Advertisement

ಕಮೀಷನ್‌ ದಂಧೆ ಮಟ್ಟ ಹಾಕಲು ಕ್ರಮ

12:58 PM Apr 14, 2019 | Team Udayavani |

ಚನ್ನಪಟ್ಟಣ: ಈ ಹಿಂದೆ ಇದ್ದ ಕಮೀಷನ್‌ ದಂಧೆ ಮಟ್ಟಹಾಕಲು ಕ್ರಮ ಕೈಗೊಂಡಿದ್ದೇವೆ. ಕಳ್ಳಬಿಲ್‌ ತಡೆದಿದ್ದೇವೆ, ಎಲ್ಲಾ ಇಲಾಖೆಗಳಲ್ಲಿಯೂ ಇದ್ದ ಅವ್ಯವಸ್ಥೆಗಳನ್ನು ಸರಿಪಡಿಸಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

Advertisement

ಪಟ್ಟಣದ ಅಂಬೇಡ್ಕರ್‌ ನಗರದಲ್ಲಿ ಮೈತ್ರಿ ಅಭ್ಯರ್ಥಿ ಡಿ.ಕೆ. ಸುರೇಶ್‌ ಪರ ಪ್ರಚಾರ ನಡೆಸಿದ ಅವರು ಮಾತನಾಡಿ, ತಾಲೂಕಿನಲ್ಲಿ ಈ ಹಿಂದೆ ಇದ್ದ ಕಮೀಷನ್‌ ಸಂಸ್ಕೃತಿಯನ್ನು ಮಟ್ಟ ಹಾಕಿದ್ದೇವೆ. ನಾವು ಯಾವುದೇಗುತ್ತಿಗೆ ನೀಡಲು ಕಮೀಷನ್‌ ಪಡೆದಿಲ್ಲ,ಕಾಮಗಾರಿಗಳು ಸಮರ್ಪಕವಾಗಿ ನಡೆಸುವಂತೆ ಅಧಿಕಾರಿಗಳಿಗೆ ಆದೇಶವನ್ನು ಮಾಡಿದ್ದೇವೆ. ಹಾಗೇನಾದರೂ ಕಮೀಷನ್‌ ಪಡೆದಿರುವ ಉದಾಹರಣೆಯಿದ್ದರೆ ಹೇಳಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.

ಸೇವೆ ಮಾಡಲು ಅವಕಾಶ ನೀಡಿ: ಲೋಕಸಭಾ ಕ್ಷೇತ್ರದಲ್ಲಿ ಒಬ್ಬ ಕ್ರಿಯಾಶೀಲ ಸಂಸದರನ್ನು ಎರಡು ಬಾರಿ ಆಯ್ಕೆ ಮಾಡಿದ್ದೀರಿ. ಈ ಬಾರಿಯೂ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ ಅವರು, ಅಚ್ಛೇದಿನ್‌ ಮಾಡುತ್ತೇವೆ ಎಂದು ಬಂದ ಕೇಂದ್ರದ ಬಿಜೆಪಿ ಸರ್ಕಾರ ಯಾರಿಗೆ ಚ್ಛೇದಿನ್‌ ತಂದಿದೆ. ಬಡವರು ಮನೆ ನಿರ್ಮಾಣ ಮಾಡಲು ಮುಂದಾದರೆ ಸಿಮೆಂಟ್‌, ಕಬ್ಬಿಣದ ಬೆಲೆ ಗಗನಕ್ಕೇರಿದೆ. ಸಿಲಿಂಡರ್‌, ಪೆಟ್ರೋಲ್‌, ಕೇಬಲ್‌ ದರ ಏರಿಸಿದ್ದಾರೆ. ಉದ್ಯಮಿಗಳು ಜಿಎಸ್‌ಟಿಯಿಂದ ನೆಮ್ಮದಿ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು. ಬಿಜೆಪಿಗೆ ಮತ ಹಾಕಿ ಯಾವುದೇ ಪ್ರಯೋಜನವಿಲ್ಲ. ಈಗಲೂ ಬಿಜೆಪಿಯಲ್ಲಿ ಉಳಿದಿರುವವರಿಗೆ ಆಹ್ವಾನ ನೀಡುತ್ತಿದ್ದೇವೆ. ನೀವು ಜೆಡಿಎಸ್‌ ಅಥವಾ ಕಾಂಗ್ರೆಸ್‌ ಪಕ್ಷಕ್ಕೆ ಸೇರಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು. ಇನ್ನೂ ಎಷ್ಟು ದಿನ ಅಸಹನೆಯಿಂದ ಇರುತ್ತೀರಿ ಎಂದು ಪ್ರಶ್ನೆ ಮಾಡಿದ ಅವರು, ಹೆಚ್ಚಿನ ಬಹುಮತದಿಂದ ಸುರೇಶ್‌ ಅವರನ್ನು ಗೆಲ್ಲಿಸಬೇಕು ಎಂದು ಮನವಿ
ಮಾಡಿದರು. ಅರ್ಕಾವತಿ ನಮ್ಮಲ್ಲೇ ಇದೆ: ನಾನು ಇಗ್ಗಲೂರು ಜಲಾಶಯದಿಂದ ನೀರನ್ನು ಕನಕಪುರ ತಾಲೂಕಿಗೆ ಹರಿಸಿಕೊಂಡಿದ್ದೇನೆ ಎಂದು ಆರೋಪಿಸಲಾಗುತ್ತಿದೆ.

ನನಗೆ ಅಂತಹ ಆಸೆ ಇಲ್ಲ, ಎಲ್ಲಾ ರೈತರೂ ಒಂದೇ, ಕನಕಪುರ ತಾಲೂಕಿನಲ್ಲಿಯೇ ಅರ್ಕಾವತಿ ನದಿ ಇದೆ. ಇಲ್ಲಿ ಕೆರೆಗಳು ತುಂಬುವ ಮೊದಲೇ ಅಲ್ಲಿ ಎಲ್ಲಾ ವ್ಯವಸ್ಥೆ ಮಾಡಿ ಕೊಂಡಿದ್ದೇವೆ, ಇಲ್ಲಿಂದ ನೀರು ಪಡೆಯುವ ಅಗತ್ಯವಿಲ್ಲ, ಜಲಸಂಪನ್ಮೂಲ ಇಲಾಖೆಯಿಂದ 600 ಕೋಟಿ ರೂ. ವೆಚ್ಚದಲ್ಲಿ ಶಿಂಷಾ ಸತ್ತೇಗಾಲ ಯೋಜನೆಯನ್ನು ವರ್ಷವಿಡೀ ಜಿಲ್ಲೆಗೆ ನೀರುಣಿಸಲು ಯೋಜನೆ ರೂಪಿಸಿದ್ದೇವೆ. ಅನುಷ್ಠಾನದ ನಂತರ ಯಾವುದೇ ಸಮಸ್ಯೆ
ಇರುವುದಿಲ್ಲ ಎಂದು ಹೇಳಿದರು.

ಪ್ರತ್ಯೇಕ ನೀರು ಸರಬರಾಜಿಗೆ ವ್ಯವಸ್ಥೆ: ರಾಮನಗರ ಹಾಗೂ ಚನ್ನಪಟ್ಟಣ ನಗರಗಳಿಗೆ ಪ್ರತ್ಯೇಕ ನೀರು ಸರಬರಾಜು ವ್ಯವಸ್ಥೆ ಮಾಡಲು 1000 ಕೋಟಿ ರೂ. ನೀಡಿದ್ದೇವೆ. ಟೆಂಡರ್‌ ಹಂತದಲ್ಲಿದೆ. ತಾಲೂಕಿನಲ್ಲಿ ಅಗತ್ಯವಿರುವ ಎಲ್ಲಾ ಕಾಮಗಾರಿಗಳನ್ನು ಪಟ್ಟಿ ಮಾಡುತ್ತಿದ್ದೇವೆ. ಚರಂಡಿ, ರಸ್ತೆ ಸೇರಿದಂತೆ
ಮೂಲಭೂತ ಸೌಲಭ್ಯಗಳನ್ನು ನೀಡುತ್ತೇವೆ.ಇದರಲ್ಲಿ ಯಾವುದೇ ಅನುಮಾನ  ಬೇಡ. ಇಡೀ ದೇಶದಲ್ಲಿಯೇ ಯಾವುದೇ ಲೋಕಸಭಾ ಕ್ಷೇತ್ರದಲ್ಲಿ 270 ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲ ಸಂಸದ ಸುರೇಶ್‌ ಆ ಸಾಧನೆ ಮಾಡಿದ್ದಾರೆ. ಜನತೆಗೆ ಶುದ್ಧ ನೀರು ನೀಡುವುದು, ಆರೋಗ್ಯ ಕಾಪಾಡುವುದು ಅವರ ಉದ್ದೇಶವಾಗಿದೆ. ಜನಸೇವೆಗಾಗಿ ಮತ್ತೂಮ್ಮೆ ಅವರನ್ನು ಆರಿಸಬೇಕು ಎಂದು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಗಂಗಾಧರ್‌, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ವೀಣಾ ಕುಮಾರಿ, ಬಮೂಲ್‌ ನಿರ್ದೇಶಕ ಎಸ್‌.ಲಿಂಗೇಶ್‌. ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎ.ಸಿ.ವೀರೇಗೌಡ, ಶಿವಮಾದು, ಮುದ್ದುಕೃಷ್ಣ, ಕುಕ್ಕಟ ಮಂಡಳಿ ಅಧ್ಯಕ್ಷ ಡಿ.ಕೆ.ಕಾಂತರಾಜು, ಜಿಪಂ ಸದಸ್ಯರಾದ ಸುಗುಣ, ಪ್ರಸನ್ನ ಕುಮಾರ್‌, ನಟಿ ಅಭಿನಯ, ಚಂದ್ರ ಸಾಗರ್‌, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ರಾಜಣ್ಣ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next