಬರಹ ಎಂದು ದೂರಿದರು.
ಕೊರಗಿನಲ್ಲೇ ಕೊನೆಯುಸಿರೆಳೆದ ಉದಾಸಿ: ದೇವರು ಸಿ.ಎಂ. ಉದಾಸಿ ಅವರನ್ನು ಬೇಗನೆ ಕರೆಸಿಕೊಂಡಿದ್ದಾನೆ. ನಾನು ಅವರನ್ನು ತಕ್ಕ ಮಟ್ಟಿಗೆ ಬಲ್ಲೆ. ಅವರನ್ನು ಆಗಾಗ್ಗೆ ಭೇಟಿ ಮಾಡುತ್ತಿದ್ದೆ. ಬಹಳ ಸಜ್ಜನ ವ್ಯಕ್ತಿತ್ವ ಅವರದು. ಅವರ ವಿರುದ್ಧ ನಮ್ಮ ಶ್ರೀನಿವಾಸ ಮಾನೆ ಅವರು ಸೋತಿದ್ದರೂ ಸಹ ಆಗಾಗ್ಗೆ ಅವರ ಆರೋಗ್ಯ ವಿಚಾರಿಸುತ್ತಿದ್ದೆ. ಅವರೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದರು. ನಮ್ಮ ಉದಾಸಿ ಅವರ ಮನಸ್ಸಿಗೆ ಇದ್ದ ನೋವೇನೆಂದರೆ, ಅಷ್ಟು ಹಿರಿಯ ನಾಯಕರಾದರೂ ತಮ್ಮನ್ನು ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮಂತ್ರಿ ಮಾಡಲಿಲ್ಲವಲ್ಲಾ ಅಂತಾ. ಅವರನ್ನೇಕೆ ಮಂತ್ರಿ ಮಾಡಲಿಲ್ಲ. ಇದೇ ಕೊರಗಿನಲ್ಲಿ ಉದಾಸಿ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ ಎಂಬುದು ನನ್ನ ಭಾವನೆ. ವ್ಯಕ್ತಿ ಸತ್ತ ಮೇಲೆ ಅವರನ್ನು ಹೊಗಳುವುದಲ್ಲ. ಆತ ಬದುಕಿದ್ದಾಗ ನೀವು ಅವರನ್ನು ಯಾವ ರೀತಿ ಗೌರವಿಸಿದಿರಿ ಎಂಬುದು ಮುಖ್ಯ ಎಂದರು. ರಾಜ್ಯದಿಂದ 25 ಸಂಸದರು ಆಯ್ಕೆಯಾಗಿದ್ದಾರೆ. ಅವರು ರಾಜ್ಯದ ಜನರ ಹಿತಕಾಯಲು ಕೃಷ್ಣ, ಮಹದಾಯಿ, ಮೇಕೆದಾಟು ಯೋಜನೆ ವಿಚಾರವಾಗಿ ಏನಾದರೂ ಮನವಿ ಪತ್ರ ನೀಡಿದ್ದಾರಾ? ಹಾಗಾದ್ರೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಸಾಧನೆ ಏನು? ನಿಮ್ಮ ಸ್ವಾರ್ಥಕ್ಕಾಗಿ ರಾಜ್ಯದ ಧ್ವನಿ ಅಡಗಿಸಿದ್ದೀರಿ. ಮೊನ್ನೆ ಬಿಜೆಪಿ ಶಾಸಕ ರಾಯಚೂರಿನ ಭಾಗವನ್ನು ತೆಲಂಗಾಣಕ್ಕೆ ಸೇರಿಸಬೇಕು ಅಂದಿದ್ದಾರೆ. ಬಿಜೆಪಿಯ ಮತ್ತೂಬ್ಬ ಮಂತ್ರಿ ಹಿಂದೆ ಬೆಳಗಾವಿಯನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂದು ಹೇಳಿದ್ದರು. ಆದರೂ ಬಿಜೆಪಿಯವರು ಅಖಂಡ ಕರ್ನಾಟಕದ ಬಗ್ಗೆ ಮಾತನಾಡಿಲ್ಲ ಎಂದರು.
ನಮಗೆ ಒಂದೊಂದು ಮತವೂ ಮುಖ್ಯ. ನಿಮ್ಮ ಪರಿಸ್ಥಿತಿ, ನಿಮ್ಮ ಬ್ಯಾಂಕ್ ಖಾತೆಯನ್ನು ನೋಡಿ ನಿರ್ಧಾರ ಮಾಡಿ. ನೀವು ಮಾತ್ರವಲ್ಲ, ನಿಮ್ಮ ಜತೆ ಇನ್ನು ಐದು ಜನ ಹಸ್ತದ ಗುರುತಿಗೆ ಮತ ಹಾಕುವಂತೆ ಮಾಡಿ. ನೀವು ಮತಯಂತ್ರದಲ್ಲಿ ಮತ ಚಲಾಯಿಸಿ ದಾಗ ಬರುವ ಶಬ್ಧ ಮೋದಿ ಹಾಗೂ ಬೊಮ್ಮಾಯಿ ಅವರಿಗೆ ಕೇಳಬೇಕು. ಆ ರೀತಿ ನೀವು ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಸಚಿವರಾದ ಎಚ್.ಕೆ. ಪಾಟೀಲ, ಎ.ಎಂ. ಹಿಂಡಸಗೇರಿ, ಅಲ್ಲಂ ವೀರಭದ್ರಪ್ಪ, ಮನೋಹರ ತಹಶೀಲ್ದಾರ್, ಪಿ.ಟಿ. ಪರಮೇಶ್ವರ ನಾಯಕ್, ಬಸವರಾಜ ಶಿವಣ್ಣನವರ, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಅಭ್ಯರ್ಥಿ ಶ್ರೀನಿವಾಸ ಮಾನೆ, ಮಾಜಿ ಸಂಸದ ಚಂದ್ರಪ್ಪ, ಮುಖಂಡ ಅನಿಲ್ ಪಾಟೀಲ ಇತರರು ಇದ್ದರು.