ಮಂಗಳೂರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ 2024-25ನೇ ಸಾಲಿಗೆ ಜಿಲ್ಲೆಯಲ್ಲಿ 18,474.08 ಕೋಟಿ ರೂ.ಗಳನ್ನು ಆದ್ಯತಾ ವಲಯಕ್ಕೆ ಸಾಲವಾಗಿ ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಆನಂದ್ ಕೆ. ಹೇಳಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ನಬಾರ್ಡ್ ವತಿಯಿಂದ ಹೊರತಂದಿರುವ ಪೊಟೆನ್ಶಿಯಲ್ ಲಿಂಕ್ಡ್ ಕ್ರೆಡಿಟ್ ಪ್ಲಾನ್ 2024-25ನೇ ಸಾಲಿನ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜಿಲ್ಲೆಯ ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಲು ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ 2024-25ನೇ ಸಾಲಿಗೆ 18,474.08 ಕೋಟಿ ರೂ. ಸಾಲ ನೀಡಲು ಉದ್ದೇಶಿಸಿದ್ದು, ಇದರಲ್ಲಿ ಶೇ. 47.73 ಕೃಷಿ ಚಟುವಟಿಕೆಗಳಿಗೆ ಸಾಲ ನೀಡಲು ಮೀಸಲಿರಿಸಿದರೆ, ಸೂಕ್ಷ್ಮ ಮತ್ತು ಸಣ್ಣ ಮಧ್ಯಮ ಕೈಗಾರಿಕೆಗಳಿಗೆ ಶೇ. 32.86ರಷ್ಟು, ವಸತಿ ಯೋಜನೆಗೆ ಶೇ. 5.07ರಷ್ಟು ಶಿಕ್ಷಣಕ್ಕೆ ಶೇ. 0.91ರಷ್ಟು, ಸಾಮಾಜಿಕ ಅಭಿವೃದ್ಧಿಗೆ ಶೇ. 0.80ರಷ್ಟು, ರಫ್ತು ಸಾಲ ಶೇ. 5.63ರಷ್ಟು, ವಲಯವಾರು ಸಾಲದ ಪ್ರಮಾಣ ಅಂದಾಜು ಸಿದ್ಧಪಡಿಸಲಾಗಿದೆ ಎಂದರು.
ನಬಾರ್ಡ್ ಗ್ರಾಮೀಣ ಜನತೆಗೆ ಸಮೃದ್ಧ ಹಾಗೂ ಸುಸ್ಥಿರ ಜೀವನವನ್ನು ನಡೆಸಲು ಅವಕಾಶವನ್ನು ಒದಗಿಸುವ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ನಬಾರ್ಡ್ ಬ್ಯಾಂಕ್ ಎಜಿಎಂ ಸಂಗೀತಾ ಕರ್ತ, ಕೆನರಾ ಬ್ಯಾಂಕ್‌ನ ರೀಜನಲ್ ಮ್ಯಾನೇಜರ್ ರಾಧಿಕಾ, ಎಸ್‌ಬಿಐ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಗೌರವ್, ಯೂನಿಯನ್ ಬ್ಯಾಂಕ್‌ನ ಸಯ್ಯದ್ ಖುರೇಶಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ರೀಜನಲ್ ಮ್ಯಾನೇಜರ್ ವಿಜಯ್ ಅಶೋಕ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಬಿಇಒ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಸಚಿನ್ ಹೆಗ್ಡೆ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಕವಿತಾ ಶೆಟ್ಟಿ ಉಪಸ್ಥಿತರಿದ್ದರು.