Advertisement

ಬಿರುಸಾಗಿ ಆಡಳಿತ ಮಾಡಿದರೆ ಡಿಕೆಶಿಯವರಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ: ಸಿಎಂ ಬೊಮ್ಮಾಯಿ

08:12 PM Apr 30, 2022 | Team Udayavani |

ನವದೆಹಲಿ: ನಾನು ಬಹಳ ಸರಳವಾಗಿ ಆಡಳಿತ ಮಾಡಿದಾಗಲೇ ಡಿ.ಕೆ. ಶಿವಕುಮಾರ್ ಅವರಿಗೆ ಇಷ್ಟು ತೊಂದರೆಯಾಗಿದೆ, ಇನ್ನು ಬಿರುಸಾಗಿ ಆಡಳಿತ ಮಾಡಿದರೆ ಅವರಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಹೇಳಿಕೆ ನೀಡಿದ್ದಾರೆ.

Advertisement

ನವದೆಹಲಿಯಲ್ಲಿ ಮುಖ್ಯಮಂತ್ರಿಗಳು ಹಾಗೂ ಸಿಜೆಗಳ ಸಮ್ಮೇಳನದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ನನ್ನ ಆಡಳಿತದಲ್ಲಿ ಅವರಿಗೆ ಸಾಕಷ್ಟು ತೊಂದರೆಯಾಗಿದೆ. ಏನೇನೂ ಪ್ರಯತ್ನಗಳನ್ನು ಮಾಡಿದರು ಯಾವುದೂ ಯಶಸ್ವಿಯಾಗಲಿಲ್ಲ ಎಂದರು.

ಕಾಂಗ್ರೆಸ್‍ನವರು ಹಿಟ್ ಅಂಡ್ ರನ್ ಮಾಡಲಾಗುವುದಿಲ್ಲ

ಪಿಎಸ್‍ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ತನಿಖೆಗೆ ಒಂದು ವ್ಯವಸ್ಥೆ ಇದೆ. ಕಾನೂನಿನ ಪ್ರಕಾರವೇ ಆಗಬೇಕು. ನಿಮಗೆ ಅದನ್ನು ಎದುರಿಸಲು ತಾಕತ್ತು ಇಲ್ಲ ಎಂದರೆ ಈ ರೀತಿ ದಿಕ್ಕು ಬದಲಾಯಿಸಬಾರದು. ನೀವೇನೋ ಮಾಹಿತಿಯನ್ನು ಹೇಳಿದ್ದೀರಿ. ಅದರ ಪೂರ್ಣ ಮಾಹಿತಿಯನ್ನು ಕೊಡಿ ಎಂದಷ್ಟೇ ಕೇಳಿದ್ದೇವೆ. ಅದಕ್ಕಾಗಿ ಇಷ್ಟು ವಾದವಿವಾದ ಮಾಡುವ ಅಗತ್ಯವಿಲ್ಲ. ತನಿಖೆಯಲ್ಲಿ ಯಾರ ಹೆಸರು ಬಂದರೂ ತನಿಖೆ ಮಾಡಬೇಕಾಗುತ್ತದೆ. ಹಿಂದೆ ಕೂಡ ಈ ರೀತಿಯಾಗಿದೆ. ಆದ್ದರಿಂದ ಕಾಂಗ್ರೆಸ್‍ನವರು ಹಿಟ್ ಅಂಡ್ ರನ್ ಮಾಡಲಾಗುವುದಿಲ್ಲ ಎಂದರು.

ಬದಲಾವಣೆ ಹಾಗೂ ಸುಧಾರಣೆ

Advertisement

ನೇಮಕಾತಿ ಪ್ರಕ್ರಿಯೆಯಲ್ಲಿ ಆಗಿರುವ ಅಕ್ರಮ ಸರ್ಕಾರದ ವೈಫಲ್ಯ ಅಲ್ಲ. ಹಿಂದೆಯೂ ಕೂಡ ಯುಪಿಎಸ್ಸಿ ಮಾದರಿಯಲ್ಲೇ ನೇಮಕಾತಿ ಆಗುತ್ತಾ ಬಂದಿದೆ. ಮೊದಲ ಬಾರಿಗೆ ಬ್ಲೂಟುತ್ ತಂತ್ರಜ್ಞಾನವನ್ನು ಈ ರೀತಿ ಕುಲಬುರಗಿಯ ಶಿಕ್ಷಣ ಸಂಸ್ಥೆಯಲ್ಲಿ ಆಗಿದೆ. ಚಾಪೆ ಕೆಳಗೆ ಹೋಗುವಂಥವರಿಗೆ ರಂಗೋಲಿ ಕೆಳಗೆ ಹೋಗುವ ಪರೀಕ್ಷಾ ವ್ಯವಸ್ಥೆಯನ್ನು ತರುವ ಅವಶ್ಯಕತೆ ಇದೆ. ಹಿಂದೆಯೂ ಕೂಡ ಬೇಕಾದಷ್ಟು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪೊಲೀಸ್ ಆಯ್ಕೆಯಲ್ಲಿಯೂ ಎರಡು ಮೂರು ಬಾರಿ ಮುಂದೂಡಿರುವ ಪ್ರಕರಣಗಳೂ ಆಗಿವೆ. ಪರೀಕ್ಷಾ ವಿಧಾನದಲ್ಲಿ ಬದಲಾವಣೆ ಹಾಗೂ ಸುಧಾರಣೆ ತರಬೇಕು ಎಂದು ಸೂಚನೆ ನೀಡಿದ್ದೇನೆ. ಯಾವುದೇ ಅಕ್ರಮಗಳು ನಡೆಯದಂತೆ ಮರುಪರೀಕ್ಷೆಯನ್ನು ಅತಿಶೀಘ್ರದಲ್ಲಿಯೇ ಮಾಡಬೇಕೆಂದು ಸೂಚಿಸಲಾಗಿದೆ.

ಆಧಾರ ರಹಿತ ಆರೋಪಗಳು

ಆಧಾರರಹಿತ ಆರೋಪಗಳನ್ನು ಮಾಡಿ ತನಿಖೆಯ ದಿಕ್ಕುತಪ್ಪಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಸಂಪೂರ್ಣವಾಗಿ ಎಫ್.ಎಸ್.ಎಲ್ ವರದಿ ಬಂದಿದೆ. ಅದರ ಆಧಾರದ ಮೇಲೆ ದಾಳಿಯಾಗಿದೆ. ಯಾವುದೇ ಪಕ್ಷವಿರಲಿ, ಯಾರೇ ಆಗಲಿ ನಿಷ್ಪಕ್ಷಪಾತ ತನಿಖೆಯಾಗುತ್ತಿದೆ. ಇದನ್ನು ಅವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಅವರ ಬುಡಕ್ಕೆ ನೀರು ಬಂದಾಗ ಹೀಗೆಲ್ಲ ಮಾತನಾಡುತ್ತಾರೆ. ಪಿಯುಸಿ, ಎಸ್ಎಸ್ಎಲ್ ಸಿ ಅಥವಾ ಯಾವುದೇ ಪರೀಕ್ಷೆ ಇರಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ ಮರುಪರೀಕ್ಷೆ ಆಗಿದೆ. ಆ ನೀತಿ ಇಂದಿನದಲ್ಲ. 30-40 ವರ್ಷಗಳಿಂದ ಇದೆ. ಅದನ್ನೇ ಮಾಡಿದ್ದೇವೆ. ಹೊಸ ಪರೀಕ್ಷೆ ಅಂದರೆ ಅಧಿಸೂಚನೆ ರದ್ದು ಮಾಡಿಲ್ಲ. ಯಾರಿಗೆ ಅವಕಾಶ ಸಿಕ್ಕಿತ್ತೊ ಅವರಿಗಷ್ಟೇ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next