ಮೈಸೂರು: ಡಿ.ಕೆ. ಶಿವಕುಮಾರ್ ಪ್ರತಿನಿಧಿಸುವ ಕಾಂಗ್ರೆಸ್ ಹಾಗೂ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದ ಮಾವ ತಿಮ್ಮಯ್ಯ ಅವರ ಮನೆ ಡಿಕೆಶಿ ಅವರ ಸೇಫ್ ಲಾಕರ್ ಆಗಿತ್ತೇ? ಇವು ಸದ್ಯಕ್ಕೆ ಸ್ಥಳೀಯವಾಗಿ ಚರ್ಚಿತವಾಗುತ್ತಿರುವ ವಿಚಾರಗಳು. ಬುಧವಾರ ಬೆಳಗ್ಗೆಯಿಂದ ಶುರುವಾದ ಐಟಿ ದಾಳಿ, ಗುರುವಾರವೂ ನಡೆದಿದೆ. ಮಾವ ತಿಮ್ಮಯ್ಯ ಅವರ ಮನೆ ಡಿಕೆಶಿ ಅವರ ಸೇಫ್ ಲಾಕರ್ ಎಂಬ ಮಾಹಿತಿ ಕಲೆಹಾಕಿಕೊಂಡೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಮಹತ್ವದ ದಾಖಲೆ, ಚಿನ್ನಾಭರಣ, ಭಾರಿ ಪ್ರಮಾಣದ ನಗದು ಕಾಯುವ ಸಲುವಾಗಿಯೇ ಅಧಿಕಾರಿಗಳು ಬುಧವಾರ ರಾತ್ರಿ ತಂಗಿದ್ದರಾ ಎಂಬ ಚರ್ಚೆಯೂ ನಡೆದಿದೆ. ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಹೋಟೆಲ್‌ನಿಂದ ಊಟ ತರಿಸಿಕೊಂಡು ಊಟ ಮಾಡಿದ ಅಧಿಕಾರಿಗಳು ಅಲ್ಲಿಯೇ ನಿದ್ರೆಗೆ ಜಾರಿದ್ದಾರೆ. ಆದರೆ ತಂಡದಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು ಮಾತ್ರ ರಾತ್ರಿ ಹೋಗಿ ಬೆಳಗ್ಗೆ ಬಂದು ತಂಡ ಸೇರಿಕೊಂಡರು ಎಂದು ತಿಳಿದುಬಂದಿದೆ. ತಿಮ್ಮಯ್ಯ ಅವರ ಮನೆಯಲ್ಲಿ ಮಹಿಳೆಯರಿದ್ದ ಕಾರಣಕ್ಕೆ ರಾತ್ರಿ ಬಂದಿದ್ದ ಮಹಿಳಾ ಪೊಲೀಸರು, ಗುರುವಾರ ಬೆಳಗ್ಗೆ ವಾಪಸ್ ಹೋದರು. ಉಳಿದಂತೆ ಮನೆಯಲ್ಲಿದ್ದ ಮಕ್ಕಳಿಗೆ ಮಾತ್ರ ಶಾಲೆಗೆ ಹೋಗಲು ಅವಕಾಶ ಕೊಟ್ಟಿರುವ ಅಧಿಕಾರಿಗಳು, ಉಳಿದವರಿಗೆ ಗೃಹಬಂಧನ ವಿಧಿಸಿದ್ದಾರೆ. ಈ ಮಧ್ಯೆ ಮಧ್ಯಾಹ್ನ ಹಿಂಬಾಗಿಲ ಮೂಲಕ ಹೊರಬಂದ ತಿಮ್ಮಯ್ಯ, “ಅವರ ಕೆಲಸ ಇನ್ನೂ ಮುಗಿದಿಲ್ಲವಂತೆ, ಅವರು ಮಾಡಿಕೊಳ್ಳಲಿ’ ಎಂದು ಹೇಳಿ ಬಂದಷ್ಟೇ ವೇಗದಲ್ಲಿ ವಾಪಸ್ಸಾದರು. ಚಿನ್ನಾಭರಣ ವಶ?: ಈ ಮಧ್ಯೆ ತಿಮ್ಮಯ್ಯ ಅವರ ಪುತ್ರ ಸತ್ಯನಾರಾಯಣ ದಂಪತಿಯನ್ನು ತಮ್ಮ ಕಾರಿನಲ್ಲಿ ನಜರ್ ಬಾದ್‌ನಲ್ಲಿರುವ ಐಟಿ ಕಚೇರಿಗೆ ಕರೆದೊಯ್ದ ಅಧಿಕಾರಿಗಳು ಸಂಜೆ ವೇಳೆಗೆ ಮನೆಗೆ ಕರೆತಂದರು. ಮನೆಯಿಂದ ಹೋಗುವಾಗ ಬರಿಗೈಯಲ್ಲಿದ್ದ ಸತ್ಯನಾರಾಯಣ ದಂಪತಿ ವಾಪಸ್ ಬರುವಾಗ ಲೋಗೋಶ್ ಜುವೆಲ್ಲರಿ ಹೆಸರಿನ ಬ್ಯಾಗ್‌ಗಳನ್ನು ಹಿಡಿದು ತಂದಿದ್ದಾರೆ. ಈ ಮೂಲಕ ಅವರು ಮನೆಯಲ್ಲಿದ್ದ ಚಿನ್ನಾಭರಣವನ್ನು ವಶಕ್ಕೆ ಪಡೆದಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. 2ನೇ ದಿನವೂ ಮುಂದುವರಿದ ಪರಿಶೀಲನೆ: ತಿಮ್ಮಯ್ಯ ಅವರ ಮನೆಯಲ್ಲಿ ಸತತ 2ನೇ ದಿನವೂ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಮನೆಯ ಲಾಕರ್‌ನಲ್ಲಿ ಬೇರೆ ಬೇರೆ ಬ್ಯಾಂಕುಗಳ ಪಾಸ್ ಪುಸ್ತಕಗಳು ಹಾಗೂ ಬ್ಯಾಂಕ್ ಲಾಕರ್‌ಗಳ ದಾಖಲೆಗಳು ದೊರೆತಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ಭಾವಮೈದುನ ಸತ್ಯನಾರಾಯಣ ಅವರನ್ನು ಸಮೀಪದ ಬ್ಯಾಂಕ್‌ಗೆ ಕರೆದೊಯ್ದು ಬ್ಯಾಂಕ್ ಲಾಕರ್‌ನಲ್ಲಿರಿಸಿದ್ದ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ಹಣಕಾಸು ವ್ಯವಹಾರದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಆಪ್ತನ ಮನೆ ಮೇಲೂ ದಾಳಿ: ತಿಮ್ಮಯ್ಯ ಅವರ ಮನೆಯಪರಿಶೀಲನೆ ಜತೆಗೆ ಅವರ ಆಪ್ತರ ಚಲನವಲನಗಳ ಬಗ್ಗೆಯೂ ನಿಗಾ ಇರಿಸಿದ್ದ ಅಧಿಕಾರಿಗಳು, ಗುರುವಾರ ಮಧ್ಯಾಹ್ನದ ವೇಳೆಗೆ ಸ್ಥಳೀಯ ಪೊಲೀಸರನ್ನು ಕರೆಸಿಕೊಂಡು ಇಟ್ಟಿಗೆಗೂಡಿನಲ್ಲೇ ಇರುವ ಎಡ್ವಿನ್ ಮನೆ ಮೇಲೆ ದಾಳಿನಡೆಸಿ ಪರಿಶೀಲನೆ ನಡೆಸಿ, ಅವರ ಸ್ವಿಪ್ಟ್ ಕಾರಿನಲ್ಲಿ ಸಿಕ್ಕ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.