Advertisement

ದ.ಕ. ಜಿಲ್ಲೆ ಗೋಳ್ತ ಮಜಲಿನಲ್ಲಿ ಮಲತ್ಯಾಜ್ಯ ಸಂಸ್ಕರಣೆಗೆ ಘಟಕ

03:05 PM Jan 12, 2023 | Team Udayavani |

ಮಂಗಳೂರು: ಗ್ರಾಮೀಣ ಭಾಗದ ನೈರ್ಮಲ್ಯ ನಿರ್ವಹಣೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಉದ್ದೇಶದಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಸ್ವಚ್ಛ ಭಾರತ್‌ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಡೆ ಮಾನವ ಮಲತ್ಯಾಜ್ಯ ಸಂಸ್ಕರಣ ಘಟಕ (ಫೀಕಲ್‌ ಸ್ಲಡ್ಜ್ ಮ್ಯಾನೇಜ್‌ಮೆಂಟ್‌ ಯುನಿಟ್‌) ಗಳನ್ನು ನಿರ್ಮಿಸಲಾಗಿದೆ.

Advertisement

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾ.ಪಂ. ಮತ್ತು ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾ.ಪಂ.ನಲ್ಲಿ ಘಟಕಗಳು ನಿರ್ಮಾಣಗೊಂಡಿದ್ದು, ಉಜಿರೆಯ ಘಟಕ ಪ್ರಾಯೋಗಿಕವಾಗಿ ಕಾರ್ಯಾರಂಭಿಸಿದೆ. ಗೋಳ್ತಮಜಲು ಘಟಕ ಜನವರಿ ಅಂತ್ಯದೊಳಗೆ ಕಾರ್ಯಾಚರಣೆಗೆ ಸಿದ್ಧವಾಗಲಿದೆ. ಉಭಯ ತಾಲೂಕುಗಳ 57 ಗ್ರಾಮಗಳಿಗೆ ಅನುಕೂಲವಾಗಲಿದೆ.

ಮಲತ್ಯಾಜ್ಯದ ಸೂಕ್ತ ನಿರ್ವಹಣೆ ಗ್ರಾಮೀಣ ಭಾಗದಲ್ಲಿ ಶೌಚಾಲಯ ಗಳಿಗೆ ಗುಂಡಿ ನಿರ್ಮಿಸಿ ವಿಲೇವಾರಿ ಮಾಡಲಾಗುತ್ತದೆ. ಈ ಗುಂಡಿಗಳು ಒಂದೆರಡು ವರ್ಷದಲ್ಲಿ ತುಂಬುವುದರಿಂದ ವಿಲೇವಾರಿ ಸಮಸ್ಯೆಯಾಗುತ್ತದೆ. ಸ್ಥಳಾವಕಾಶವಿರುವವರು ಇನ್ನೊಂದು ಗುಂಡಿ ತೆಗೆದು ಬದಲಿ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಇಲ್ಲದವರು ಖಾಸಗಿ ಏಜೆನ್ಸಿಗಳ ಮೂಲಕ ಗುಂಡಿ ಖಾಲಿ ಮಾಡಿಸುತ್ತಾರೆ. ಈ ಏಜೆನ್ಸಿಯವರು ತ್ಯಾಜ್ಯವನ್ನು ನದಿ, ಹಳ್ಳ, ತೆರೆದ ಸ್ಥಳಗಳಿಗೆ ಬಿಡುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದನ್ನು ಮನಗಂಡು ಮಲತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕೆ ಇಲಾಖೆ ಮುಂದಾಗಿದೆ.

ಘಟಕದ ಕಾರ್ಯನಿರ್ವಹಣೆ
ಈ ಸಂಸ್ಕರಣ ಘಟಕಗಳು ಸಸ್ಯಸಹಿತ ಅಥವಾ ರಹಿತ ಡ್ರೈಯಿಂಗ್‌ ಬೆಡ್‌, ಸೆಟ್ಲರ್‌, ಎನೆರೋಬಿಕ್‌ ಫಿಲ್ಟರ್‌, ಪ್ಲಾಂಟೆಡ್‌ ಗ್ರಾವೆಲ್‌ ಫಿಲ್ಟರ್‌ ಮತ್ತು ಇಂಗು ಗುಂಡಿಗಳನ್ನು ಹೊಂದಿರುತ್ತವೆ. ಶೌಚ ಗುಂಡಿಯಿಂದ ತೆಗೆದ ತ್ಯಾಜ್ಯವನ್ನು ಡಿ-ಸ್ಲಡ್ಲಿಂಗ್ ವಾಹನದ ಮೂಲಕ ಸಂಸ್ಕರಣ ಘಟಕಕ್ಕೆ ತಂದು ಸೋಸಿ ಅಜೈವಿಕ ಘನ ವಸ್ತುಗಳನ್ನು ಪ್ರತ್ಯೇಕಿಸಲಾಗುತ್ತದೆ. ಅಲ್ಲಿಂದ ನೀರನ್ನು ಸೆಟ್ಲರ್‌ ಮೂಲಕ ಎನೆರೋಬಿಕ್‌ ಫಿಲ್ಟರ್‌ಗೆ ವರ್ಗಾಯಿಸಲಾಗುತ್ತದೆ. ಮುಂದಕ್ಕೆ ಪ್ಲಾಂಟೆಡ್‌ ಗ್ರಾವೆಲ್‌ ಫಿಲ್ಟರ್‌ನಲ್ಲಿ ಸಂಗ್ರಹಗೊಳ್ಳುತ್ತದೆ.

ಇದು ತೆರೆದ ತೊಟ್ಟಿಯಾಗಿದ್ದು, ದೊಡ್ಡ-ಸಣ್ಣ ಗಾತ್ರದ ಜಲ್ಲಿಕಲ್ಲುಗಳ ಪದರ ಹೊಂದಿರುತ್ತದೆ. ಮೇಲ್ಭಾಗದಲ್ಲಿ ವಿವಿಧ ಗಿಡಗಳನ್ನು ಬೆಳೆಸಲಾಗುತ್ತದೆ. ನೀರಿನಲ್ಲಿರುವ ನೈಟ್ರೋಜನ್‌, ಫಾಸ್ಪರಸ್‌ ಮತ್ತು ಪೊಟಾಶಿಯಂ ಅಂಶಗಳನ್ನು ಹೀರಿ ಸಸ್ಯಗಳು ಬೆಳೆಯುತ್ತವೆ. ಇಲ್ಲಿಂದ ಶುದ್ಧೀಕರಣಗೊಂಡ ನೀರು ಇಂಗು ಗುಂಡಿ ಸೇರುತ್ತದೆ. ಇನ್ನೊಂದೆಡೆ 2-3 ತಿಂಗಳಲ್ಲಿ ಡ್ರೈಯಿಂಗ್‌ ಬೆಡ್‌ನ‌ಲ್ಲಿರುವ ಹೂಳು ಚೆಕ್ಕೆಯಂತಾಗುತ್ತದೆ. ಇದನ್ನು ಕೃಷಿಗೆ ಜೈವಿಕ ಗೊಬ್ಬರವಾಗಿ ಬಳಸಬಹುದು.

Advertisement

ಉಜಿರೆಯಲ್ಲಿ ಇರುವ ಘನ ತ್ಯಾಜ್ಯ ಘಟಕ ಸಮೀಪ ದಲ್ಲೇ 20 ಸೆಂಟ್ಸ್‌ ಜಾಗದಲ್ಲಿ ಮಲತ್ಯಾಜ್ಯ ಸಂಸ್ಕರಣ ಘಟಕ ವನ್ನೂ ನಿರ್ಮಿಸಲಾಗಿದೆ. ಮೂರು ತಿಂಗಳಿಂದ ಕಾರ್ಯಾಚರಿಸುತ್ತಿದೆ. ತಾಲೂಕು ಕಚೇರಿಯ ಸಕ್ಕಿಂಗ್‌ ಯಂತ್ರವನ್ನು ಉಪಯೋಗಿಸಿ ಶೌಚ ಗುಂಡಿಗಳ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ಶೀಘ್ರದಲ್ಲೇ ಘಟಕ ಉದ್ಘಾಟನೆಗೊಳ್ಳಲಿದೆ.
-ಪ್ರಕಾಶ್‌ ಶೆಟ್ಟಿ, ಗ್ರಾ.ಪಂ.
ಅಭಿವೃದ್ಧಿ ಅಧಿಕಾರಿ, ಉಜಿರೆ

ಈಗಾಗಲೇ ಕಾರ್ಯಾರಂಭಿಸಿರುವ ಉಜಿರೆಯ ಘಟಕ ಯಶಸ್ವಿಯಾಗಿದೆ. ದುರ್ವಾಸನೆ ಇತ್ಯಾದಿ ಯಾವುದೇ ಸಮಸ್ಯೆ ಇಲ್ಲದ ಕಾರಣ ಜನ ವಿರೋಧವೂ ಇಲ್ಲ. ಗೋಳ್ತಮಜಲು ಘಟಕದ ಕಾರ್ಯನಿರ್ವಹಣೆಯನ್ನು ಗಮನಿಸಿ ಮುಂದೆ ಎಲ್ಲ ತಾಲೂಕುಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.
-ಆನಂದ ಕುಮಾರ್‌, ದ.ಕ. ಜಿ.ಪಂ. ಉಪಕಾರ್ಯದರ್ಶಿ

*ಭರತ್ ಶೆಟ್ಟಿಗಾರ್

Advertisement

Udayavani is now on Telegram. Click here to join our channel and stay updated with the latest news.

Next