Advertisement

ಕಾಂಗ್ರೆಸ್‌ಗೆ ಹೊಸ ಸಾರಥಿ ಡಿಕೆಶಿ ಮುಂದೆ ಸವಾಲಿನ ಬಂಡೆ

02:04 AM Jul 03, 2020 | Hari Prasad |

ರಾಜ್ಯ ಕಾಂಗ್ರೆಸ್‌ ಇತಿಹಾಸದಲ್ಲಿ ಮೊದಲು ಎಂಬಂತೆ ವಿನೂತನವಾಗಿ “ಡಿಜಿಟಲ್‌’ ಸಮಾರಂಭ ಆಯೋಜಿಸಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿರುವ ಡಿ.ಕೆ.ಶಿವಕುಮಾರ್‌ ಒಂದು ಹಂತದ ಕೆಲಸ ಮುಗಿಸಿದ್ದಾರೆ.

Advertisement

ಬೃಹತ್‌ ಸಂಖ್ಯೆಯ ಕಾರ್ಯಕರ್ತರನ್ನು ಸೇರಿಸಿ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ದೇಶದ ಎಲ್ಲ ಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಅಧಿಕಾರ ಸ್ವೀಕಾರ ಮಾಡುವ ಅವರ ಕನಸಿಗೆ ಕೋವಿಡ್ 19 ತಣ್ಣೀರು ಎರಚಿದರೂ ಡಿಜಿಟಲ್‌ ವ್ಯವಸ್ಥೆ, ಸಾಮಾಜಿಕ ಜಾಲತಾಣದ ಉಪಯೋಗ ಪಡೆದು ರಾಜ್ಯಾದ್ಯಂತ ಪ್ರತಿ ಪಂಚಾಯಿತಿ, ವಾರ್ಡ್‌ ಮಟ್ಟದಲ್ಲೇ ಪ್ರತಿಜ್ಞಾ ಸಮಾರಂಭ ವೀಕ್ಷಿಸುವ ಅವಕಾಶ ಕಲ್ಪಿಸಿ ಲಕ್ಷಾಂತರ ಜನ ಮನೆಯಲ್ಲೇ ಕುಳಿತು ನೋಡುವಂತೆ ಮಾಡುವ ಮೂಲಕ ಯಶಸ್ಸು ಸಾಧಿಸಿದ್ದಾರೆ.

ಜತೆಗೆ, ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಸಂವಿಧಾನದ ಪೀಠಿಕೆ ಓದಿ ಪಕ್ಷವನ್ನು ಅಧಿಕಾರಕ್ಕೆ ತರಲು ಏಕಕಾಲಕ್ಕೆ ಪ್ರತಿಜ್ಞೆ ಕೈಗೊಂಡಿದ್ದು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಲಿ, ಬಿ.ಕೆ.ಹರಿಪ್ರಸಾದ್‌, ದಿನೇಶ್‌ ಗುಂಡೂರಾವ್‌, ಡಾ| ಜಿ.ಪರಮೇಶ್ವರ್‌, ಶಾಮನೂರು ಶಿವಶಂಕರಪ್ಪ, ಎಸ್‌.ಆರ್‌. ಪಾಟೀಲ್‌, ಆರ್‌.ವಿ.ದೇಶಪಾಂಡೆ, ರೆಹಮಾನ್‌ ಖಾನ್‌ ಸಹಿತ ಎಲ್ಲ ನಾಯಕರು ಒಗ್ಗಟ್ಟು ಪ್ರದರ್ಶಿಸುವಂತೆ ಮಾಡಿದ್ದು ಪಕ್ಷದ ತಳಮಟ್ಟದ ಕಾರ್ಯಕರ್ತರಲ್ಲಿಯೂ ಹೊಸ ಉತ್ಸಾಹ ಮೂಡಿಸಿದೆ. ಜತೆಗೆ, ಆಡಳಿತಾರೂಢ ಬಿಜೆಪಿ ಹಾಗೂ ಮತ್ತೂಂದು ವಿಪಕ್ಷ ಜೆಡಿಎಸ್‌ನಲ್ಲೂ ಒಂದಷ್ಟು ಅತಂಕವೂ ಮೂಡಿಸಿರುವುದು ಸಹಜ.

ಅಧಿಕಾರ ಸ್ವೀಕರಿಸಿ ಮಾತನಾಡುತ್ತಾ, ಪಕ್ಷದಲ್ಲಿ ಬ್ಲ್ಯಾಕ್‌ ಮೇಲ್‌ ನಡೆಯಲ್ಲ, ನಾನು ಹಿಂಬಾಲಕರ ಮಾತು ಕೇಳಲ್ಲ. ನಾನು ಅಧ್ಯಕ್ಷನಾದರೂ ಸಾಮಾನ್ಯ ಕಾರ್ಯಕರ್ತನ ರೀತಿ ಕೆಲಸ ಮಾಡುತ್ತೇನೆ. ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆಗೆ ನನ್ನ ಆದ್ಯತೆ, ಮತ್ತೆ ಪಕ್ಷ ಅಧಿಕಾರಕ್ಕೆ ತರಲು ವಿಧಾನಸೌಧದ ಮೆಟ್ಟಿಲ ಚಪ್ಪಡಿ ಕಲ್ಲಾಗುತ್ತೇನೆ ಎಂಬ ಭಾವನಾತ್ಮಕ ಮಾತುಗಳು ಸಹ ಪಕ್ಷದ ಕಾರ್ಯಕರ್ತರಲ್ಲಿ ಭರವಸೆ ಮೂಡಿಸಬಹುದು. ಆದರೆ, ಇದೇ ಒಗ್ಗಟ್ಟು ಮುಂದಿನ ವಿಧಾನಸಭೆ ಚುನಾವಣೆ ವರೆಗೂ ಇರಲಿದೆಯಾ? ಎಂಬ ಪ್ರಶ್ನೆಯೂ ಇದೆ. ಏಕೆಂದರೆ ಕಾಂಗ್ರೆಸ್‌ ಸೋಲಿಸಲು ಬೇರೆ ಪಕ್ಷಗಳು ಬೇಕಿಲ್ಲ ಕಾಂಗ್ರೆಸಿಗರೇ ಸಾಕು ಎಂಬುದು ಹಿಂದಿನ ಚುನಾವಣೆಗಳಲ್ಲಿ ಹಲವಾರು ಬಾರಿ ಸಾಬೀತಾಗಿದೆ. ಗುಂಪುಗಾರಿಕೆಯೇ ಮುಳುವಾಗಿದ್ದು ಇದೆ.

ಡಿ.ಕೆ.ಶಿವಕುಮಾರ್‌ ಅವರ ಮುಂದಿನ ಹಾದಿಯೂ ಆಷ್ಟು ಸುಲಭವಲ್ಲ. ಬಹಿರಂಗವಾಗಿ ಎಷ್ಟೇ ಒಗ್ಗಟ್ಟು ತೋರ್ಪಡಿಸಿದರೂ ಪಕ್ಷದಲ್ಲೇ ಅವರ ಕಾಲೆಳೆ ಯಲು ಒಂದಷ್ಟು ಮಂದಿ ಇದ್ದೇ ಇರುತ್ತಾರೆ. ಜತೆಗೆ ಬೇರೆ ಪಕ್ಷಗಳ ರಾಜ ಕೀಯ ವಿರೋಧಿಗಳನ್ನೂ ಎದುರಿಸಬೇಕಾಗುತ್ತದೆ. ಕಾಂಗ್ರೆಸ್‌ ಪಕ್ಷಕ್ಕಿದ್ದ ಸಾಂಪ್ರದಾಯಿಕ ಮತಬ್ಯಾಂಕ್‌ ಈಗ ಚದುರಿದೆ. ಅದನ್ನು ಮತ್ತೆ ತರುವ ಸವಾಲು ಶಿವಕುಮಾರ್‌ ಮುಂದಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ವೈಫ‌ಲ್ಯಗಳ ವಿರುದ್ಧ ಹೋರಾಟ, ಸರಕಾರದ ಮೇಲೆ ಒತ್ತಡ ಹೇರಿ ಕೋವಿಡ್ 19 ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ದೊರಕುವಂತೆ ಮಾಡುವುದು ತತ್‌ಕ್ಷಣದ ಹೊಣೆಗಾರಿಕೆ.

Advertisement

ಚುನಾವಣೆ ಸಂದರ್ಭದಲ್ಲಿ ಆವರ ಸಮುದಾಯವೂ ಸಂಪೂರ್ಣವಾಗಿ ಬೆನ್ನಿಗೆ ನಿಂತು ಹಿಂದುಳಿದ, ಅಲ್ಪಸಂಖ್ಯಾಕ, ದಲಿತ, ಲಿಂಗಾಯತ ಸಮುದಾಯವೂ ಕೈ ಹಿಡಿದರೆ ಕಾಂಗ್ರೆಸ್‌ ಭದ್ರವಾಗಲು ಸಾಧ್ಯ. ಈ ಹಿಂದೆ ಒಕ್ಕಲಿಗ ಸಮುದಾಯದ ಎಚ್‌.ಡಿ.ದೇವೇಗೌಡರು ಅನಂತರ ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಯಾಗಲು ಇಂಥದ್ದೊಂದು ಭರ್ಜರಿ ಬೆಂಬಲ ರಾಜ್ಯವ್ಯಾಪಿ ಸಿಕ್ಕಿತ್ತು. ಅ ನಿಟ್ಟಿನಲ್ಲಿ ಶಿವಕುಮಾರ್‌ ಪ್ರಯತ್ನ, ಇತರ ನಾಯಕರ ಸಹಕಾರ, ಪರಿಸ್ಥಿತಿಯ ನೆರವು ಇವೆಲ್ಲ ದರ ಮೇಲೆ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ. ಏನೇ ಆದರೂ ಸದ್ಯಕ್ಕೆ ಹೊಸ ಸಾರಥಿಯಿಂದ ಪಕ್ಷಕ್ಕೆ ಒಂದು ರೀತಿಯ ಟಾನಿಕ್‌ ಸಿಕ್ಕಿರುವುದಂತೂ ಹೌದು.

Advertisement

Udayavani is now on Telegram. Click here to join our channel and stay updated with the latest news.

Next