ಬೆಂಗಳೂರು: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ “ಡಿ-ಫಾರ್ಮ್’ ಕೋರ್ಸ್‌ಗೆ ಸೀಟು ಕೊಡಿಸುವುದಾಗಿ ಇರಾನಿ ಪ್ರಜೆಯೊಬ್ಬನಿಂದು 8.5 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪಿಯನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ. ಬಾಗಲೂರಿನ ಸೈಯದ್ ಮೊಹಮ್ಮದ್ ಹುಸೈನಿ (56) ಬಂಧಿತ. ಆರೋಪಿ ಇರಾನ್ ಮೂಲದ ಸೈಯ್ಯದ್ ಎಸ್ತಕಿ (20) ಎಂಬಾತನಿಗೆ ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದರು.
ಮೈಸೂರಿನ ವಿಜಯನಗರ ಮೂಲದ ಆರೋಪಿ ಹುಸೈನಿ ಕೆಲ ವರ್ಷಗಳಿಂದ ಬೆಂಗಳೂರಿನ ಬಾಗಲೂರಿನಲ್ಲಿ ವಾಸವಾಗಿದ್ದಾನೆ. ಭೂಪಸಂದ್ರದ ಆರ್‌ಎಂವಿ 2ನೇ ಹಂತದಲ್ಲಿರುವ ವಿನಾಯಕ ಲೇಔಟ್‌ನಲ್ಲಿ “ಬಾಕ್ಯೂರ್ ಎಕ್ಸಾಮ್’ ಹೆಸರಿನಲ್ಲಿ ಮೆಡಿಕಲ್ ಸೀಟ್ ಕನ್ಸಲ್ಟೆಂಟ್ ಕಚೇರಿ ತೆರೆದಿದ್ದ. ತನ್ನ ಪರಿಚಯಸ್ಥರಿಗೆ ಬೆಂಗಳೂರು ಹಾಗೂ ಇತರೆಡೆ “ಡಿ-ಫಾರ್ಮ್’ ಸೀಟು ಕೊಡಿಸುವುದಾಗಿ ಹೇಳಿಕೊಂಡಿದ್ದ.
ಈ ಮಧ್ಯೆ ಎರಡು ವರ್ಷಗಳ ಹಿಂದೆ ಹೆಚ್ಚಿನ ವ್ಯಾಸಂಗ ಮಾಡಲು ಆಂಧ್ರಪ್ರದೇಶಕ್ಕೆ ಬಂದಿದ್ದ ಸೈಯ್ಯದ್ ಎಸ್ತಕಿಯನ್ನು ಆರೋಪಿ ಹುಸೈನಿ ಸ್ನೇಹಿತರೊಬ್ಬರ ಮೂಲಕ 2018ರ ಫೆಬ್ರವರಿಯಲ್ಲಿ ಪರಿಚಯಿಸಿಕೊಂಡಿದ್ದ. ಈ ವೇಳೆ ಎಸ್ತಕಿ ಆಂಧ್ರಪ್ರದೇಶದ ಯಾವುದಾದರೂ ಮೆಡಿಕಲ್ ಕಾಲೇಜಿನಲ್ಲಿ ಡಿ-ಫಾರ್ಮ್ ಕೋರ್ಸ್‌ಗೆ ಸೀಟು ಕೊಡಿಸುವಂತೆ ಕೇಳಿಕೊಂಡಿದ್ದು, ಈ ವೇಳೆ ಆರೋಪಿ ಸೀಟು ಕೊಡಿಸಲು 23 ಲಕ್ಷ ರೂ. ಕೊಡಬೇಕಾಗುತ್ತದೆ.
ಹಣ ನೀಡಿದರೆ ಆಂಧ್ರಪ್ರದೇಶದ ವೈಜಾಕ್‌ನಲ್ಲಿರುವ ಶ್ರೀನಿವಾಸ ರಾವ್ ಕಾಲೇಜ್ ಆಫ್ ಫಾರ್ಮಸಿ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಭರವಸೆ ನೀಡಿದ್ದ. ಇದನ್ನು ನಂಬಿದ ವಿದ್ಯಾರ್ಥಿ ಎಸ್ತಕಿ ಮುಂಗಡವಾಗಿ ಆರೋಪಿಗೆ ಹಂತ-ಹಂತವಾಗಿ 8.50 ಲಕ್ಷ ರೂ. ಅನ್ನು ವರ್ಗಾವಣೆ ಮಾಡಿದ್ದಾನೆ. ಆದರೆ, ಆರೋಪಿ ಸೀಟು ಕೊಡಿಸಿಲ್ಲ. ಈ ಬಗ್ಗೆ ಹಲವಾರು ಬಾರಿ ಪ್ರಶ್ನಿಸಿದರೆ ಇಲ್ಲದ ಸಬೂಬು ಹೇಳುತ್ತಿದ್ದ.
ಇದರಿಂದ ಬೇಸತ್ತ ವಿದ್ಯಾರ್ಥಿ ಆಂಧ್ರಪ್ರದೇಶದ ವೆಂಕಟೇಶ್ವರ ಕಾಲೇಜ್ ಆಫ್ ಫಾರ್ಮಸಿಯಲ್ಲಿ “ಡಿ-ಫಾರ್ಮ್’ ಕೋರ್ಸ್‌ಗೆ ಸೇರಿಕೊಂಡಿದ್ದ ಎಂದು ಪೊಲೀಸರು ಹೇಳಿದರು. ಬಳಿಕ ಆರೋಪಿ ಹುಸೈನಿಗೆ ಕರೆ ಮಾಡಿದ ವಿದ್ಯಾರ್ಥಿ ಎಸ್ತಕಿ, ಹಣ ಹಿಂದಿರುಗಿಸುವಂತೆ ಕೇಳಿಕೊಂಡಿದ್ದಾನೆ. 2018ರ ಆಗಸ್ಟ್‌ನಲ್ಲಿ ಕೊಡುವುದಾಗಿ ಹೇಳಿದ್ದ ಆರೋಪಿ, ಬಳಿಕ ಮೊಬೈಲ್ ಸಂಖ್ಯೆ ಬದಲಾಯಿಸಿದ್ದ.
ಹೀಗಾಗಿ 2018ರ ಡಿ.6ರಂದು ವಿದ್ಯಾರ್ಥಿ ನೇರವಾಗಿ ಭೂಪಸಂದ್ರದಲ್ಲಿರುವ ಕಚೇರಿಗೆ ಬಂದು ಹಣ ಕೇಳಿದಾಗ, ಆರೋಪಿ ಕಚೇರಿ ಸಿಬ್ಬಂದಿಯಿಂದ ವಿದ್ಯಾರ್ಥಿಯನ್ನು ಹೊರಗಟ್ಟಿದ್ದಲ್ಲದೆ, ಜೀವ ಬೆದರಿಕೆ ಹಾಕಿದ್ದ. ಈ ಸಂಬಂಧ ವಿದ್ಯಾರ್ಥಿ ಸಂಜಯ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ.ಈ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.