ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಇರುವ ಬಣ ರಾಜಕೀಯವೂ ಬಹಿರಂಗಗೊಂಡಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬಣದ ಇಬ್ಬರು ನಾಯಕರು ತದ್ವಿರುದ್ಧ ಹೇಳಿಕೆ ಗಳನ್ನು ನೀಡಿದ್ದಾರೆ.
“ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡುವುದಾದರೆ ಮಂತ್ರಿಗಿರಿಗೂ ರಾಜೀನಾಮೆ ನೀಡಿ ಪಕ್ಷ ಸಂಘಟನೆ ಮಾಡುತ್ತೇನೆ’ ಎಂದಿದ್ದ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ತಿರುಗೇಟು ನೀಡಿದ್ದಾರೆ.
ಸಚಿವ ರಾಜಣ್ಣ ಸಿಎಂ ಸಿದ್ದರಾಮಯ್ಯ ಬಣ ದಲ್ಲಿ ಗುರುತಿಸಿಕೊಂಡಿದ್ದರೆ, ಜಿ.ಸಿ. ಚಂದ್ರಶೇಖರ್ ಅವರು ಡಿ.ಕೆ. ಶಿವಕುಮಾರ್ ಬಣದಲ್ಲಿ ಹೆಚ್ಚಿಗೆ ಕಾಣಿಸಿಕೊಂಡವರು.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಸಚಿವ ರಾಜಣ್ಣ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿ ಸಿರುವ ಚಂದ್ರಶೇಖರ್, ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಾಲ್ಕು ವರ್ಷಗಳಿಂದ ಅವರು ಪಕ್ಷವನ್ನು ಬೆಳೆಸಿ ಅಧಿಕಾರಕ್ಕೆ ಬಂದಿದ್ದಾರೆ. ಈಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಯೇ ಅಪ್ರಸ್ತುತ ಎಂದರು.
ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ಡಿ.ಕೆ. ಶಿವ ಕುಮಾರ್ ಅಧ್ಯಕ್ಷತೆಯಲ್ಲಿಯೇ ಎದುರಿಸುತ್ತೇವೆ. ಇಂತಹ ವಿಚಾರಗಳೆಲ್ಲ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಬೇಕೇ ವಿನಾ ಹೊರಗಡೆ ಅಲ್ಲ. ಪಕ್ಷದ ಮಿತಿಯನ್ನು ಮೀರಿ ಮಾತನಾಡುವುದು ಸರಿಯಲ್ಲ. ಯಾರೇ ಮಾತನಾಡಿದರೂ ಅದು ತಪ್ಪೇ ಎಂದು ಚಂದ್ರಶೇಖರ್ ತಿರುಗೇಟು ಕೊಟ್ಟರು.